ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯ್ತಿಗೆ ಆಡಳಿತಾಧಿಕಾರಿ ನೇಮಕಗೊಂಡು ಬಂದ ನಂತರ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಗ್ರಾಮ ಪಂಚಾಯ್ತಿಯ ಅಲ್ಲಲ್ಲಿ ಹೊಸ ಬದಲಾವಣೆಗಳು ಕಂಡುಬರಲಾರಂಭಿಸಿವೆ. ಪಂಚಾಯ್ತಿ ಆಡಳಿತಾಧಿಕಾರಿ ಕೆ.ಎಂ.ಲೋಕೇಶ್ ಸ್ವಚ್ಛತೆಗೆ ಹೊಸ ಮೆರುಗನ್ನು ನೀಡುತ್ತಾ ಎಲ್ಲರ ಗಮನಸೆಳೆದಿದ್ದಾರೆ.
ಬಸ್ ನಿಲ್ದಾಣದಲ್ಲಿ ಪುಸ್ತಕದ ಗೂಡು, ಸದಾ ಕಸದ ರಾಶಿಯಿಂದ ತುಂಬಿರುತ್ತಿದ್ದ ಸ್ಥಳಗಳನ್ನು ವಿಶ್ರಾಂತಿಯ ತಾಣವಾಗಿ ಪರಿವರ್ತನೆ, ಗಿಡಗಳನ್ನು ನೆಟ್ಟು ಹಸಿರೀಕರಣ, ಬಸ್ ನಿಲ್ದಾಣಕ್ಕೆ ಹೊಸತನದ ಸ್ಪರ್ಶ ನೀಡಿ ಎಲ್ಲವನ್ನೂ ಆಕರ್ಷಣೆಯ ಸ್ಥಳಗಳನ್ನಾಗಿ ರೂಪಾಂತರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಕೆ.ಎಂ.ಲೋಕೇಶ್ ಅವರು ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಯಾಗಿ ನೇಮಕಗೊಂಡ ನಂತರ ಪಂಚಾಯ್ತಿಯೊಳಗೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲು ಆರಂಭಿಸಿದರು. ಕಸ ಬೀಳುತ್ತಿದ್ದ ಸ್ಥಳಗಳಲ್ಲಿ ಸೀಸಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರ ಮೇಲೆ ಹದ್ದಿನ ಕಣ್ಣಿಟ್ಟರು. ಕಸ ಹಾಕಿದವರಿಗೆ ದಂಡ ಪ್ರಯೋಗ ಮಾಡುವ ಎಚ್ಚರಿಕೆ ನೀಡಿದರು. ನಂತರ ಆ ಸ್ಥಳಗಳಲ್ಲಿ ಕಸ ಬೀಳುವುದು ನಿಂತಿತು.
ಪಂಚಾಯ್ತಿ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ನಗರ ಎಂಟನೇ ಕ್ರಾಸ್ ಹಾಗೂ ಕ್ಯಾತುಂಗೆರೆ ರಸ್ತೆಯಿಂದ ಅನ್ನಪೂರ್ಣೇಶ್ವರಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ಕಸ ಬೀಳುತ್ತಿದ್ದ ಸ್ಥಳಗಳನ್ನು ಅತ್ಯಾಕರ್ಷಕ ವಿನ್ಯಾಸದೊಂದಿಗೆ ಕಲ್ಲುಗಳನ್ನು ಜೋಡಿಸಿ, ಕಲ್ಲಿನ ಬೆಂಚುಗಳನ್ನು ಅಳವಡಿಸಿ ವೃತ್ತಾಕಾರದ ಸಿಮೆಂಟ್ ರಿಂಗ್‌ಗಳ ಒಳಗೆ ಗಿಡಗಳನ್ನು ನೆಟ್ಟು ನೆಮ್ಮದಿಯ ತಾಣಗಳನ್ನಾಗಿ ಬದಲಾಯಿಸಿದರು.
ಅವ್ಯವಸ್ಥಿತ ರೀತಿಯಲ್ಲಿದ್ದ ಕ್ಯಾತುಂಗೆರೆ ಬಸ್ ನಿಲ್ದಾಣಕ್ಕೆ ಹೊಸದಾಗಿ ಬಣ್ಣ ಹೊಡೆಸಿದರು. ನಿಲ್ದಾಣದೊಳಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಓದಲು ಅನುಕೂಲವಾಗುವಂತೆ ಪ್ರತ್ಯೇಕ ರಾಕ್‌ನಲ್ಲಿ ದಿನಪತ್ರಿಕೆಗಳು ಹಾಗೂ ಕಬ್ಬಿಣದ ಬೀರುವಿನಲ್ಲಿ ಪುಸ್ತಕಗಳನ್ನಿಟ್ಟು ಓದುವ ಸಂಸ್ಕೃತಿಯನ್ನು ಬೆಳೆಸುವುದಕ್ಕೆ ನಾಂದಿ ಹಾಡಿದ್ದಾರೆ. ಜಗತ್ತನ್ನು ಬೆಳಗಿಸಲು ಒಬ್ಬ ಸೂರ್ಯ ಸಾಕು, ಬದುಕನ್ನು ಬೆಳಗಿಸಲು ಒಂದು ಪುಸ್ತಕ ಸಾಕು ಎಂಬ ಘೋಷವಾಕ್ಯದೊಂದಿಗೆ ಪುಸ್ತಕದ ಮಹತ್ವವನ್ನು ಸಾರಿದ್ದಾರೆ.
ಕ್ಯಾತುಂಗೆರೆಯಿಂದ ಕಾರಸವಾಡಿಗೆ ಹೋಗುವ ರಸ್ತೆಯುದ್ದಕ್ಕೂ ವಿವಿಧ ಜಾತಿಯ ಮರಗಳನ್ನು ನೆಟ್ಟು ಹಸಿರೀಕರಣಗೊಳಿಸುವ ಕಾರ್ಯ ಕೈಗೊಂಡಿದ್ದಾರೆ. ಪಂಚಾಯ್ತಿ ವ್ಯಾಪ್ತಿಯೊಳಗೆ ಸುಮಾರು ೩೦೦ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಿದ್ದಾರೆ. ಈಗಾಗಲೇ ಗಿಡ ನೆಡುವ ಕಾರ್ಯವೂ ಸಮರೋಪಾದಿಯಲ್ಲಿ ಸಾಗಿದೆ. ಗಿಡಗಳನ್ನು ನೆಡುವುದಷ್ಟೇ ಅಲ್ಲದೆ ಅವುಗಳನ್ನು ಬೆಳೆಸುವ ಜವಾಬ್ದಾರಿಯನ್ನು ಪಂಚಾಯ್ತಿಯಿಂದಲೇ ನಿರ್ವಹಿಸಲು ಕೆ.ಎಂ.ಲೋಕೇಶ್ ಅವರು ಮುಂದಾಗಿದ್ದಾರೆ.ಪಂಚಾಯ್ತಿ ವ್ಯಾಪ್ತಿಯೊಳಗೆ ಸ್ವಚ್ಛತೆ ಕಾಪಾಡುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿರುವ ಕೆ.ಎಂ.ಲೋಕೇಶ್ ವಿಭಿನ್ನ ಪ್ರಯೋಗಗಳೊಂದಿಗೆ ಸ್ವಚ್ಛತೆಯಲ್ಲಿ ಕ್ರಾಂತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪಂಚಾಯ್ತಿಯೊಳಗೆ ಹೊಸ ಬದಲಾವಣೆಯನ್ನು ತರುವ ಸಂಕಲ್ಪದೊಂದಿಗೆ ಹೊಸತನವನ್ನು ಜನರಿಗೆ ಪರಿಚಯಿಸುತ್ತಿದ್ದಾರೆ. ಇದಕ್ಕೆ ಜನರೂ ಸಹ ಕೈಜೋಡಿಸಿ ಸ್ವಚ್ಛತೆ ಕಾಪಾಡುವುದಕ್ಕೆ ಸಹಕಾರ ನೀಡುವುದು ಅಗತ್ಯವಾಗಿದೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು ಹಸಿರಿನಿಂದ ಕೂಡಿರಬೇಕು. ಕಸ ಎಲ್ಲಿಯೂ ಬೀಳದಂತೆ ಎಚ್ಚರ ವಹಿಸುವುದು. ಜನರನ್ನೂ ಜಾಗೃತಗೊಳಿಸಿ ಸ್ವಚ್ಛತೆಯನ್ನು ನಿರಂತರವಾಗಿ ಕಾಯ್ದುಕೊಳ್ಳುವುದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಕಸ ಬೀಳುವ ಸ್ಥಳಗಳನ್ನು ಸೌಂದರ್ಯೀಕರಣಗೊಳಿಸಿದರೆ ಮತ್ತೆ ಅಲ್ಲಿ ಕಸ ಬೀಳುವುದಿಲ್ಲ. ಬಸ್ ನಿಲ್ದಾಣಕ್ಕೂ ಹೊಸ ಕಾಯಕಲ್ಪ ನೀಡಲಾಗಿದೆ. ಜನರು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.- ಕೆ.ಎಂ.ಲೋಕೇಶ್, ಆಡಳಿತಾಧಿಕಾರಿ, ಬೇವಿನಹಳ್ಳಿ ಗ್ರಾಪಂ