ಸಾರಾಂಶ
ಚನ್ನಪಟ್ಟಣ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನ್ನ ತಮ್ಮನ ಸೋಲಾಗಿದೆ. ನಾವು ಮಾಡಿದ ತಪ್ಪಿನಿಂದ ಸೋಲಾಗಿದ್ದು, ಇದನ್ನು ಸ್ವೀಕರಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಮತ ನೀಡಿದ ಚನ್ನಪಟ್ಟಣದ ಮತದಾರಿಗೆ ಕೋಟಿ ನಮನಗಳು. ರಾಮನ ಭಂಟ ಹನುಮಂತ. ಇಂದು ಇಲ್ಲಿನ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಿಂದ ನನ್ನ ರಾಜಕೀಯದ ಹೊಸ ಅಧ್ಯಾಯ ಪ್ರಾರಂಭ ಮಾಡಲು ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ನುಡಿದರು.
ತಾಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ತಮ್ಮನ ಸೋಲಿನ ಕುರಿತು ಬೇಸರವಿಲ್ಲ. ನಮ್ಮ ತಪ್ಪಿನಿಂದಲೇ ಸೋಲಾಗಿದ್ದು, ತಪ್ಪನ್ನ ತಿದ್ದಿಕೊಳ್ಳುವ ಕೆಲಸ ಮಾಡುತ್ತೇನೆ. ನಾನು ರಾಜಕೀಯ ಆರಂಭಿಸಿದ್ದು ಇದೇ ಚನ್ನಪಟ್ಟಣದ ಭಾಗವಾಗಿದ್ದ ನನ್ನ ಸಾತನೂರಿನಿಂದ. ಚನ್ನಪಟ್ಟಣದ ಒಂದು ಹೋಬಳಿ ಸಾತನೂರು ಕ್ಷೇತ್ರಕ್ಕೆ ಸೇರಿತ್ತು. ಇಲ್ಲಿನ ಜನ ನನ್ನನ್ನ ಬಹಳ ಪ್ರೀತಿಯಿಂದ ಹೆಚ್ಚು ಮತ ಕೊಟ್ಟಿದ್ದರು. ನಾಲ್ಕು ಬಾರಿ ಸತತವಾಗಿ ಸಾತನೂರಿನಿಂದ ಗೆಲುವು ಸಾಧಿಸಲು ನೆರವಾಗಿದ್ದರು. ಕ್ಷೇತ್ರ ಮರುವಿಂಗಡನೆಯಾಗಿ ಕ್ಷೇತ್ರ ಬಿಟ್ಟಾಗ ನನಗೆ ಬಹಳ ನೋವಾಗಿತ್ತು. ಆಗ ನಾನು ಬೆಳೆಸಿದ ಶಕ್ತಿಯಿಂದ ಆ ಭಾಗದಲ್ಲಿ ಹೆಚ್ಚು ಮತಗಳು ಪಡೆದು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರು.ಚನ್ನಪಟ್ಟಣದ ಜನತೆ ನನ್ನನು ಬಹಳ ಪ್ರೀತಿಯಿಂದ ಕಾಣುತ್ತಿದ್ದು, ಜಾತ್ಯಾತೀತವಾಗಿ ನನ್ನನ್ನು ಬೆಂಬಲಿಸಿದ್ದಾರೆ. ರೈತರು, ವರ್ತಕರು ಸೇರಿದಂತೆ ಎಲ್ಲ ವರ್ಗದ ಪ್ರಜ್ಞಾವಂತರಿದ್ದಾರೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಕೇವಲ ೧೬ ಸಾವಿರ ಮತಗಳು ಬಂದಿದ್ದವು. ಆಗ ನನಗೆ ಯಾಕೆ ಹೀಗಾಯ್ತು ಅಂತ ಬೇಜಾರಾಗಿತ್ತು. ಬಳಿಕ ಲೋಕಸಭಾ ಚುನಾವಣೆಯಲ್ಲಿ ೮೫ಸಾವಿರ ಮತಗಳನ್ನ ನೀಡಿದ್ದೀರಿ. ಕ್ಷೇತ್ರದ ಜನತೆ ಸಹಾಯ ಮಾಡಿದ್ದೀರಿ. ಕೊನೆಗೆ ಅಂತಿಮವಾಗಿ ನಿಮ್ಮ ಖುಣ ತೀರಿಸಲು ಬಂದಿದ್ದೇನೆ ಎಂದು ಹೇಳಿದರು.
ಕನಕಪುರವನ್ನ ನೀವು ನೋಡಿದ್ದೀರಿ, ಅಲ್ಲಿಯ ಬದಲಾವಣೆ ಗಮನಿಸಿದ್ದೀರಿ. ಹಾಗಾಗಿ ನಿಮ್ಮ ಖುಣ ತೀರಿಸಬೇಕು. ಚನ್ನಪಟ್ಟಣದಲ್ಲಿ ಬದಲಾವಣೆ ತರಬೇಕು ಅಂತ ಬಂದಿದ್ದೇನೆ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಇಲ್ಲಿ ಬೆಂಗಳೂರಿನ ರೀತಿಯಲ್ಲಿ ಅಭಿವೃದ್ಧಿ ಆಗಬೇಕು ಎಂದು ತಿಳಿಸಿದರು.ಇಂದು ಕ್ಷೇತ್ರದ ಎಲ್ಲಾ ದೇವಾಲಯಕ್ಕೂ ಭೇಟಿ ನೀಡಿ ದೇವರ ಅನುಗ್ರಹ ಪಡೆಯುತ್ತಿದ್ದೇನೆ. ನಾನು ಬಂದಾಗ ನೀವೆಲ್ಲ ಬಂದು ಅದ್ಧೂರಿಯಾಗಿ ಸ್ವಾಗತ ಮಾಡಿದ್ದೀರಾ. ನಾನು ಧೈರ್ಯ ಕಳೆದುಕೊಳ್ಳುವವನಲ್ಲ. ಹೋರಾಟ ಮಾಡುವವನು. ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಪ್ರತಿ ಪಂಚಾಯ್ತಿ ಪ್ರವಾಸ ಮಾಡ್ತೇನೆ. ಇಲ್ಲಿನ ಅಭಿವೃದ್ಧಿಗೆ ಹೊಸ ರೂಪ ಕೊಡಬೇಕು. ಚನ್ನಪಟ್ಟಣವನ್ನ ಚಿನ್ನದ ನಾಡನ್ನಾಗಿ ಪರಿವರ್ತನೆ ಮಾಡಬೇಕು. ನಾನು ಈಗಾಗಲೇ ಅಧಿಕಾರಿಗಳ ಬಳಿ ಮಾತನಾಡಿದ್ದೇನೆ ಎಂದು ತಿಳಿಸಿದರು.
ನನ್ನ ರಾಜಕೀಯ ಜೀವನದ ಬದಲಾವಣೆ ಆಗಿದ್ದೇ ಚನ್ನಪಟ್ಟಣದಿಂದ. ಈ ಭೂಮಿ ಋಣ, ಅನ್ನದ ಋಣ, ತಾಯಿ ಋಣ ತೀರಿಸುವ ಕೆಲಸ ಮಾಡಬೇಕು. ಹಾಗಾಗಿ ಚನ್ನಪಟ್ಟಣದ ಋಣ ತೀರಿಸುವ ಸಮಯ ಬಂದಿದೆ. ಈಗ ಇಲ್ಲಿ ವಿಧಾನಸಭಾ ಕ್ಷೇತ್ರ ಖಾಲಿಯಾಗಿದೆ. ಇಲ್ಲಿ ನಮ್ಮ ಪಕ್ಷದಿಂದ ಯಾರೇ ನಿಂತರೂ ನನ್ನ ಮುಖ ನೋಡಿ. ನನ್ನ ಮೇಲೆ ಜವಾಬ್ದಾರಿ ಇದೆ ಎನ್ನುವ ಮೂಲಕ ಚನ್ನಪಟ್ಟಣ ಕ್ಷೇತ್ರದ ಸ್ಪರ್ಧೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.ಈ ವೇಳೆ ವಿಧಾನಪರಿಷತ್ ಸದಸ್ಯ ಎಸ್.ರವಿ, ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ, ಕೆಪಿಸಿಸಿ ಕಾರ್ಯದರ್ಶಿ ದುಂತೂರು ವಿಶ್ವನಾಥ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾವಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್, ಮುಖಂಡರಾದ ಡಿ.ಕೆ.ಕಾಂತರಾಜು, ರಂಗನಾಥ್ ಇತರರಿದ್ದರು.
ಬಾಕ್ಸ್ಚನ್ನಪಟ್ಟಣದಿಂದ ಸ್ಪರ್ಧೆ ಕುರಿತು ಪರೋಕ್ಷ ಪ್ರಸ್ತಾಪ
ಕೆಂಗಲ್ ಆಂಜನೇಯಸ್ವಾಮಿ ಸನಿಧಿಯಿಂದಲೇ ನನ್ನ ರಾಜಕೀಯದ ಹೊಸ ಅಧ್ಯಯ ಪ್ರಾರಂಭ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ಬೊಂಬೆನಾಡಿನಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದು, ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಕ್ಷೇತ್ರ ಉಪಚುನಾವಣೆಯಲ್ಲಿ ತಾವೇ ಸ್ಪರ್ಧಿಸುವ ಕುರಿತು ನೀಡಿದ ಪರೋಕ್ಷ ಸಂದೇಶ ಎಂದು ವ್ಯಾಖ್ಯಾನಿಸಲಾಗುತ್ತಿದೆ.ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಮನ ಭಂಟ ಆಂಜುನೇಯ ದೇವಾಲಯಕ್ಕೆ ಬಂದಿದ್ದೇನೆ. ಆಂಜುನೇಯ ಸಮಾಜ ಸೇವೆಯ ಪ್ರತೀಕ. ಎಲ್ಲೆಡೆ ಆಂಜನೇಯಸ್ವಾಮಿಯ ದೇಗುಲಗಳಿವೆ. ಅಂತೆಯೇ ಕೆಂಗಲ್‌ನಲ್ಲೂ ಆಂಜನೇಯನ ದೇವಾಲಯವಿದೆ. ನಾನು ದೇಗುಲದ ಸನಿಧಿಯಲ್ಲಿಯೇ ನನ್ನ ರಾಜಕೀಯದ ಹೊಸ ಅಧ್ಯಾಯ ಪ್ರಾರಂಭ ಮಾಡಲು ಬಂದಿದ್ದೇನೆ ಎಂದರು. ಅವರ ಈ ಹೇಳಿಕೆ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಪರೋಕ್ಷ ಹೇಳಿಕೆ ಎಂದೇ ಬಿಂಬಿತವಾಗಿದೆ.