ಸಾರಾಂಶ
ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಪಟ್ಟಣದಲ್ಲಿ ಮಾದಿಗ ಸಮಾಜದ ಭೀಮಸೈನಿಕರು ವಿನೂತನವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣ ದ ಬಳಿ ಜಮಾವಣೆಗೊಂಡ ಮಾದಿಗ ಸಮಾಜದ ಮುಖಂಡರು ಕೊರಳಿಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಭಾವಚಿತ್ರವನ್ನು ಹಾಕಿಕೊಂಡು ಅದಕ್ಕೆ ಚಪ್ಪಲಿ ಹಾಕಿ, ಕೈಯಲ್ಲಿ ಮಡಿಕೆ ಹಿಡಿದು, ತಮಟೆ ಬಾರಿಸುತ್ತಾ ಮತ ಭಿಕ್ಷೆ ಪ್ರತಿಭಟನೆ ಆರಂಭಿಸಿದರು.
ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.ಸಂಪೂರ್ಣ ಒಳ ಮೀಸಲಾತಿ ಜಾರಿಗೊಳಿಸುವ ಸಂಬಂಧ ಸಚಿವ ಮಹದೇವಪ್ಪ ಅವರೇ ಅಡ್ಡಗಾಲು ಹಾಕುವ ಮೂಲಕ ತಮ್ಮ ಸಮಾಜಕ್ಕೆ ಮಾತ್ರವೇ ಅನುಕೂಲ ಕಲ್ಪಿಸಿಕೊಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿ ಬಂತು.
ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಎನ್. ರಾಚಯ್ಯ ಸ್ಮಾರಕ ಮೈದಾನಕ್ಕೆ ತೆರಳುತ್ತಿದ್ದ 20ಕ್ಕೂ ಹೆಚ್ಚು ಭೀಮ ಸೈನಿಕರನ್ನು ಪೊಲೀಸರು ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಪಡೆದುಕೊಂಡರು.ಪ್ರತಿಭಟನೆ ನಡೆಸುವ ಸುಳಿವು ಪೊಲೀಸರಿಗೆ ಮೊದಲೇ ತಿಳಿದಿದ್ದ ಹಿನ್ನೆಲೆ ಪಟ್ಟಣಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸರ ಕಣ್ತಪ್ಪಿಸಿ ಪ್ರತಿಭಟನಾನಿರತರು ಮಹದೇವಪ್ಪರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಎನ್. ರಾಚಯ್ಯ ಸಮಾದಿ ಸ್ಥಳದ ಬಳಿ ಪ್ರತಿಭಟನೆ ನಡೆಸಲು ಮುಂದಾದ ಭಾಸ್ಕರ್ ಪ್ರಸಾದ್, ಮರಡೀಪುರ ರವಿಕುಮಾರ್, ಸರಗೂರು ಪುಟ್ಟಣ್ಣ, ಗೋಪಾಲಪುರ ಮಂಜುನಾಥ್ ಸೇರಿದಂತೆ 20 ಮಂದಿ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ನಂಜನಗೂಡಿನ ಡಾ. ಅಂಬೇಡ್ಕರ್ ಭವನಕ್ಕೆ ಕರೆದೊಯ್ದರು.