ಮಾಲೂರು ನಂಜೇಗೌಡ ಶಾಸಕತ್ವ ರದ್ದು : ಹೈ ಆದೇಶಕ್ಕೆ ಸುಪ್ರೀಂ ತಡೆ

| N/A | Published : Oct 15 2025, 04:49 AM IST

KY Nanjegowda

ಸಾರಾಂಶ

ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಅವರ ಶಾಸಕ ಸ್ಥಾನ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಚುನಾವಣಾ ಆಯೋಗಕ್ಕೆ ಮರುಮತ ಎಣಿಕೆ ಮಾಡುವಂತೆ ಮಹತ್ವದ ಸೂಚನೆ ನೀಡಿದೆ.

 ನವದೆಹಲಿ : ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಅವರ ಶಾಸಕ ಸ್ಥಾನ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಚುನಾವಣಾ ಆಯೋಗಕ್ಕೆ ಮರುಮತ ಎಣಿಕೆ ಮಾಡುವಂತೆ ಮಹತ್ವದ ಸೂಚನೆ ನೀಡಿದೆ.

ಶಾಸಕ ಸ್ಥಾನ ರದ್ದು ಮಾಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ನಂಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ನ್ಯಾ.ಸೂರ್ಯಕಾಂತ್‌ ಹಾಗೂ ನ್ಯಾ.ಜೊಯಮಲ್ಯ ಬಾಗ್ಚಿ ಅವರ ಪೀಠದಿಂದ ಮಂಗಳವಾರ ವಿಚಾರಣೆ ನಡೆಸಲಾಯಿತು. ಈ ವೇಳೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದ ಮತ ಎಣಿಕೆಯಲ್ಲಿ ಅಕ್ರಮ ಪ್ರಕರಣದಲ್ಲಿ ಸೆ.16 ರಂದು ಹೈಕೋರ್ಟ್‌ ಕಾಂಗ್ರೆಸ್‌ ಶಾಸಕ ನಂಜೇಗೌಡ ಆಯ್ಕೆಯನ್ನು ರದ್ದುಪಡಿಸಿತ್ತು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಂಜೇಗೌಡರಿಗೆ ಒಂದು ತಿಂಗಳ ಅವಕಾಶ ನೀಡಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

4 ವಾರದಲ್ಲಿ ಮರು ಎಣಿಕೆಗೆ ಸೂಚನೆ:

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಮರು ಮತ ಎಣಿಕೆ ಮಾಡುವಂತೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್‌, ಫಲಿತಾಂಶವನ್ನು ಯಾವುದೇ ಕಾರಣಕ್ಕೂ ಪ್ರಕಟ ಮಾಡದೇ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸುವಂತೆ ತಿಳಿಸಿದೆ. ಮರು ಎಣಿಕೆ ನಡೆಸಿ ಅದರ ಫಲಿತಾಂಶ ಬರುವವರೆಗೂ ನಂಜೇಗೌಡ ಅವರು ಶಾಸಕ ಸ್ಥಾನ ಅಬಾಧಿತ ಎಂದು ಹೇಳಿರುವ ಕೋರ್ಟ್‌, ಪ್ರಕರಣದ ವಿಚಾರಣೆಯನ್ನು 4 ವಾರ ಮುಂದೂಡಿದೆ.

ನಂಜೇಗೌಡ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

ನ್ಯಾಯ ಸಿಕ್ಕಿದ್ದು, ಸಂತೋಷವಾಗಿದೆ. ಹೈಕೋರ್ಟ್‌ನಲ್ಲಿ‌ ಕೇಸ್ ಹಾಕಿದಾಗ ‘ಮರು ಮತ ಎಣಿಕೆಗೆ ನಾನು ಬೇಡ ಅನ್ನಲ್ಲ’ ಎಂದು ಬಿಜೆಪಿ ಅಭ್ಯರ್ಥಿಗೆ ಹೇಳಿದ್ದೆ. ಶಾಸಕ ಸ್ಥಾನ ಅಸಿಂಧು ಅಂತ ಹೈಕೋರ್ಟ್‌ ಆದೇಶವಾದಾಗ ಸುಪ್ರೀಂ ಕೋರ್ಟ್ ಬಂದೆ. ಈಗ ಸುಪ್ರೀಂ ಕೋರ್ಟ್‌ನಲ್ಲಿ ಮರು ಮತ ಎಣಿಕೆಗೆ ಸೂಚಿಸಿದ್ದು, ಅದರಲ್ಲೂ ನಾನು ಗೆಲ್ಲುತ್ತೆನೆ.

- ಕೆ.ವೈ.ನಂಜೇಗೌಡ, ಕಾಂಗ್ರೆಸ್‌ ಶಾಸಕ

ನಂಜೇಗೌಡ ಅವರ ಶಾಸಕ ಸ್ಥಾನ ಅಸಿಂಧುಗೆ ಸುಪ್ರೀಂ ಕೋರ್ಟ್‌ 4 ವಾರ ತಡೆ ನೀಡಿದ್ದು, ಮರು ಮತ ಎಣಿಕೆಗೆ ಆದೇಶ ಮಾಡಿದೆ. ನಮಗೆ ಕೇವಲ ಮಾರ್ಜಿನ್ ಬಗ್ಗೆ ಅನುಮಾನವಿತ್ತು. ವಿಡಿಯೋ ಗ್ರಾಫ್ ಕೇಳಿದ್ರೆ ಕೊಟ್ಟಿಲ್ಲ. ಆರ್‌ಒ ನಮ್ಮ ಅರ್ಜಿಯನ್ನು ಪೆಂಡಿಂಗ್ ಇಟ್ಟಿದ್ದರು. ನಮಗೆ ಜಯ ಸಿಗುತ್ತೆ ಅನ್ನೋ ವಿಶ್ವಾಸವಿದೆ.

- ಮಂಜುನಾಥಗೌಡ, ಮಾಲೂರು ಬಿಜೆಪಿ ಅಭ್ಯರ್ಥಿ

Read more Articles on