ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೆಎಫ್‌ಡಿಗೆ ಹೊಸ ಲಸಿಕೆ ಪ್ರಕ್ರಿಯೆಯಲ್ಲಿದ್ದು, ಮುಂದಿನ ಅವಧಿಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಣದೀಪ್ ಹೇಳಿದರು.ನಗರದ ಜಿಲ್ಲಾ ಆರೋಗ್ಯ ಹಾಗು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಶನಿವಾರ ಮಂಗನ ಕಾಯಿಲೆ ಕುರಿತು ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿ, ವಾಡಿಕೆಯಂತೆ ಈ ವರ್ಷವೂ ಮೂರು ಜಿಲ್ಲೆಗಳಲ್ಲಿ ಪ್ರಕರಣಗಳು ಕಾಣಿಸಿಕೊಂಡಿವೆ. ಒಟ್ಟು 2,288 ಮಂದಿಗೆ ಕೆಎಫ್‌ಡಿ ಪರೀಕ್ಷೆ ನಡೆಸಲಾಗಿದೆ ಎಂದರು.
ಶಿವಮೊಗ್ಗದಲ್ಲಿ 12, ಉತ್ತರ ಕನ್ನಡ 34 ಹಾಗೂ ಚಿಕ್ಕಮಗಳೂರಿನಲ್ಲಿ 3 ಸೇರಿ ಒಟ್ಟು 49 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಪಾಸಿಟಿವ್ ಪ್ರಕರಣಗಳ ಪೈಕಿ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಂದು ಮರಣ ಸಂಭವಿಸಿದೆ. ಕೆಎಫ್‌ಡಿ ಪೀಡಿತ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರ ಪ್ರಕರಣಗಳು ಕಂಡುಬಂದಲ್ಲಿ ಕೆಎಫ್‌ಡಿ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.ಕೆಎಫ್‌ಡಿ ಪ್ರಸರಣ ಸಾಮಾನ್ಯವಾಗಿ ಜನವರಿ ಯಿಂದ ಮಾರ್ಚ್‌ವರೆಗೆ ಇದ್ದು, ಈ ವೇಳೆ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪವಿಭಾಗೀಯ ಆಸ್ಪತ್ರೆ ಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಬೇಕು. ಜೊತೆಗೆ ಅಗತ್ಯ ಔಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು. ವೈದ್ಯರು ಸೋಂಕಿತರಿಗೆ ಎಬಿಎಆರ್‌ಕೆ ಅಡಿ ರೆಫರ್ ಮಾಡಿ ಉಚಿತ ಚಿಕಿತ್ಸೆ ಕೊಡಿಸಬೇಕು. ಜನರಲ್ಲಿ ಕಾಯಿಲೆ ಕುರಿತು ಅರಿವು ಹೆಚ್ಚಿಸಲು ಮಾಹಿತಿ, ಶಿಕ್ಷಣ ಸಂವಹನ ಚಟುವಟಿಕೆಗಳನ್ನು ಮಾಡುವಂತೆ ಸೂಚನೆ ನೀಡಿದರು.
ಮಂಗನ ಕಾಯಿಲೆ ವೈರಾಣು ಸೋಂಕಿತ ಉಣ್ಣಿ ಕಚ್ಚುವುದರಿಂದ ಹರಡುವ ವೈರಲ್ ಜ್ವರವಾಗಿದ್ದು, ಜನರು ಕಾಡಿಗೆ ಹೋಗುವ ಮುನ್ನ ಸರ್ಕಾರದ ವತಿಯಿಂದ ನೀಡಲಾಗುವ ಡಿಇಪಿಎ ತೈಲವನ್ನು ಲೇಪಿಸಿಕೊಂಡು ಹೋಗಲು ಸೂಚನೆ ನೀಡಬೇಕು. ಪ್ರಸ್ತುತ ಜಿಲ್ಲೆಯಲ್ಲಿ 50 ಸಾವಿರ ಬಾಟಲ್ ಲಭ್ಯವಿದೆ. ವಿತರಕರ ಬಳಿ ಇರುವುದು ಸೇರಿ ಒಟ್ಟು 80 ಸಾವಿರ ದಾಸ್ತಾನಿದೆ. ಒಂದು ಕುಟುಂಬಕ್ಕೆ ತಿಂಗಳಿಗೆ 4 ಬಾಟಲಿಯಂತೆ 5 ತಿಂಗಳಿಗೆ ನೀಡಬೇಕು. ಟೆಲಿ ಐಸಿಯು ವ್ಯವಸ್ಥೆಯಲ್ಲಿ ತಜ್ಞ ವೈದ್ಯರ ತಂಡವಿದ್ದು, ಶೀಘ್ರದಲ್ಲೇ ಅದರ ಉಪಯೋಗವನ್ನು ಈ ಕಾಯಿಲೆಗಗೂ ನೀಡಲಾಗುವುದು ಎಂದರು.ಸಭೆಗೂ ಮುನ್ನ ಆಯುಕ್ತರು ವೈರಸ್ ಡಯಾಗ್ನಸ್ಟಿಕ್ ಲ್ಯಾಬ್ (ವಿಡಿಎಲ್) ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿ, ಸಿಬ್ಬಂದಿ ಜತೆ ಚರ್ಚಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಪುಷ್ಪಲತ, ಸಿಎಂಡಿ ಜಂಟಿ ನಿರ್ದೇಶಕರಾದ ಡಾ.ತ್ರಿವೇಣಿ, ವಿಡಿಎಲ್ ಉಪನಿರ್ದೇಶಕ ಡಾ.ರಘುನಂದನ್, ಡಿಎಚ್ಒ ಡಾ.ರಾಜೇಶ್ ಸುರಗಿಹಳ್ಳಿ ಮತ್ತಿತರರು ಇದ್ದರು.- - - -3ಎಸ್‌ಎಂಜಿಕೆಪಿ07:
ಶಿವಮೊಗ್ಗದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಶನಿವಾರ ಮಂಗನ ಕಾಯಿಲೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು.;Resize=(128,128))
;Resize=(128,128))
;Resize=(128,128))
;Resize=(128,128))