ಆರಂಭದಲ್ಲೇ ಹಳ್ಳಹಿಡಿದ ಕೂಸಿನ ಮನೆ ಯೋಜನೆ

| Published : Feb 04 2024, 01:31 AM IST

ಸಾರಾಂಶ

ಪ್ರತಿನಿತ್ಯ ಕೂಲಿ ಕೆಲಸಕ್ಕೆ ತೆರಳುವ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ, ಅಂತಹ ಮಕ್ಕಳನ್ನು ನೋಡಿಕೊಳ್ಳಲೆಂದೇ ಕೂಸಿನ ಮನೆ ತೆರೆಯಲಾಗಿದೆ. ಅಲ್ಲಿ ಮಕ್ಕಳ ಪೊಷಣೆಗೆ ಸರ್ಕಾರ ವ್ಯವಸ್ಥೆ ಮಾಡಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೂಲಿ ಕಾರ್ಮಿಕರ ಮಕ್ಕಳ ಲಾಲನೆ ಪಾಲನೆಗಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕೂಸಿನ ಮನೆ (ಶಿಶುಪಾಲನಾ ಕೇಂದ್ರ)ಗಳನ್ನು ತಾಲೂಕಿನ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಆರಂಭಿಸಿವೆ. ಆದರೆ ಆರಂಭಿಸಿರುವ ಕಡೆ ಮಕ್ಕಳಿಗೆ ಪೌಷ್ಟಿಕ ಆಹಾರದ ಪದಾರ್ಥಗಳ ಸರಬರಾಜು ಆಗಿಲ್ಲ. ಮತ್ತೊಂದು ಕಡೆ ಕೂಸಿನ ಮನೆಯಲ್ಲಿ ಕೂಸುಗಳೇ ಇಲ್ಲದೆ ಸರ್ಕಾರದ ಯೋಜನೆ ಆರಂಭದಲ್ಲೆ ಹಳ್ಳ ಹಿಡಿಯುವಂತಾಗಿದೆ.ಕೂಸಿನ ಮನೆ ಆರಂಭಿಸಲು ಸರ್ಕಾರ ಸೂಚಿಸಿ ಆರು ತಿಂಗಳಾಗಿದ್ದರೂ ತಾಲೂಕಿನ ೨೧ ಗ್ರಾಮ ಪಂಚಾಯ್ತಿಗಳಲ್ಲಿ ಪೈಕಿ ಬೆರಳೆಣಿಕೆಯಷ್ಟು ಗ್ರಾಪಂಗಳಲ್ಲಿ ಕೂಸಿನ ಮನೆ ಆರಂಭಿಸಲಾಗಿದೆ. ಕಳೆದ ಆಗಸ್ಟ್‌ನಲ್ಲೇ ಸೂಚನೆ ಕೂಲಿ ಕಾರ್ಮಿಕರ ಕುಟುಂಬಗಳು ಹೆಚ್ಚಾಗಿರುವ ಹಿನ್ನೆಲೆ ಆ ಕುಟುಂಬದ ೩ ವರ್ಷದ ಒಳಗಿನ ಮಕ್ಕಳ ರಕ್ಷಣೆಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಕೂಸಿನ ಮನೆ ನಿರ್ಮಾಣ ಮಾಡಲು ಕಳೆದ ಆಗಸ್ಟ್ ೧೫ರಂದೇ ಜಿಪಂ ಸಿಇಒ ಎಲ್ಲಾ ಗ್ರಾಪಂಗಳಿಗೆ ಸೂಚನೆ ನೀಡಿದ್ದರು.

ಅದರಂತೆ ಚಿಕ್ಕಅಂಕಂಡಹಳ್ಳಿ, ಬೂದಿಕೋಟೆ ಮತ್ತಿತರ ಪಂಚಾಯ್ತಿಗಳಲ್ಲಿ ಮಾತ್ರ ಯೋಜನೆ ಆರಂಭವಾಗಿದೆ, ಉಳಿದ ಗ್ರಾಪಂಗಳಲ್ಲಿ ಯೋಜನೆಯನ್ನು ಕಡೆಗಣಿಸಲಾಗಿದೆ ಎಂಬ ಆರೋಪವಿದೆ. ಕೆಲವು ಪಂಚಾಯ್ತಿಗಳಲ್ಲಿ ಕೂಸಿನ ಮನೆಗೆ ಬೇಕಾದ ಸಲಕರಣೆಗಳನ್ನು ಈಗಾಗಲೇ ಖರೀದಿ ಮಾಡಿದ್ದರೂ ಕಟ್ಟಡಗಳು ಲಭ್ಯವಾಗದೆ ಸಲಕರಣೆಗಳು ಮೂಲೆಗುಂಪಾಗಿದೆ. ಈಗಾಗಲೇ ಕೂಸಿನ ಮನೆಗಳಲ್ಲಿ ಮಕ್ಕಳ ಪೋಷಣೆ ಬಗ್ಗೆ ಕೇರ್ ಟೇಕರ್‌ಗಳಿಗೆ ತಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗ್ರಾಪಂಗೆ ಇಬ್ಬರಂತೆ ಆಯ್ಕೆ ಮಾಡಿಕೊಂಡು ತರಬೇತಿ ಸಹ ನೀಡಲಾಗಿದೆ.

ಕೂಸಿನ ಮನೆ ಉದ್ದೇಶ

ಈ ಶಿಶುಪಾಲನಾ ಕೇಂದ್ರಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹಚ್ಚಿನ ಸಂಖ್ಯೆಯಲ್ಲಿ ಜನರು ಜಮೀನುಗಳಿಗೆ ಕೃಷಿ ಕೆಲಸಕ್ಕೆ ತೆರಳುತ್ತಾರೆ, ಕೂಲಿ ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕ ಬಡ ಕುಟುಂಬದವರಾಗಿದ್ದು, ಪ್ರತಿನಿತ್ಯ ಕೂಲಿ ಕೆಲಸಕ್ಕೆ ಮತ್ತು ನರೇಗಾ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ. ಇಂತಹ ಕುಟುಂಬದ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ, ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಮನೆಗೆ ಮರಳುವವರೆಗೆ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ ಜೊತೆಗೆ ಪೌಷ್ಟಿಕ ಆಹಾರ ದೊರೆಯುವುದಿಲ್ಲ, ಇದರಿಂದ ಮಕ್ಕಳು ಅಪೌಷ್ಟಿಕತೆಗೆ ಒಳಗಾಗುತ್ತಾರೆ. ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುತ್ತದೆ, ಗ್ರಾಮೀಣ ಭಾಗದ ಮಹಿಳೆಯರು ಕೂಸಿನ ಮನೆಯಲ್ಲಿ ೬ ತಿಂಗಳಿಂದ ೩ ವರ್ಷದೊಳಗಿನ ಮಕ್ಕಳನ್ನು ಬಿಟ್ಟು ನೆಮ್ಮದಿಯಿಂದ ಕೆಲಸಕ್ಕೆ ತೆರಳಬಹುದು.

ಪೌಷ್ಟಿಕ ಆಹಾರ ಪೂರೈಸುತ್ತಿಲ್ಲ

ಆದರೆ ಎರಡು ತಿಂಗಳಿಂದ ಕೂಸಿನ ಮನೆಗೆ ಯಾವುದೇ ಪೌಷ್ಟಿಕ ಆಹಾರ ಸರಬರಾಜಾಗಿಲ್ಲ, ಕೇರ್ ಟೇಕರ್‌ಗಳು ಅಸಹಾಯಕಾರಗಿದ್ದಾರೆ. ಇದರಿಂದ ಕಾರ್ಮಿಕರು ತಮ್ಮ ಮಕ್ಕಳನ್ನು ಕೂಸಿನ ಮನೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆಂದು ಹೆಸರು ಹೇಳಲು ಇಚ್ಛಿಸದ ಕೇರ್ ಟೇಕರ್ ಒಬ್ಬರು ತಿಳಿಸಿದ್ದಾರೆ. ಇದರಿಂದ ಆರಂಭದಲ್ಲೆ ಕೂಸಿನ ಮನೆಗಳು ಹಳ್ಳ ಹಿಡಿಯುವಂತಾಗಿದೆ.