ಸಾರಾಂಶ
ಹೊನ್ನಾವರ ತಾಲೂಕಿನ ಖರ್ವಾ-ಕೊಳಗದ್ದೆ ಶ್ರೀ ಸಿದ್ಧಿವಿನಾಯಕ ವಿವಿಧೋದ್ದೇಶ ವಿದ್ಯಾ ಪ್ರಸಾರ ಮಂಡಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ಪ್ರತಿಭೋತ್ಸವ ನಡೆಯಿತು. ಶಾಲೆಗೆ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.
ಹೊನ್ನಾವರ: ಇತರರ ಸಾಧನೆ ಎನ್ನುವುದು ಆದರ್ಶಪ್ರಾಯವಾಗಿರುತ್ತದೆ. ಅದರಿಂದ ಒಂದು ಪ್ರೇರಣೆ ಸಿಗುತ್ತದೆ. ನಾವು ಸಹ ಮುಂದೆ ಸಾಧನೆ ಮಾಡುವಂತಾಗಬೇಕು ಎಂದು ಎಸ್‌ಡಿಎಂ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ವಿಜಯಲಕ್ಷ್ಮೀ ನಾಯ್ಕ ಅಭಿಪ್ರಾಯಪಟ್ಟರು.
ತಾಲೂಕಿನ ಖರ್ವಾ-ಕೊಳಗದ್ದೆ ಶ್ರೀ ಸಿದ್ಧಿವಿನಾಯಕ ವಿವಿಧೋದ್ದೇಶ ವಿದ್ಯಾ ಪ್ರಸಾರ ಮಂಡಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ಪ್ರತಿಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ಸಂಸ್ಥೆಯ ಏಳ್ಗೆಗೆ ಐದು ಆಧಾರಸ್ತಂಭ ಮುಖ್ಯ. ಅದರಲ್ಲಿ ಆಡಳಿತ ಮಂಡಳಿ ಪ್ರಮುಖವಾದುದು. ದಾನಿಗಳು, ಪೂರ್ವ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿ ವೃಂದ - ಈ ಐದು ಸ್ತಂಭಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಒಂದು ಶಿಕ್ಷಣ ಉತ್ತುಂಗಕ್ಕೆ ಏರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು. ಸಂಸ್ಥೆಯ ನಿರ್ದೇಶಕ ಕೃಷ್ಣಮೂರ್ತಿ ಭಟ್ಟ, ಶಿವಾನಿ ಮಾತನಾಡಿ, ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳಸಬೇಕಿದೆ. ಇಲ್ಲಿ ಯಾವ ಮೂಲಸೌಕರ್ಯಕ್ಕೂ ಕೊರತೆ ಇಲ್ಲ. ಕನ್ನಡ ಮಾಧ್ಯಮ, ಉರ್ದು ಮಾಧ್ಯಮ, ಸಂಸ್ಕೃತ ಪಾಠ ಶಾಲೆ, ಆಂಗ್ಲ ಮಾಧ್ಯಮ ಸೇರಿ ಒಟ್ಟು 400 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗದಲ್ಲಿದ್ದಾರೆ. ಕೊಳಗದ್ದೆಯ ಮೈದಾನದಲ್ಲಿ ವಿದ್ಯಾರ್ಥಿಗಳ ಸಂಚಾರ ಕಂಡುಬರದ ದಿನ, ನಿರವ ಮೌನವಾಗಿರುತ್ತದೆ. ಈ ಕಲರವವನ್ನು ನಾವು ಕಾದುಕೊಳ್ಳಬೇಕು. ಇದೊಂದು ವಿದ್ಯಾಕ್ಷೇತ್ರ ಆಗಿ ಪರಿಣಮಿಸಬೇಕು, ಮುಂದೆ ಅದು ವಿದ್ಯಾಗಿರಿ ಆಗಬೇಕು ಎಂದರು.ಖರ್ವಾ ಗ್ರಾಪಂ ಅಧ್ಯಕ್ಷ ಶ್ರೀಧರ್ ನಾಯ್ಕ ಮಾತನಾಡಿ, ಈ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಈ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಉತ್ತಮ ಶಿಕ್ಷಣ, ವಿಸ್ತಾರವಾದ ಮೈದಾನ, ಗ್ರಂಥಾಲಯವಿದೆ. ಪ್ರತಿಯೊಂದು ಸೌಲಭ್ಯವನ್ನು ಪಡೆದುಕೊಂಡು ಈ ಶಾಲೆಯಲ್ಲಿ ಕಲಿತಿರುವ ವಿದ್ಯಾರ್ಥಿಗಳು ಧನ್ಯವಂತರು ಎಂದರು.ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಎನ್. ಭಟ್, ಉಪಾಧ್ಯಕ್ಷೆ ಉಷಾ ವಿ. ಶಾಸ್ತ್ರಿ, ಶಾಲೆಗೆ ವಿಶೇಷ ಕೊಡುಗೆ ನೀಡಿದ ಖಲೀಲ್ ಶೇಖ್ ಅವರನ್ನು ಸನ್ಮಾನಿಸಲಾಯಿತು. ಆದರ್ಶ ವಿದ್ಯಾರ್ಥಿ, ವಿದ್ಯಾರ್ಥಿನಿ ಹಾಗೂ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧಾ ಚಟುವಟಿಕೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು
ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರ ಎನ್.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಉಷಾ ವಿ. ಶಾಸ್ತ್ರಿ, ನಿರ್ದೇಶಕರಾದ ರಾಮಚಂದ್ರ ಭಟ್ಟ, ಶ್ರೀ ಸಿದ್ಧಿವಿನಾಯಕ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಾಧ್ಯಾಪಕ ಪಿ.ಜಿ. ಹೆಗಡೆ, ಪೂರ್ವ ವಿದ್ಯಾರ್ಥಿ ಒಕ್ಕೂಟದ ಸತ್ಯಪ್ಪ ನಾಯ್ಕ, ಖಲೀಲ್ ಶೇಖ್, ಸಲೀಂ ಸಾಹೇಬ್, ಶಿಕ್ಷಕಿ ಅರ್ಚನಾ ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ಎಲ್. ನಾಯ್ಕ ಸ್ವಾಗತಿಸಿದರು. ಶಿಕ್ಷಕ ಚೆನ್ನಕೇಶವ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಡಿ.ಬಿ. ಮುರಾರಿ ವರದಿ ವಾಚಿಸಿದರು. ಅಶೋಕ್ ರಾಥೋಡ್ ವಂದಿಸಿದರು.