ಶುದ್ಧ ಭಾವನೆಯಿಂದ ಉತ್ಕೃಷ್ಟ ಜೀವನ ಸಾಧ್ಯ: ಶಿವಾನಂದ ಸ್ವಾಮೀಜಿ

| Published : May 23 2024, 01:03 AM IST

ಶುದ್ಧ ಭಾವನೆಯಿಂದ ಉತ್ಕೃಷ್ಟ ಜೀವನ ಸಾಧ್ಯ: ಶಿವಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ಸಂಸ್ಕಾರ ಮತ್ತು ಗುಣದಿಂದ ಸಾರ್ಥಕ ಬದುಕು ಸಾಧ್ಯವಿದೆ. ಅಂತಿಮವಾಗಿ ಪ್ರೀತಿ, ವಾತ್ಸಲ್ಯ, ಭಕ್ತಿಯಿಂದ ಸೇವೆ ಮಾಡಿದಾಗ ಸದ್ಘತಿ ದೊರಕಲಿದೆ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಶುದ್ಧ ಭಾವನೆಯಿಂದ ಸೇವೆ ಮಾಡಿದಲ್ಲಿ ಮಾತ್ರ ಉತ್ಕೃಷ್ಟ ಜೀವನ ಸಾಧ್ಯ ಎಂದು ಜಡೆಸಿದ್ದ ಶಿವಯೋಗೀಶ್ವರ ಮಠದ ಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ರಾಜಯೋಗ ಭವನದಲ್ಲಿ ಆಯೋಜಿಸಿದ್ದ ರಾಜಯೋಗಿನಿ ಮಂಜುಳಕ್ಕನವರ ನುಡಿ ನಮನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಸಂದೇಶ ನೀಡಿ, ಉತ್ತಮ ಸಂಸ್ಕಾರ ಮತ್ತು ಗುಣದಿಂದ ಸಾರ್ಥಕ ಬದುಕು ಸಾಧ್ಯವಿದೆ. ಅಂತಿಮವಾಗಿ ಪ್ರೀತಿ, ವಾತ್ಸಲ್ಯ, ಭಕ್ತಿಯಿಂದ ಸೇವೆ ಮಾಡಿದಾಗ ಸದ್ಘತಿ ದೊರಕಲಿದೆ. ಆ ಸದ್ಘತಿ ಪ್ರಜಾಪಿತ ವಿಶ್ವವಿದ್ಯಾಲಯ ನೀಡುವ ಶಿವಜ್ಞಾನದಿಂದ ಪ್ರಾಪ್ತಿಯಾಗುತ್ತದೆ ಎಂದರು.

ಮರಣ ಹೊಂದಿದಾಗ ಆತ್ಮವು ಸ್ಥೂಲ ದೇಹದಿಂದ ಸೂಕ್ಷ್ಮ ದೇಹ ಪ್ರವೇಶ ಮಾಡುತ್ತದೆ. ಹಿರಿಯರ ಜನ್ಮದ ಪುಣ್ಯದಿಂದ ಸೇವೆ ಮಾಡಬಹುದು. ಯಾವಾಗಲೂ ಕಿಂಕರ ಭಾವನೆಯಿಂದ ಸೇವೆ ಮತ್ತು ಕರ್ತವ್ಯ ಮಾಡಬೇಕಿದೆ ಎಂದರು.

ಶಾಸಕ ಬಿ.ಪಿ ಹರೀಶ್ ಮಾತನಾಡಿ, ಹರಿಹರ ತಾಲೂಕಿನ ಶೇ.೭೦ ಭಾಗಗಳಲ್ಲಿ ಪರಮಾತ್ಮನ ಸಂದೇಶ ಹರಡಲು ಮಂಜುಳಕ್ಕ ಹಗಲಿರುಳು ಶ್ರಮಿಸಿದ್ದು, ಭಾರತೀಯ ಧರ್ಮದ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದಾರೆ ಎಂದು ಶ್ಲಾಘಿಸಿದರು.

ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ವಲಯದ ನಿರ್ದೇಶಕ ಡಾ ಬಸವರಾಜ್ ರಾಜಋಷಿ ಮಾತನಾಡಿ, ಇಡೀ ಜಗತ್ತು ದೇವರನ್ನು ಹುಡುಕಲು ಕಾಶೀ, ಕೇದಾರ, ರಾಮೇಶ್ವರ, ಕಾಶ್ಮೀರ ಹೀಗೆಲ್ಲಾ ಪ್ರವಾಸ ಮಾಡುತ್ತಿದ್ದು, ಸನಾತನ ಭಾರತದಲ್ಲಿ ಪರಮಾತ್ಮನಿಗಾಗಿ ಹುಡುಕಲು ತೆರಳುವರು ತೀರ ಕಡಿಮೆಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಯೊಬ್ಬರ ಪಾತ್ರವೂ ನಿಶ್ಚಿತವಾಗಿರುತ್ತದೆ ಹಾಗಾಗಿ ಜೀವನ ಸಮರ್ಪಣೆ ಮಾಡಿಕೊಳ್ಳಲು ಸೇವೆ ಅಗತ್ಯವಾಗಿದೆ. ಶಿವ ಜ್ಞಾನವ ಹರಡುವ ಸೇವೆ ಮಾಡಲು ಮಂಜುಳಕ್ಕನನ್ನು ಪರಮಾತ್ಮ ಆಯ್ಕೆ ಮಾಡಿಕೊಂಡಿದ್ದರು ಎಂದರು.

ರಾಜಯೋಗಿನಿ ನಿರ್ಮಲಾ ಅಧ್ಯಕ್ಷತೆ ವಹಿಸಿದ್ದರು ಬಿ.ಕೆ.ವೀಣಾ, ರಾಜಶ್ರೀ, ಶಾಂತಾ, ಚಿತ್ರಮ್ಮ, ಎನ್.ಜಿ ನಾಗನಗೌಡ್ರು, ಮಾಜಿ ಶಾಸಕ ಶಿವಶಂಕರ್, ಬಿ.ಚಿದಾನಂದಪ್ಪ, ಬಿ.ಪಂಚಣ್ಣ, ಬಿ.ಕೆ.ರುದ್ರಯ್ಯ, ಶಿವಕುಮಾರ್, ಬಿ.ಎಂ.ಕರೇಗೌಡ್ರು, ಚಂದ್ರಶೇಖರ್ ಪಾಜರ್ ಹಾಗೂ ಸಹೋದರ, ಸಹೋದರಿಯರು ಮಂಜುಳಕ್ಕನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸುಮಾರು ೧೪ ಗ್ರಾಮಗಳ ಅಭಿಮಾನಿಗಳು ಭಾಗವಹಿಸಿದ್ದರು. ಸಹೋದರಿಯರಿಗೆ ವಸ್ತ್ರ ವಿತರಿಸಲಾಯಿತು.