ಸಾರಾಂಶ
ಮುಂದಿನ ಪ್ರಯಾಣ ಆರಂಭಿಸುವ ಮೊದಲು ಮಂಗಳೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸ್ಮರಣಿಕೆಗಳನ್ನು ಪಡೆದರು. ಹಡಗು ತನ್ನ ಮುಂದಿನ ತಾಣವಾದ ಮೊರ್ಮುಗೋ ಬಂದರಿಗೆ ಹೊರಟಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ನವ ಮಂಗಳೂರು ಬಂದರಿಗೆ ಈ ಋತುಮಾನದ ಏಳನೇ ಐಷಾರಾಮಿ ಹಡಗು ಭಾನುವಾರ ಆಗಮಿಸಿತ್ತು. ಈ ನಾರ್ವೇಜಿಯನ್ ಹಡಗು 509 ಪ್ರಯಾಣಿಕರು ಮತ್ತು 407 ಸಿಬ್ಬಂದಿಯನ್ನು ಹೊತ್ತು ಮಂಗಳೂರಿಗೆ ಆಗಮಿಸಿತ್ತು.‘ಎಂಎಸ್ ಇನ್‌ಸಿಗ್ನಿಯಾ’ ಹೆಸರಿನ ಹಡಗು ಇದಾಗಿದ್ದು, ಪ್ರವಾಸಿಗರು ಹಡಗಿನಿಂದ ಇಳಿಯುವಾಗ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಎನ್‌ಎಂಪಿಎ ಪ್ರವಾಸಿಗರಿಗಾಗಿ ಬಹು ವಲಸೆ ಕಸ್ಟಮ್ಸ್ ಕೌಂಟರ್‌ಗಳ ಜತೆಗೆ ವೈದ್ಯಕೀಯ ಸ್ಕ್ರೀನಿಂಗ್ ವ್ಯವಸ್ಥೆ ಕೈಗೊಂಡಿತ್ತು. ಕರಾವಳಿಯ ವಿವಿಧ ದೇವಾಲಯಗಳು, ಪ್ರವಾಸಿ ತಾಣಗಳು, ಮಾರುಕಟ್ಟೆಗಳಿಗೆ ಭೇಟಿ ನೀಡಲು ಶಟಲ್ ಬಸ್‌ಗಳು ಮತ್ತು ಟ್ಯಾಕ್ಸಿಗಳನ್ನು ನಿಯೋಜಿಸಲಾಗಿತ್ತು.ಆಯುಷ್ ಸಚಿವಾಲಯದ ಕೇಂದ್ರದಲ್ಲಿ ಅನೇಕ ಪ್ರವಾಸಿಗರು ಧ್ಯಾನ ಮಾಡಿದರು. ಕ್ರೂಸ್ ಲಾಂಜ್‌ಗೆ ಭೇಟಿ ನೀಡುವ ಎಲ್ಲ ಪ್ರಯಾಣಿಕರಿಗೆ ಉಚಿತ ವೈ-ಫೈ, ವರ್ಚುವಲ್ ರಿಯಾಲಿಟಿ ಅನುಭವ ವಲಯವನ್ನು ಒದಗಿಸಲಾಯಿತು. ಯಕ್ಷಗಾನ ಕಲಾ ಪ್ರಕಾರವನ್ನು ಪ್ರದರ್ಶಿಸುವ ವಿಶಿಷ್ಟ ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಂಡರು.ನಂತರ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಪ್ರವಾಸಿಗರನ್ನು ರಂಜಿಸಿದವು. ಕಾರ್ಕಳ ಗೋಮಟೇಶ್ವರ ದೇವಸ್ಥಾನ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ನಗರದ ಸಾಂಪ್ರದಾಯಿಕ ಮನೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಪ್ರಯಾಣಿಕರು ಭೇಟಿ ನೀಡಿದರು.
ಮುಂದಿನ ಪ್ರಯಾಣ ಆರಂಭಿಸುವ ಮೊದಲು ಮಂಗಳೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸ್ಮರಣಿಕೆಗಳನ್ನು ಪಡೆದರು. ಹಡಗು ತನ್ನ ಮುಂದಿನ ತಾಣವಾದ ಮೊರ್ಮುಗೋ ಬಂದರಿಗೆ ಹೊರಟಿತು.