ಸಾರಾಂಶ
ಪಂಜಾಬ್ ಮತ್ತು ಕರ್ನಾಟಕದಲ್ಲಿ ಅಕ್ಕಿ ಬೆಲೆ ಒಂದೇಯಾಗಿದೆ. ಆದರೆ, ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಶಿಕ್ಷಣ ಮಾಡುತ್ತಿರುವವರಿಗೆ ಸ್ಟೈಫಂಡ್ ಒಂದೊಂದು ಬಗೆಯಾಗಿದೆ. ಕರ್ನಾಟಕದಲ್ಲಿ ₹45 ಸಾವಿರ ಆಗಿದ್ದರೆ, ದೆಹಲಿಯಲ್ಲಿ ₹1.10 ಲಕ್ಷ ಆಗಿದೆ. ಏಕೆ ಈ ರೀತಿಯ ವ್ಯತ್ಯಾಸ ಎಂದು ಪ್ರತಿಭಟನಾಕಾರರ ಪ್ರಶ್ನೆ.
ಹುಬ್ಬಳ್ಳಿ:
ಶಿಷ್ಯವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿಮ್ಸ್‌ನ ಕಿರಿಯ ವೈದ್ಯರು ಕಳೆದ 9 ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಮಂಗಳವಾರ ವೈದ್ಯನ ಅಣಕು ಶವಯಾತ್ರೆ ನಡೆಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.ಕರ್ನಾಟಕ ನಿವಾಸಿ ವೈದ್ಯರ ಸಂಘ (ಕೆಆರ್‌ಡಿ)ದ ಕರೆ ಮೇರೆಗೆ ಕಿಮ್ಸ್‌ನ ಕಿರಿಯ ನಿವಾಸಿ ವೈದ್ಯರ ಸಂಘ (ಆರ್‌ಡಿಎ)ದ ಸದಸ್ಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಮಂಗಳವಾರ ವೈದ್ಯನ ಅಣಕು ಶವಯಾತ್ರೆಯೊಂದಿಗೆ ಕಿಮ್ಸ್ ಆವರಣದಿಂದ ಕಿತ್ತೂರು ಚೆನ್ನಮ್ಮ ವೃತ್ತದ ವರೆಗೆ ಆಗಮಿಸಿದ ಮುಷ್ಕರ ನಿರತರು, ನಂತರ ಸಮಾವೇಶಗೊಂಡು ಅಣಕು ಶವವಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಿಮ್ಸ್‌ನ ಕಿರಿಯ ಆರ್‌ಡಿಎ ಸಂಘದ ಅಧ್ಯಕ್ಷ ಡಾ. ಸುಹಾಸ ಸಿ.ಎಸ್, ನಾವು ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಪಂಜಾಬ್ ಮತ್ತು ಕರ್ನಾಟಕದಲ್ಲಿ ಅಕ್ಕಿ ಬೆಲೆ ಒಂದೇಯಾಗಿದೆ. ಆದರೆ, ಸ್ನಾತಕೋತ್ತರ (ಪಿಜಿ) ವೈದ್ಯಕೀಯ ಶಿಕ್ಷಣ ಮಾಡುತ್ತಿರುವವರಿಗೆ ಸ್ಟೈಫಂಡ್ ಒಂದೊಂದು ಬಗೆಯಾಗಿದೆ. ಕರ್ನಾಟಕದಲ್ಲಿ ₹45 ಸಾವಿರ ಆಗಿದ್ದರೆ, ದೆಹಲಿಯಲ್ಲಿ ₹1.10 ಲಕ್ಷ ಆಗಿದೆ. ಏಕೆ ಈ ರೀತಿಯ ವ್ಯತ್ಯಾಸ. ಅದೇ ರೀತಿ ದೆಹಲಿಯಲ್ಲಿ ವೈದ್ಯಕೀಯ ಶಿಕ್ಷಣ ಶುಲ್ಕ ₹40 ಸಾವಿರ ಆಗಿದ್ದರೆ, ಕರ್ನಾಟಕದಲ್ಲಿ ₹ 1.20 ಲಕ್ಷ ಆಗಿದೆ. ಅಲ್ಲಿಯೂ ತಾರತಮ್ಯವಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರವು ಏಕೆ ಒಂದೇ ದರ ನಿಗದಿಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.ತುರ್ತುಸೇವೆ ಬಂದ್ :
ರಾಜ್ಯಾದ್ಯಂತ ಕಿರಿಯ ವೈದ್ಯರು ಕಳೆದ 9 ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ ಆಡಳಿತ ಪಕ್ಷದ ಯಾವ ಸಚಿವರು, ಶಾಸಕರು ಆಗಮಿಸಿ ಸಮಸ್ಯೆ ಕೇಳುತ್ತಿಲ್ಲ. ಮುಂದೆ 2-3 ದಿನಗಳ ಕಾಲಾವಕಾಶ ನೀಡುತ್ತಿದ್ದು, ಸರ್ಕಾರ ಸ್ಪಂದಿಸದೇ ಇದ್ದರೆ ತುರ್ತುಸೇವೆಯನ್ನು ಬಂದ್ ಮಾಡಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಅಣಕು ಶವಯಾತ್ರೆಯಲ್ಲಿ ಡಾ. ಶಶಾಂಕ ವಿ, ಡಾ. ಆಕಾಶ, ಡಾ. ಆದರ್ಶ ವಿ.ಎಚ್, ಡಾ. ಸುನಿಲ್ ಆರ್, ಡಾ. ಅಭಿಜಿತ್, ಡಾ. ದೀಕ್ಷಿತ, ಡಾ. ಪ್ರದೀಪ ಕುಮಾರ ಎಚ್.ವಿ, ಡಾ. ಹರ್ಷ, ಡಾ. ರಕ್ಷಿತ ಎಂ.ಸಿ, ಡಾ. ದಿವ್ಯಾ ಸಿ.ಆರ್, ಡಾ. ಚೈತ್ರಾ ಎಸ್. ಸೇರಿದಂತೆ ಹಲವರಿದ್ದರು.