ಕೂಸಿನ ಮನೆ ಮಕ್ಕಳ ಬೆಳವಣಿಗೆಗೆ ಸಹಕಾರಿ: ವಿಶ್ವನಾಥ ಹೊಸಮನಿ

| Published : Jan 11 2024, 01:30 AM IST / Updated: Jan 11 2024, 02:07 PM IST

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವದ ಯೋಜನೆಯ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳು ನರೇಗಾ ಕೂಲಿಕಾರರ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹೇಳಿದರು.

ಮುಂಡರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವದ ಯೋಜನೆಯ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳು ನರೇಗಾ ಕೂಲಿಕಾರರ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ತಾಪಂ ಸಮರ್ಥ ಸೌಧ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಪಂ, ತಾಪಂ ಮುಂಡರಗಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕೂಸಿನ ಮನೆಯ ಮಕ್ಕಳ ಆರೈಕೆದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೂಸಿನ ಮನೆಗೆ ಬರುವ ಮಕ್ಕಳನ್ನು ಆರೈಕೆ ಮಾಡುವಾಗ ಭೇದ-ಭಾವ ಮಾಡದೆ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಸಿನ ಮನೆಯ ಆರೈಕೆದಾರರ ಮೇಲಿರುತ್ತದೆ. 

ಕೂಸಿನ ಮನೆ ಸ್ಥಾಪನೆ ಗ್ರಾಮೀಣ ಭಾಗದಲ್ಲಿ ಮಕ್ಕಳ ಸಬಲತೆ ಹಾಗೂ ಉದ್ಯೋಗ ಸೃಷ್ಟಿಯ ಕಾರಣದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ದೊಡ್ಡ ಮತ್ತು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ ಎಂದರು.

ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಮಕ್ಕಳ ಬೌದ್ದಿಕತೆ, ಮಾನಸಿಕ, ಆರೋಗ್ಯಯುತವಾಗಿ ನೋಡಿಕೊಳ್ಳುವುದು ಆರೈಕೆದಾರರ ಮೇಲೆ ಇರುತ್ತದೆ. ಈ ನಿಟ್ಟಿನಲ್ಲಿ ಮೂರು ದಿನಗಳ ಕಾಲ ತರಬೇತಿ ಕಾರ್ಯಾಗಾರ ನಡೆಯಲಿದ್ದು, ತರಬೇತಿ ಕಾರ್ಯಾಗಾರದಲ್ಲಿ ಎಲ್ಲರೂ ಉತ್ತಮ ರೀತಿಯಲ್ಲಿ ತರಬೇತಿ ಪಡೆಯಬೇಕು. 

ಕೂಸಿನ ಮನೆಗಳು ಬಡವರ ಪಾಲಿಗೆ ವರದಾನವಾಗಬೇಕು. ತಾಲೂಕಿನಲ್ಲಿ ಮಾದರಿ ಕೂಸಿನ ಮನೆಗಳನ್ನಾಗಿ ಮಾಡಿ ಕೂಸಿನ ಮನೆ ಯೋಜನೆ ಯಶಸ್ವಿಗೊಳಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಿಡಿಪಿಓ ಲಲಿತಾ ಅಳವಂಡಿ, ಪದ್ಮಾವತಿ ಗೋವಿಂದರೆಡ್ಡಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಆರ್.ಆರ್. ಕರ್ಜಗಿ, ಜಿಪಂ ಡಿಐಇಸಿ ವಿ.ಎಸ್. ಸಜ್ಜನ್ ಕೂಸಿನ ಮನೆಯ ಆರೈಕೆದಾರರಿಗೆ ತರಬೇತಿ ನೀಡಿದರು. ತಾಪಂ ಸಿಬ್ಬಂದಿ ಹಾಗೂ ಕೂಸಿನ ಮನೆಯ ಆರೈಕೆದಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.