ಸಾರಾಂಶ
ಹೆಗಡೆ ನಗರದ ಮೂಲಕ ಬೇತೂರು ರಸ್ತೆಯಿಂದ ಅವರಗೆರೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ವರ್ತುಲ ರಸ್ತೆ ನಿರ್ಮಿಸಲು ಪ್ರಾಧಿಕಾರದಿಂದ ಯೋಜಿಸಿದ್ದು ಇದನ್ನು ತುಂಬಾ ವೈಜ್ಞಾನಿಕವಾಗಿ ಮಾಡಬೇಕು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಸೂಚನೆ
ಕನ್ನಡಪ್ರಭ ವಾರ್ತೆ ದಾವಣಗೆರೆನಗರದಲ್ಲಿ ನಡೆಯುತ್ತಿರುವ ವರ್ತುಲ ರಸ್ತೆಯ ಕಾಮಗಾರಿಗಳ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ ಮೂಲಕ ನಗರದಲ್ಲಿನ ವಾಹನ ದಟ್ಟಣೆ ತಗ್ಗಿಸಲು ಕ್ರಮ ಜರುಗಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಗಡೆ ನಗರದ ರಿಂಗ್ ರಸ್ತೆಯನ್ನು ಬೇತೂರು ರಸ್ತೆಗೆ ಸಂಪರ್ಕಿಸಲು ಈಗಾಗಲೇ ತೆರವು ಕಾರ್ಯ ಮಾಡಿದ್ದು ಆದಷ್ಟು ಬೇಗ ಕೆಲಸ ಪ್ರಾರಂಭಿಸಿ ಮುಕ್ತಾಯ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ನಗರದ ಹೊರ ವಲಯದಲ್ಲಿ ರಿಂಗ್ ರಸ್ತೆಗಳ ನಿರ್ಮಾಣ ಮಾಡುವುದರಿಂದ ನಗರದಲ್ಲಿ ಸಂಚರಿಸುವ ವಾಹನಗಳ ದಟ್ಟಣೆ ಕಡಿಮೆಯಾಗಲಿದ್ದು ಇದರಿಂದ ಮಾಲಿನ್ಯವು ಕಡಿಮೆಯಾಗುತ್ತದೆ ಎಂದರು.ಹೆಗಡೆ ನಗರದ ಮೂಲಕ ಬೇತೂರು ರಸ್ತೆಯಿಂದ ಅವರಗೆರೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ವರ್ತುಲ ರಸ್ತೆ ನಿರ್ಮಿಸಲು ಪ್ರಾಧಿಕಾರದಿಂದ ಯೋಜಿಸಿದ್ದು ಇದನ್ನು ತುಂಬಾ ವೈಜ್ಞಾನಿಕವಾಗಿ ಮಾಡಬೇಕು. ಈ ಭಾಗದಲ್ಲಿ ಯಾರಿಗೂ ತೊಂದರೆಯಾಗಂತೆ ಹಳ್ಳದ ಪಕ್ಕದಲ್ಲಿ ಸಿಗುವ ಸ್ಥಳದಲ್ಲಿ ಹಳ್ಳಕ್ಕೆ ಸ್ಥಳ ಬಿಟ್ಟು ರಸ್ತೆ ನಿರ್ಮಾಣ ಮಾಡಲು ಯೋಜನೆ ರೂಪಿಸಬೇಕು, ರೈತರಿಗಾಗಲಿ, ನಿವಾಸಿಗಳಿಗಾಗಲಿ ತೊಂದರೆಯಾಗದಂತೆ ಯೋಜನೆ ತಯಾರಿಸಲು ಸೂಚನೆ ನೀಡಿದರು. ಪ್ರಾಧಿಕಾರದಿಂದ ಒಟ್ಟು 23 ವಿಷಯಗಳ ಕುರಿತು ಚರ್ಚಿಸಲಾಗಿದ್ದು ಕೆಲವು ಮಾರ್ಪಾಡಿನೊಂದಿಗೆ ಅನುಮೋದನೆಯನ್ನು ಸಭೆಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಂ.ವಿ. ವೆಂಕಟೇಶ್, ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಪ್ರಾಧಿಕಾರದ ಆಯುಕ್ತರಾದ ಬಸವನಗೌಡ ಕೋಟೂರು, ಪಾಲಿಕೆ ಆಯುಕ್ತರಾದ ರೇಣುಕಾ ಉಪಸ್ಥಿತರಿದ್ದರು.