ಉಪನ್ಯಾಸಕರು ನಿರಂತರ ಓದುವ ಹವ್ಯಾಸ ಬೆಳೆಸಿಕೊಳ್ಳಿ

| Published : Jan 09 2024, 02:00 AM IST

ಸಾರಾಂಶ

ಉಪನ್ಯಾಸಕರು ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಎಲ್ಲ ವಿಷಯಗಳ ಜ್ಞಾನ ಹೊಂದಿರಬೇಕು, ದಿನಪತ್ರಿಕೆ ಹಾಗೂ ಸಾಧಕರ ಜೀವನ ಚರಿತ್ರೆ ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪಿಯುಸಿ ಹಂತ ಮುಖ್ಯ ಘಟ್ಟವಾಗಿದೆ. ಭವಿಷ್ಯತ್ತನ್ನು ರೂಪಿಸಿಕೊಳ್ಳಲು ಅಣಿಯಾಗುವ ವಿದ್ಯಾರ್ಥಿಗಳ ಮನಸ್ಸು ಅರಿತುಕೊಂಡು ಉಪನ್ಯಾಸಕರು ಬೊಧನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ. ಬಿರಾದಾರ ಹೇಳಿದರು.

ನಗರದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಜಿಲ್ಲೆಯ ಎಲ್ಲ ಪದವಿ ಪೂರ್ವ ಕಾಲೇಜುಗಳ ಇತಿಹಾಸ ಹಾಗೂ ಶಿಕ್ಷಣಶಾಸ್ತ್ರ ವಿಷಯಗಳ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಉಪನ್ಯಾಸಕರು ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಎಲ್ಲ ವಿಷಯಗಳ ಜ್ಞಾನ ಹೊಂದಿರಬೇಕು, ದಿನಪತ್ರಿಕೆ ಹಾಗೂ ಸಾಧಕರ ಜೀವನ ಚರಿತ್ರೆ ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಅದು ನಮ್ಮ ಬೋಧನೆಗೆ ಸಹಕಾರಿಯಾಗಲಿದೆ. ಒಳ್ಳೆಯ ಉಪನ್ಯಾಸಕನಾಗಲು ಬೇಕಾದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಲಿಕೆಯಲ್ಲಿ ತೊಡಗುವವರು ಉತ್ತಮ ಆರೋಗ್ಯದೊಂದಿಗೆ ಸದಾ ಸಂತೋಷವಾಗಿ ಇರಬೇಕು. ಅಂದಾಗ ಮಾತ್ರ ಇತರರನ್ನು ಸಂತೋಷಪಡಿಸಲು ಸಾಧ್ಯ. ಒಂದು ಸೋಲನ್ನು ಸದಾ ನೆನಪಿನಲ್ಲಿಟ್ಟುಕೊಂಡರೆ ಅದು ನಮ್ಮ ನೆಮ್ಮದಿ ಹಾಳು ಮಾಡುತ್ತದೆ. ವಾಸ್ತವ ಒಪ್ಪಿಕೊಳ್ಳುವ ಗುಣ ಇರಬೇಕು, ಇನ್ನೊಬ್ಬರೊಂದಿಗೆ ಹೊಲಿಕೆ ಮಾಡಿಕೊಳ್ಳಬಾರದು ಎಂದು ಹೇಳಿದರು.

ನಿಸ್ವಾರ್ಥದಿಂದ ಕಾರ್ಯಪ್ರವೃತ್ತರಾಗಬೇಕು, ಯಾರಲ್ಲಿ ಪ್ರಾಮಾಣಿಕತೆ ಗಟ್ಟಿಯಾಗಿರುತ್ತದೆಯೋ ಅಂತಹವರು ಸಾಧಕರಾಗುತ್ತಾರೆ ಎಂಬುದನ್ನು ಚರಿತ್ರೆಯಿಂದ ತಿಳಿದುಕೊಂಡಿದ್ದೇವೆ. ವ್ಯಕ್ತಿತ್ವಕ್ಕೆ ಶಕ್ತಿ ಕೊಡುವುದೇ ಪ್ರಾಮಾಣಿಕತೆ ಎಂಬುದನ್ನು ಅರಿತುಕೊಳ್ಳಬೇಕು. ಒಳ್ಳೆಯ ಕೆಲಸ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಬೇಕು. ನಿಮಗೆ ಕೆಡಕು ಮಾಡಿದವರನ್ನು ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ ಸಿ.ಕೆ. ಹೊಸಮನಿ, ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು ವಿಶೇಷ ತರಗತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಅಧ್ಯಯನದಲ್ಲಿ ತೊಡಗಿಸಬೇಕು. ಉಪನ್ಯಾಸಕರು ಇಂತಹ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಪರೀಕ್ಷೆ ಫಲಿತಾಂಶ ಸುಧಾರಣೆಗೆ ಶ್ರಮಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ಸಂಸ್ಥೆಯ ನಿರ್ದೇಶಕ ಶರತ ಮಂಗಾನವರ ವಹಿಸಿದ್ದರು, ಉಪನಿರ್ದೇಶಕರ ಕಚೇರಿ ಶಾಖಾಧಿಕಾರಿ ಬಿ.ಟಿ. ಗೊಂಗಡಿ, ಕಗ್ಗೊಡ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಎ. ಉಪ್ಪಾರ, ಇತಿಹಾಸ ವಿಷಯ ವೇದಿಕೆ ಅಧ್ಯಕ್ಷ ಸತೀಶ ಪವಾರ, ಬಿ.ಎಸ್. ಗೌರಿ, ಲಕ್ಕುಂಡಿಮಠ, ಎಸ್.ಡಿ. ಮದರಿ ಇತರರು ಇದ್ದರು. ಪ್ರಾಚಾರ್ಯ ಎಸ್. ಆರ್. ಕುಲಕರ್ಣಿ ಸ್ವಾಗತಿಸಿದರು, ಉಪನ್ಯಾಸಕಿ ಎಸ್.ಜಿ .ಪಾಟೀಲ, ಉಪನ್ಯಾಸಕ ಆರ್.ಸಿ. ಹಿರೇಮಠ ನಿರೂಪಿಸಿದರು. ಉಪನ್ಯಾಸಕಿ ಬಿ.ಬಿ. ಪಾಟೀಲ ವಂದಿಸಿದರು.