ಸಾರಾಂಶ
ದೇಗುಲದ ಪ್ರಾಂಗಣದ ನೀರು ಸರಾಗವಾಗಿ ಹರಿಯಲು ಉತ್ತರ ಗೋಪುರದಿಂದ ಹಳ್ಳಕ್ಕೆ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ದಾಸೋಹ ಭವನದ ಪಶ್ಚಿಮ ದಿಕ್ಕಿನಲ್ಲಿ ಮಹಿಳೆಯರಿಗೆ ಶೌಚಗೃಹ, ಸ್ನಾನಗೃಹಗಳ ನಿರ್ಮಾಣಕ್ಕೆ ಅಧಿಕಾರಿಗಳು ಸೂಚಿಸಿದ್ದಾರೆ.
ಕನಕಗಿರಿ: ಏ.೧ರಂದು ನಡೆಯುವ ಪಟ್ಟಣದ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ ನಿಮಿತ್ತ ದೇವಸ್ಥಾನದೊಳಗಿನ ಕೈಪಿಡಿ ಗೊಂಬೆಗಳಿಗೆ ಹಾಗೂ ಮುಖ್ಯದ್ವಾರಕ್ಕೆ ಬಣ್ಣ ಹಚ್ಚುವ ಕಾರ್ಯ ಭರದಿಂದ ಸಾಗಿದೆ.
ದೇಗುಲದ ಪ್ರಾಂಗಣದ ನೀರು ಸರಾಗವಾಗಿ ಹರಿಯಲು ಉತ್ತರ ಗೋಪುರದಿಂದ ಹಳ್ಳಕ್ಕೆ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ದಾಸೋಹ ಭವನದ ಪಶ್ಚಿಮ ದಿಕ್ಕಿನಲ್ಲಿ ಮಹಿಳೆಯರಿಗೆ ಶೌಚಗೃಹ, ಸ್ನಾನಗೃಹಗಳ ನಿರ್ಮಾಣಕ್ಕೆ ಅಧಿಕಾರಿಗಳು ಸೂಚಿಸಿದ್ದಾರೆ.ಅದರಂತೆ ದೇವಸ್ಥಾನ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿದ್ದು, ದೇಗುಲದ ಒಳಾಂಗಣದ ಕೈಪಿಡಿ ಗೊಂಬೆಗಳು, ಮಧ್ಯ ಮಂಟಪದ ಒಳ ಗೊಂಬೆಗಳಿಗೆ, ದೇವಸ್ಥಾನದ ಜಯ-ವಿಜಯ ಮೂರ್ತಿಗಳಿಗೆ ಮತ್ತು ಮುಖ್ಯದ್ವಾರಕ್ಕೂ ಬಣ್ಣ ಹಚ್ಚುವ ಕಾರ್ಯಕ್ಕೆ ₹೭.೫೦ ಲಕ್ಷ ಬಿಡುಗಡೆಯಾಗಿದೆ. ಜಾತ್ರೆಯೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.ಇನ್ನು ದೇವಸ್ಥಾನದ ರಥದ ಮನೆಯಿಂದ ತೇರಿನ ಹನುಮಪ್ಪ ದೇಗುಲದವರೆಗಿನ ೬೫೦ ಮೀಟರ್ ರಾಜಬೀದಿಯ ಅಭಿವೃದ್ಧಿಗೆ ₹೨.೨ ಕೋಟಿ ಅನುದಾನ ಮಂಜೂರಾಗಿದ್ದು, ಸಚಿವ ಶಿವರಾಜ ತಂಗಡಗಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಜಾತ್ರೆ ಮೂರು ತಿಂಗಳು ಬಾಕಿ ಇರುವಾಗಲೇ ದೇವಸ್ಥಾನಕ್ಕೆ ಸಂಬಂಧಿಸಿದ ಕಾಮಗಾರಿಗಳು ಭರದಿಂದ ಸಾಗಿರುವುದು ಇದೇ ಮೊದಲು ಎನ್ನಲಾಗಿದೆ.ಜಾತ್ರೆ ಬಂದಾಗ ಕಾಮಗಾರಿ ತರಾತುರಿಯಲ್ಲಿ ಮಾಡುವುದಕ್ಕಿಂತ ಸ್ವಲ್ಪ ಕಾಲಾವಕಾಶ ತೆಗೆದುಕೊಂಡು ಕಾಮಗಾರಿ ಆರಂಭಿಸಲಾಗಿದೆ. ದೇವಸ್ಥಾನ ನಿಧಿಯಿಂದ ಕೈಪಿಡಿ ಗೊಂಬೆಗಳಿಗೆ, ಮುಖ್ಯದ್ವಾರಕ್ಕೆ ಬಣ್ಣ ಹಚ್ಚಲಾಗುತ್ತಿದೆ. ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೌಚಗೃಹ, ಸ್ನಾನಗೃಹಗಳ ನಿರ್ಮಾಣ ಮಾಡಲಾಗುವುದು ಎನ್ನುತ್ತಾರೆ ದೇವಸ್ಥಾನದ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ.