ಸ್ವಾತಂತ್ರ್ಯ ಸೇನಾನಿಗಳ ನಾಡಿನಲ್ಲಿ ಪಾಕಿಸ್ತಾನಿ ಅಭಿಮಾನಿ!

| Published : Mar 05 2024, 01:34 AM IST

ಸಾರಾಂಶ

ಸ್ವಾತಂತ್ರ್ಯ ಸೇನಾನಿಗಳ ನಾಡಿನಲ್ಲಿ ಪಾಕಿಸ್ತಾನಿ ಅಭಿಮಾನಿಯ ಘೋಷಣೆ ಬ್ಯಾಡಗಿ ಸೇರಿದಂತೆ ಹಾವೇರಿ ಜಿಲ್ಲೆಗೆ ಕಳಂಕ ತಂದಿದೆ.

ಶಿವಾನಂದ ಮಲ್ಲನಗೌಡರ

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಬ್ರಿಟೀಷರ ಗುಂಡಿಗೆ ಎದೆಯೊಡ್ಡಿದ್ದ ದೇಶಭಕ್ತ ಮೈಲಾರ ಮಹದೇವ ಜನಿಸಿದ ಮೋಟೆಬೆನ್ನೂರಿನಿಂದಲೇ ಈಗ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆಯೊಂದು ಮೊಳಗಿದ್ದು, ಸ್ವಾತಂತ್ರ್ಯ ಸೇನಾನಿಗಳ ನಾಡಿನಲ್ಲಿ ಪಾಕಿಸ್ತಾನಿ ಅಭಿಮಾನಿಯ ಘೋಷಣೆ ಬ್ಯಾಡಗಿ ಸೇರಿದಂತೆ ಹಾವೇರಿ ಜಿಲ್ಲೆಗೆ ಕಳಂಕ ತಂದಿದೆ.

ಹೌದು! ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಹೇಳಿಕೆ ನೀಡಿದ ಆರೋಪದ ಮೇಲೆ ಇದೀಗ ಬಂಧನವಾಗಿರುವ ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿ ಮಹ್ಮದ್‌ಶಫಿ ನಾಶಿಪುಡಿ ಮೋಟೆಬೆನ್ನೂರಿನಲ್ಲಿ ಕೋಲ್ಡ್ ಸ್ಟೋರೇಜ್, ಮೆಣಸಿನಕಾಯಿ ಕ್ವಾಲಿಟಿ ಖಾರದಪುಡಿ ಮಿಷನ್ ಸೇರಿದಂತೆ ಇತರ ತನ್ನ ಎಲ್ಲ ವ್ಯವಹಾರಗಳನ್ನು ಮೋಟೆಬೆನ್ನೂರಿಂದಲೇ ಮಾಡುತ್ತಿದ್ದು ಮೇಲಿನ ಮಾತುಗಳಿಗೆ ಪುಷ್ಟಿ ನೀಡುವಂತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಪ್ಪುಚುಕ್ಕೆ:

ಸುಮಾರು 100ಕ್ಕೂ ಹೆಚ್ಚು ಸ್ವಾತಂತ್ರ್ಯ ಯೋಧರನ್ನು ಬ್ಯಾಡಗಿ ಹೊಂದಿದ್ದು, ಅದರಲ್ಲೂ ಮೈಲಾರ ಮಹದೇವ ಹಾಗೂ ಸಿದ್ದಮ್ಮ ಮೈಲಾರ ಇಡೀ ಭಾರತಕ್ಕೆ ಪ್ರೇರಣೆ ನೀಡಿದ್ದಾರೆ. ಅಷ್ಟಕ್ಕೂ ಅದೇ ಸಮುದಾಯದ ‘ಹುಸೇನಸಾಬ್ ಹಡಗಲಿ’ ಕೂಡ ಒಬ್ಬ ಮಹಾನ್ ದೇಶಭಕ್ತನಾಗಿದ್ದ, ಹೀಗಾಗಿ ಮುಸ್ಲಿಂ ಸಮುದಾಯಕ್ಕೂ ಈ ವಿಷಯ ಮುಜುಗರಕ್ಕೆ ಕಾರಣವಾಗಿದೆ.

ಕ್ರಿಮಿನಲ್ ಹಿನ್ನೆಲೆ:

ಬಂಧಿತ ಮಹ್ಮದ್ ಶಫಿ ನಾಶಿಪುಡಿ ಹಿಂದೆ ಪಟ್ಟಣದಲ್ಲಿ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ತಬ್ಲೀಕ್ ಮತ್ತು ಸುನ್ನಿ ವಿವಾದದಲ್ಲಿ ಸಿಲುಕಿದ್ದು, ಬ್ಯಾಡಗಿ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಆದರೆ ಇತ್ತೀಚೆಗೆ ಎರಡೂ ಸಮುದಾಯಗಳ ಮುಖಂಡರು ರಾಜಿ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದರು.

ಆರೋಪಿ ಸೈಯದ್ ನಾಶಿಪುಡಿ ಇಡೀ ಕುಟುಂಬವೇ ಕಳೆದ ಐದಾರು ದಶಕದಿಂದ ಮೆಣಸಿನಕಾಯಿ ವ್ಯಾಪಾರದಲ್ಲಿ ತೊಡಗಿದೆ. ಅದಾಗ್ಯೂ ಚಿಕ್ಕ ವಯಸ್ಸಿನಿಂದಲೇ ಮೆಣಸಿನಕಾಯಿ ವ್ಯವಹಾರ ಮಾಡುತ್ತಿದ್ದ ನಾಶಿಪುಡಿ, ನೂರಾರು ಕೋಟಿ ಮೆಣಸಿನಕಾಯಿ ವ್ಯವಹಾರ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ಬ್ಯಾಡಗಿಯಲ್ಲಿ ಕಾಂಗ್ರೆಸ್ ಮುಖಂಡನಾಗಿರುವ ನಾಶಿಪುಡಿ, ತನ್ನ ವ್ಯಾಪಾರದೊಂದಿಗೆ ರಾಜಕಾರಣದಲ್ಲೂ ಸಕ್ರಿಯರಾಗಿದ್ದರು. ರಾಜಸಭೆ ಚುನಾವಣಾ ಫಲಿತಾಂಶದ ಬಳಿಕ ನಡೆದ ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ನಾಶಿಪುಡಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ಆರೋಪ ಕೇಳಿ ಬಂದಿತ್ತು. ಬ್ಯಾಡಗಿಯಲ್ಲಿ ಬಿಜೆಪಿ ಮುಖಂಡರು ನಾಶಿಪುಡಿಯನ್ನು ಬಂಧಿಸುವಂತೆ ಆಗ್ರಹಿಸಿದ್ದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಾಶಿಪುಡಿ ಆರೋಪವನ್ನು ತಳ್ಳಿಹಾಕಿದ್ದರು. ಆಣೆಯನ್ನೂ ಮಾಡಿದ್ದರು. ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ಹಾಕಿಲ್ಲ. ವಿಧಾನಸೌಧದಲ್ಲಿ ನಡೆದ ಘಟನೆಗೂ ನನಗೂ ಸಂಬಂಧವಿಲ್ಲ. ಈ ಕುರಿತು ಯಾವುದೇ ತನಿಖೆಗೂ ನಾನು ಸಿದ್ಧ ಎಂದು ತಿಳಿಸಿದ್ದರು. ಬಳಿಕ ಧ್ವನಿ ಪರೀಕ್ಷೆಗಾಗಿ ಬ್ಯಾಡಗಿಯಿಂದ ನಾಶಿಪುಡಿಯನ್ನು ವಿಧಾನಸೌಧ ಪೊಲೀಸರು ಬೆಂಗಳೂರಿಗೆ ಕರೆದೊಯ್ದಿದ್ದರು. ಈಗ ಎಫ್‌ಎಸ್‌ಎಲ್ ವರದಿಯಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಹಾಕಿರುವುದು ದೃಢಪಟ್ಟಿದೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.

ಬೆಚ್ಚಿದ ಮಾರುಕಟ್ಟೆ:

ಇತ್ತ ನಾಶಿಪುಡಿ ಬಂಧನವಾಗುತ್ತಿದ್ದಂತೆ ಪಟ್ಟಣದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ವ್ಯಾಪಾರಸ್ಥರು ಬೆಚ್ಚಿ ಬಿದ್ದಿದ್ದಾರೆ. ಕಾರಣವಿಷ್ಟೇ ಕಳೆದ ಹಲವು ವರ್ಷಗಳಿಂದ ಮಾರುಕಟ್ಟೆ ಪ್ರಮುಖ ವ್ಯಾಪಾರಿಯಾಗಿದ್ದ ಮಹ್ಮದ್ ಶಫಿ ಯಾವ ಉದ್ದೇಶದಿಂದ ಹೀಗೆ ಹೇಳಿದ ಎಂಬ ಪ್ರಶ್ನೆಗಳನ್ನು ಅವರವರೇ ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಇನ್ನೂ ಕೆಲ ವರ್ತಕರು ಮಾರುಕಟ್ಟೆಯಲ್ಲಿ ಈತನ ಜೊತೆಗೆ ವಹಿವಾಟು ಮಾಡುವುದು ಹೇಗೆ ಎಂಬ ಚರ್ಚೆಗಳಲ್ಲಿ ತೊಡಗಿದ್ದಾರೆ.

ಮಹ್ಮದ್‌ಶಫಿ ಮೆಣಸಿನಕಾಯಿ ವರ್ತಕನಾಗಿರುವ ಈತನ ಕುರಿತು ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು, ಈ ಹೇಳಿಕೆ ಹಿಂದಿನ ಸತ್ಯಾಸತ್ಯತೆ ದೇಶದ ಜನರಿಗೆ ಗೊತ್ತಾಗಬೇಕು. ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವರ್ತಕನಾಗಿದ್ದ ಈತನು ಮಾಡಿದ ತಪ್ಪಿನಿಂದ ಮೆಣಸಿನಕಾಯಿ ಮಾರುಕಟ್ಟೆ ಹೆಸರಿಗೆ ಕಳಂಕ ಬಂದಿದೆ ಎಂದು ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ.

ಮನೆಯಿಂದ ಹೊರಬಾರದ ಸದಸ್ಯರು:

ಇನ್ನು ಬೆಂಗಳೂರಿನಲ್ಲಿ ನಾಶಿಪುಡಿ ಬಂಧಿತರಾದ ಬಳಿಕ ಇತ್ತ ಬ್ಯಾಡಗಿ ಪಟ್ಟಣದಲ್ಲಿರುವ ಮಹ್ಮದ್ ಶಫೀ ನಾಶಿಪುಡಿ ಅವರ ಮನೆಯ ಗೇಟ್‌ಗೆ ಬೀಗ ಹಾಕಲಾಗಿದ್ದು, ಕುಟುಂಬ ಸದಸ್ಯರು ಮನೆಯಿಂದ ಹೊರಬರುತ್ತಿಲ್ಲ.

ಮೌನಕ್ಕೆ ಜಾರಿದ ಅಂಜುಮನ್:

ಇತ್ತೀಚೆಗೆ ನಡೆದ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಚುನಾವಣೆಯಲ್ಲಿ ಗೆದ್ದು ಬಂದಿದ್ದ 11 ಜನ ಸದಸ್ಯರಲ್ಲಿ ಮಹ್ಮದ್ ಶಫಿ ಒಬ್ಬನಾಗಿದ್ದ. ಆದರೆ ನಾಶಿಪುಡಿ ಬಂಧನದಿಂದ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಮೌನಕ್ಕೆ ಜಾರಿದ್ದು, ಅವರ ಮುಂದಿನ ನಡೆಯನ್ನು ಕಾದು ನೋಡಬೇಕಾಗಿದೆ.