ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ವಿನೂತನದ ತಂತ್ರಜ್ಞಾನ ಹೊಸ ಹೊಸ ತಳಿಗಳತ್ತ ಅಣಿಯಾದಾಗಿ ಉತ್ಪಾದನೆಯತ್ತ ಗಮನಹರಿಸಿದಾಗ ಮಾತ್ರ ಬೇರೆ ದೇಶಗಳ ಜೊತೆ ಪೈಪೋಟಿ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ವಿನೂತನದ ತಂತ್ರಜ್ಞಾನ ಹೊಸ ಹೊಸ ತಳಿಗಳತ್ತ ಅಣಿಯಾದಾಗಿ ಉತ್ಪಾದನೆಯತ್ತ ಗಮನಹರಿಸಿದಾಗ ಮಾತ್ರ ಬೇರೆ ದೇಶಗಳ ಜೊತೆ ಪೈಪೋಟಿ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ತೋಟಗಾರಿಕೆ ವಿವಿಯ ಉದ್ಯಾಗಿರಿಯಲ್ಲಿ ಮಂಗಳವಾರ ರಾಷ್ಟ್ರೀಯ ದಿನಾಚರಣೆ, ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ ಹಾಗೂ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರಲ್ಲೂ ಸ್ಪರ್ಧೆ ಮಾಡಬೇಕಿದೆ. ಅದು ಮಾರುಕಟ್ಟೆ ಇರಬಹುದು, ಹೊಸ ತಳಿ, ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆಯುವಾಗ ನಮ್ಮ ಮುಂದಿರುವ ಸವಾಲುಗಳನ್ನು ನಾವು ಸ್ವೀಕರಿಸಬೇಕಾಗಿದೆ. ಅದಕ್ಕೆ ನಾವು ಕೂಡಾ ತಯಾರಾಗಬೇಕಾಗಿದೆ. ಇದರಿಂದ ಬೇರೆ ದೇಶಗಳ ಜೊತೆ ಸ್ಪರ್ಧೆಗೆ ಇಳಿಯಲು ಸಾಧ್ಯವಾಗುತ್ತದೆ ಎಂದರು.ಬಾಗಲಕೋಟೆಯಲ್ಲಿ ತೋಟಗಾರಿಕೆ ಸ್ಥಾಪನೆ ಆದಮೇಲೆ ಬಹಳಷ್ಟು ಹೊಸ ಹೊಸ ತಳಿಗಳನ್ನು ಹೊರತಂದಿದ್ದು, ಆ ತಳಿಗಳ ಪರಿಚಯ ಮಾಡುವಂತಹ ಪ್ರಯತ್ನ ಮಾಡಿದೆ. ನಾವೆಲ್ಲ ಈಗಾಗಲೇ ಬಹಳಷ್ಟು ರೈತರು ಅಳವಡಿಸಿಕೊಂಡಿದ್ದೇವೆ. ನಾವು ಈ ಭಾಗದಲ್ಲಿ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದೇವೆ. ಇದರ ಜೊತೆಗೆ ಪರ್ಯಾಯ ಬೆಳೆಗಳ ಅವಶ್ಯಕತೆ ಬಹಳಷ್ಟಿದೆ. ಸಾಧನೆ ಮಾಡಿದಂತ ರೈತರು ನಮಗೆಲ್ಲ ಪ್ರೇರಣೆಯಾಗಿದ್ದಾರೆ. 8 ಜಿಲ್ಲೆಯ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಮುಂದಿನ ಬಾರಿ ತಾವುಗಳ ಪ್ರಶಸ್ತಿ ಪಡೆಯುವಂತ ಸಾಧನೆ ಮಾಡುವತ್ತ ಹೆಜ್ಜೆ ಹಾಕಬೇಕು ಎಂದು ತಿಳಿಸಿದರು.ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ರೈತರಿಗೆ ಅವರ ಶ್ರಮಕ್ಕೆ ತಕ್ಕಂತೆ ಉತ್ಪಾದನೆ ಬಂದು ಅವರ ಆದಾಯಮಟ್ಟ ಹೆಚ್ಚಾಗಬೇಕಿದೆ. ವಿಶ್ವವಿದ್ಯಾಲಯ ಹೊರತಂದ ವಿನೂತನ ತಂತ್ರಜ್ಞಾನದ ಮೂಲಕ ಹೊಸ ಮಾದರಿಯ ತಳಿಗಳ ಮಾಹಿತಿ ಪಡೆದುಕೊಂದು ಕೃಷಿ ಮತ್ತು ತೋಟಗಾರಿಕೆಯಲ್ಲಿ ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು. ಮುಖ್ಯವಾಗಿ ಯುವಕರು ಕೃಷಿಯತ್ತ ಹೆಚ್ಚಿನ ಗಮನಹರಿಸುವ ಕೆಲಸವಾಗಬೇಕು. ಕೇವಲ ಕಬ್ಬನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಉತ್ತಮ ಬೆಳೆ ತೆಗೆಯುವುದರ ಜೊತೆಗೆ ಮಣ್ಣಿ ಫಲವತ್ತತೆ ಕಾಪಾಡಿಕೊಳ್ಳುವತ್ತ ಗಮನಹಿಸಬೇಕು ಎಂದು ತಿಳಿಸಿದರು.ಗದಗ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಡಾ.ಆರ್.ಸಿ.ಜಗದೀಶ, ಬಾಗಲಕೋಟೆ ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ಡಾ.ಮಂಜುನಾಥ ರೆಡ್ಡಿ, ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಸೇರಿದಂತೆ ತೋವಿವಿಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 8 ಜಿಲ್ಲೆಯ ಫಲಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರದಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಮೇಶ.ಎಚ್, ಬೆಂಗಳೂರು ನಗರ ಜಿಲ್ಲೆಯ ಮುನಿರಾಜು ಬಿ.ಎನ್, ರಾಮನಗರ ಜಿಲ್ಲೆಯ ದೇವರಾಜು.ಜಿ, ತುಮಕೂರಿನ ಚನ್ನಕೇಶವ ಸ್ವಾಮಿ, ಕೊಪ್ಪಳ ಜಿಲ್ಲೆಯ ಸುದೇಶಕುಮಾರ ಪಟ್ಟಣಶೆಟ್ಟಿ, ರಾಯಚೂರು ಜಿಲ್ಲೆಯ ಪದ್ಮಾವತಿ ಬಾಗೋಡಿ, ಬಳ್ಳಾರಿ ಜಿಲ್ಲೆಯ ಕೆ.ಬಸಪ್ಪ ಚನ್ನಬಸಪ್ಪ ಹಾಗೂ ವಿಜಯನಗರ ಜಿಲ್ಲೆಯ ಡಾ.ಮಹೇಶ್ವರ ಸ್ವಾಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ತೋಟಗಾರಿಕೆ ಮೇಳವನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಆಕರ್ಷಣೆಯಾಗಲಿ, ಇಂತಹ ಮೇಳದಿಂದ ಸಾಕಷ್ಟು ತೋಟಗಾರಿಕೆಯಲ್ಲಿ ಬದಲಾವಣೆ ಬರಲಿ. ಕಾರ್ಯಕ್ರಮವನ್ನು ತೋವಿವಿಯ ಕುಲಪತಿಗಳು 3 ದಿನಗಳ ಕಾಲ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಿದ್ದಾರೆ. ಮುಂದಿನ ಸಲ ಇನ್ನಷ್ಟು ವಿಶೇಷತೆಯಿಂದ ಕೂಡಿರಲಿ.-ಸತೀಶ ಜಾರಕಿಹೊಳಿ,
ಲೋಕೋಪಯೋಗಿ ಇಲಾಖೆ ಸಚಿವ.