ಪ್ಯಾರಾಮೆಡಿಕಲ್ ಕೋರ್ಸ್ ಕೇವಲ ಶಿಕ್ಷಣವಲ್ಲ

| Published : Oct 19 2024, 12:30 AM IST / Updated: Oct 19 2024, 12:31 AM IST

ಸಾರಾಂಶ

ಪ್ಯಾರಾಮೆಡಿಕಲ್ ಕೋರ್ಸ್ ಕೇವಲ ಶಿಕ್ಷಣವಲ್ಲ. ಅದು ಮನು ಕುಲದ ಸಂರಕ್ಷಣೆಗೆ ಅವಕಾಶ ಒದಗಿಸುತ್ತದೆ. ನೀವು ಪಡೆದ ಶಿಕ್ಷಣ ಸಮುದಾಯದ ರಕ್ಷಣೆಗೆ ಬಳಕೆಯಾಗಲಿ ಎಂದು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪ್ಯಾರಾಮೆಡಿಕಲ್ ಕೋರ್ಸ್ ಕೇವಲ ಶಿಕ್ಷಣವಲ್ಲ. ಅದು ಮನು ಕುಲದ ಸಂರಕ್ಷಣೆಗೆ ಅವಕಾಶ ಒದಗಿಸುತ್ತದೆ. ನೀವು ಪಡೆದ ಶಿಕ್ಷಣ ಸಮುದಾಯದ ರಕ್ಷಣೆಗೆ ಬಳಕೆಯಾಗಲಿ ಎಂದು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಹೇಳಿದರು.ಪಟ್ಟಣದ ಶಿವಗಿರಿ ಸಮುದಾಯ ಭವನದಲ್ಲಿ ಬಾಪೂಜಿ ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವೈದ್ಯರು ರೋಗ ಲಕ್ಷಣ ಕಂಡು ಹಿಡಿದು ಔಷಧ ಸೂಚಿಸುವ ವಿಜ್ಞಾನಿಯಾದರೆ, ರೋಗಿಯೊಂದಿಗೆ ಮಾನವೀಯ ಸಂಬಂಧ ಬೆಳೆಸಿ ಚಿಕಿತ್ಸೆ ಮೂಲಕ ವಿಜ್ಞಾನಕ್ಕೊಂದು ಮೌಲ್ಯ ತಂದುಕೊಡುವವರು ನೀವಾಗಬೇಕು. ಎಲ್ಲ ಸೇವೆಗಳೂ ಉದ್ಯಮ, ಲಾಭದ ದೃಷ್ಟಿಕೋನ ಪಡೆದುಕೊಳ್ಳುತ್ತಿರುವ ಇಂದಿನ ಆಧುನಿಕ ಜಗತ್ತಿನಲ್ಲಿ ಮಾನವೀಯತೆ ಮರೆಯಾಗುತ್ತಿರುವುದು ಕಳವಳಕಾರಿ ಎಂದರು. ಸದೃಢ ಆರೋಗ್ಯ ಪ್ರತಿಯೊಬ್ಬರ ಆದ್ಯತೆಯಾಗಿದೆ. ಈ ದಿಸೆಯಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಜವಾಬ್ದಾರಿ ಬಹು ಮಹತ್ವವಾಗಿದೆ. ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವ, ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸಿದಾಗ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ರೇಡಿಯಾಲಜಿಸ್ಟ್ ಹಾಗೂ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶಿವಾನಂದ್ ಮಾತನಾಡಿ, ಬಾಪೂಜಿ ಪ್ಯಾರಮೆಡಿಕಲ್ ಕಾಲೇಜಿನಲ್ಲಿ ಗುಣಮಟ್ಟದ ವಿದ್ಯಾರ್ಥಿಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಿದ್ಧರಾಗುತ್ತಿದ್ದು, ಎಲ್ಲರ ಜತೆ ಅವರು ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಲಿದ್ದಾರೆ. ರೋಗಿಯ ರೋಗಕ್ಕೆ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ ಜತೆಗೆ ಅವರ ಮನಸ್ಸಿಗೆ ಧನಾತ್ಮಕ ಮಾತಿನ ಚಿಕಿತ್ಸೆಯೂ ಅಗತ್ಯ. ಈ ನಿಟ್ಟಿನ ಚಿಂತನೆ ಪ್ರತಿಯೊಬ್ಬ ವಿದ್ಯಾರ್ಥಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಿಪಿಐ ರುದ್ರೇಶ್ ಮಾತನಾಡಿ, ಜೀವನದಲ್ಲಿ ಒಮ್ಮೆ ಮಾತ್ರ ದೊರೆಯುವ ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು, ದೊರೆತ ಅವಕಾಶ ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಕೊಡುಗೆ ಸಲ್ಲಿಸುವ ರೀತಿಯಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ ಎಂದರು.ರಾಜ್ಯ ಸರ್ಕಾರದಿಂದ ಅತ್ಯುತ್ತಮ ಕಂದಾಯ ಅಧಿಕಾರಿ ಎಂದು ಇತ್ತೀಚೆಗೆ ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಂದ ಪ್ರಶಸ್ತಿ ಸ್ವೀಕರಿಸಿದ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಅವರನ್ನು ಸನ್ಮಾನಿಸಲಾಯಿತು.

ಬಾಪೂಜಿ ಸಂಸ್ಥೆ ಸಂಸ್ಥಾಪಕ ಬಿ. ಪಾಪಯ್ಯ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗದ ಜ್ಞಾನ ಗಂಗೋತ್ರಿ ಪ್ಯಾರಾ ಮೆಡಿಕಲ್ ಕಾಲೇಜು ಚೇರ್ಮನ್ ಬಿ.ಯು. ವೀರೇಂದ್ರ, ಸಿಡಿಪಿಒ ರತ್ನಮ್ಮ, ಸಂಸ್ಥೆ ಕಾರ್ಯದರ್ಶಿ ಪವಿತ್ರ, ಉಪನ್ಯಾಸಕ ಮದನ್ ಸಹಿತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.