ಸಾರಾಂಶ
ಲಕ್ಷ್ಮೀಪುರಂ ಪೊಲೀಸ್ ಠಾಣೆ ಹಿಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಒಂದು ಭಾಗವನ್ನು ಆರ್.ಟಿ.ಒ ಕಚೇರಿ ಬಳಿಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತ ಬ್ಯಾರಿಕೇಡ್ ಅಡ್ಡ ಇಟ್ಟು ವಾಹನ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ.ತಮ್ಮ ಮನೆ ಎದುರು ಯಾವುದೇ ವಾಹನಗಳು ನಿಲ್ಲಕೂಡದು ಮತ್ತು ಸಾರ್ವಜನಿಕರು ಓಡಾಡಕೂಡದು ಎಂಬ ದೂರಾಲೋಚನೆ ಮತ್ತು ದುರಾಲೋಚನೆಯಿಂದ ಇಂತಹ ಅನಧಿಕೃತ ಬ್ಯಾರಿಕೇಡುಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ರಸ್ತೆಯ ಒಂದು ಭಾಗ ಅನುಪಯುಕ್ತವಾಗುವಂತೆ ಮಾಡಿದ್ದಾರೆ. ನೋ ಪಾರ್ಕಿಂಗ್ ಜೊತೆಗೆ ನೋ ವಾಕಿಂಗ್ ಎಂದು ಸಾರ್ವಜನಿಕರ ಓಡಾಟಕ್ಕೆ ತಡೆಯೊಡ್ಡಿದ್ದಾರೆ.ವಿಪರ್ಯಾಸವೆಂದರೆ ಈ ಅನಧಿಕೃತ ಬ್ಯಾರಿಕೇಡುಗಳನ್ನು ಅಡ್ಡವಾಗಿ ಇಟ್ಟ ಜಾಗದಲ್ಲಿ ಪೊಲೀಸರು ಅಳವಡಿಸಿದ ಅಧಿಕೃತ ನೋ ಪಾರ್ಕಿಂಗ್ ಫಲಕವೂ ಇದೆ. ಅಧಿಕೃತ ನೋ ಪಾರ್ಕಿಂಗ್ ಫಲಕದ ಪಕ್ಕದಲ್ಲಿಯೇ ಅನಧಿಕೃತ ಬ್ಯಾರಿಕೇಡ್ ಇಟ್ಟು ರಸ್ತೆಯ ಒಂದು ಭಾಗವನ್ನೇ ಬಂದ್ ಮಾಡಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸುವುದು ದಂಡನಾರ್ಹ ಅಪರಾಧ.ಯಾವುದೇ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರು ಓಡಾಡದಂತೆ ತಡೆ ಉಂಟುಮಾಡುವುದು ಭಾರತೀಯ ನ್ಯಾಯ ಸಂಹಿತೆ, 2023 ಸೆಕ್ಷನ್ 285 ರ ಪ್ರಕಾರ ದಂಡನಾರ್ಹ ಅಪರಾಧ. ಈ ಅಪರಾಧಿಗಳಿಗೆ ನ್ಯಾಯಾಲಯವು 5 ಸಾವಿರ ರೂ. ದಂಡ ವಿಧಿಸಬಹುದು.ಯಾವುದೇ ವ್ಯಕ್ತಿಗಳು ಯಾವುದೇ ರೀತಿಯಲ್ಲಿ ಸಾರ್ವಜನಿಕ ಉಪದ್ರವವನ್ನು ಮಾಡಿದರೂ ಅಂತಹವರಿಗೆ ಭಾರತೀಯ ನ್ಯಾಯ ಸಂಹಿತೆ 2023 ಸೆಕ್ಷನ್ 292 ಪ್ರಕಾರ 1 ಸಾವಿರ ರೂ. ದಂಡ ವಿಧಿಸಬಹುದು.ಸಾರ್ವಜನಿಕರು ಯಾವುದಾದರೂ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದರೆ ಅಂತಹ ಪ್ರತಿಭಟನಕಾರರು ರಸ್ತೆತಡೆ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ನಮ್ಮ ಪೊಲೀಸರು ಎಫ್.ಐ.ಆರ್ ಸಲ್ಲಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುತ್ತಾರೆ. ಆದರೆ ಪೊಲೀಸ್ ಠಾಣೆಯ ಹಿಂಬಾಗಿಲಿನ ಬಳಿಯೇ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಇಟ್ಟು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರ ಸಂಚಾರಕ್ಕೆ ಅಡೆ-ತಡೆ ಒಡ್ಡಿದ ಮಹಾನುಭಾವರ ವಿರುದ್ಧ ಪೊಲೀಸರು ಕ್ರಮ ಜರುಗಿಸಿಲ್ಲವೇಕೆ?ಈ ಕೂಡಲೇ ಮೈಸೂರು ನಗರ ಪೊಲೀಸರು ಎಚ್ಚೆತ್ತು ಇಂತಹ ಅಧಿಕೃತ ಬ್ಯಾರಿಕೇಡುಗಳನ್ನು ವಶಪಡಿಸಿಕೊಂಡು ಅವುಗಳನ್ನು ರಸ್ತೆಗೆ ಅಡ್ಡವಾಗಿ ಇರಿಸಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸಿ ಅಪರಾಧ ಎಸಗಿದ ಮಹಾನುಭಾವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 285 ಹಾಗೂ 292 ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಾರ್ವಜನಿಕರ ಹಕ್ಕುಗಳಿಗೆ ಭಂಗ ಉಂಟು ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ.- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು.