ಬಸ್ ಹತ್ತುತ್ತಿದ್ದ ಪ್ರಯಾಣಿಕ ಕೆಳಗೆ ಬಿದ್ದು ಗಂಭೀರ ಗಾಯ

| Published : Aug 07 2024, 01:04 AM IST

ಸಾರಾಂಶ

ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಯಾಣಿಕನನ್ನು ಸಾರ್ವಜನಿಕರು ಮತ್ತು ಸಾರಿಗೆ ಬಸ್ ಚಾಲಕ ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಸಂಚಾರಿ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಕನ್ನಡಪ್ರಭ ವಾರ್ತೆ ಕನಕಪುರ

ಬಸ್ ಹತ್ತಲು ಹೋದ ಪ್ರಯಾಣಿಕ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಾರಿಗೆ ಬಸ್ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.

ರಾಮನಗರದ ಐಜೂರು ಬಡಾವಣೆ ಮೂಲದ ಗಂಗಾಧರ್( ೪೫) ಗಾಯಗೊಂಡ ವ್ಯಕ್ತಿ ಎಂದು ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ ಸುಮಾರು ೭:೩೦ರ ಸಮಯದಲ್ಲಿ ಅಶ್ವಮೇಧ ಬಸ್ ಹತ್ತಲು ಹೋದಾಗ ಈ ಅವಘಡ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಗಂಗಾಧರ್ ದಯಾನಂದ್ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿಗೆ ಹೋಗಬೇಕಿದ್ದ ಅಶ್ವಮೇಧ ಎಕ್ಸ್ ಪ್ರೆಸ್ ಸಾರಿಗೆ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರು ಸೀಟು ಮೀಸಲಿರಿಸಲು ಚಲಿಸುತ್ತಿದ್ದ ಬಸ್ಸಿನ ಹಿಂದೆ ಹೋಗುವಾಗ ಗಂಗಾಧರ್ ಕೆಳಗೆ ಬಿದ್ದು, ತಲೆಯ ಭಾಗದಲ್ಲಿ ಗಂಭೀರ ಪೆಟ್ಟಾಗಿದೆ ಎಂದು ಸ್ಥಳದಲ್ಲಿದ್ದ ಪ್ರಯಾಣಿಕರು ಮಾಹಿತಿ ನೀಡಿದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಯಾಣಿಕನನ್ನು ಸಾರ್ವಜನಿಕರು ಮತ್ತು ಸಾರಿಗೆ ಬಸ್ ಚಾಲಕ ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಸಂಚಾರಿ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ:

ಪ್ರಯಾಣಿಕ ಗಾಯಗೊಂಡ ಘಟನೆ ನಡೆದ ಬೆನ್ನಲ್ಲೇ ಸಾರ್ವಜನಿಕರು ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಬೆಂಗಳೂರಿಗೆ ಸಾವಿರಾರು ನೌಕರರು ಸಾರ್ವಜನಿಕರು ಪ್ರಯಾಣ ಬೆಳೆಸುತ್ತಾರೆ. ಆದರೆ ಪ್ರಯಾಣಿಕರಿಗೆ ತಕ್ಕಂತೆ ಸಾರಿಗೆ ಸೌಲಭ್ಯ ಕಲ್ಪಿಸುತ್ತಿಲ್ಲ, ಬಸ್ ಕೊರತೆ ವಿರುದ್ಧ ಪ್ರತಿಭಟನೆ ನಡೆಸಿದರೂ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಿಲ್ಲ. ಈ ಘಟನೆಗೆ ಸಾರಿಗೆ ಇಲಾಖೆ ಅಧಿಕಾರಿಗಳೇ ಕಾರಣ. ಮುಂದೆ ಇಂತಹ ಅವಘಡಗಳು ಸಂಭವಿಸದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.