ಹೊಸದುರ್ಗ ಪಟ್ಟಣದ ಗಣೇಶ ಸದನದಲ್ಲಿ ವಿಶ್ವಮಾನವ ಹಕ್ಕುಗಳ ದಿನಾಚರಣೆ ಹಾಗೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮವನ್ನು ಹೊಸದುರ್ಗ ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ವೈ.ಕೆ.ಬೇನಾಳ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಕಾನೂನಿನಡಿ ಪ್ರತಿಯೊಬ್ಬರೂ ಜೀವಿಸಿದಲ್ಲಿ ನೆಮ್ಮದಿಯ ಬದುಕು ನಮ್ಮದಾಗುತ್ತದೆ ಎಂದು ಹೊಸದುರ್ಗ ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ವೈ.ಕೆ.ಬೇನಾಳ ಅವರು ತಿಳಿಸಿದರು.ಪಟ್ಟಣದ ಗಣೇಶ ಸದನದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಗಣೇಶ ಸದನ ಟ್ರಸ್ಟ್ ಹಾಗೂ ವರ್ತಕರ ಸಂಘದ ಸಂಯುಕ್ತಾಶ್ರಯದಲ್ಲಿ ವಿಶ್ವಮಾನವ ಹಕ್ಕುಗಳ ದಿನಾಚರಣೆ ಹಾಗೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಯುತ್ತಿರುವುದು ಕಾನೂನಿನಡಿ. ಕಾನೂನಿಗೆ ವಿರುದ್ಧವಾಗಿ ಆಡಳಿತ ಮಾಡಿದಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ. ಕಾನೂನಿನ ಮುಂದೆ ಪ್ರತಿಯೊಬ್ಬರೂ ಸರಿ ಸಮಾನರು. ಹುಟ್ಟಿನಿಂದ ಸಾಯುವ ವರೆಗೂ ಕಾನೂನಿನಡಿ ಜೀವನ ಮಾಡಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ಮಾನವನ ಹಕ್ಕುಗಳು, ಕರ್ತವ್ಯಗಳು ಹಾಗೂ ಗ್ರಾಹಕರ ಬಗೆಗಿನ ಕಾನೂನು ತಿಳಿದುಕೊಳ್ಳುವುದು ಅತೀ ಅವಶ್ಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಏ.ಎಲ್.ಬೊಮ್ಮಣ್ಣ ಮಾತನಾಡಿದರು. ಪ್ಯಾನಲ್ ವಕೀಲರಾದ ಪಿ.ಕೆ.ಪಂಚಾಕ್ಷರಪ್ಪ ಅವರು ವಿಶ್ವಮಾನವ ಹಕ್ಕುಗಳ ದಿನದ ಬಗ್ಗೆ ಹಾಗೂ ಕೆ.ಟಿ.ಮಮತ ಅವರು ರಾಷ್ಟ್ರೀಯ ಗ್ರಾಹಕರ ದಿನದ ಬಗ್ಗೆ ಉಪನ್ಯಾಸ ನೀಡಿದರು. ಈ ವೇಳೆ ವಕೀಲರ ಸಂಘದ ಕಾರ್ಯದರ್ಶಿ ಈರಬಸಪ್ಪ, ವಕೀಲರಾದ ಕೆ.ಟಿ.ಮಮತಾ, ಸೀತರಾಘವ ಬ್ಯಾಂಕ್ ಉಪಾಧ್ಯಕ್ಷ ಆದಿರಾಜಯ್ಯ, ವರ್ತಕರ ಸಂಘದ ಅಧ್ಯಕ್ಷ ಬಾಹುಬಲಿ, ಅಜ್ಜಪ್ಪ, ಕುಶ್ ಕುಮಾರ್ ಇನ್ನಿತರ ಮುಖಂಡರಿದ್ದರು.