ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿಯೊಬ್ಬರೂ ಆಧ್ಯಾತ್ಮವನ್ನು ಅನುಸರಿಸುವುದರಿಂದ ನೆಮ್ಮದಿಯ ಜೀವನ ನಡೆಸಬಹುದು ಎಂದು ಹರಿಹರ ಪ್ರಾಧಿಕಾರದ ಆಯುಕ್ತ ಆರ್.ಯೋಗಾನಂದ ತಿಳಿಸಿದರು.ನಗರದ ಹೊರವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಡಾ.ರಾಮಚಂದ್ರ ಗುರೂಜಿ ನೇತೃತ್ವದಲ್ಲಿ ಆಯೋಜಿಸಿದ್ದ ಅಂತರ್ ಮನಸ್ಸಿನ ಅದ್ಭುತ ಶಕ್ತಿಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಆಧ್ಯಾತ್ಮವನ್ನು ಅನುಸರಿಸುವಾಗ ಆಗುವ ಅನುಭವವೇ ಬೇರೆ. ಅದರಿಂದ ನಮ್ಮಲ್ಲಿ ಒಳ್ಳೆಯ ಚಿಂತನೆಗಳು, ಆಲೋಚನೆಗಳು, ಬೆಳವಣಿಗೆಗಳು ನಮ್ಮಲ್ಲಿ ಮೂಡುತ್ತವೆ. ಧರ್ಮಮಾರ್ಗದಲ್ಲಿ ನಡೆಯುವುದರಿಂದ ತಪ್ಪುಗಳು ಕಡಿಮೆಯಾಗುತ್ತವೆ. ದೌರ್ಬಲ್ಯಗಳನ್ನು ದೂರವಾಗಿಸಲು ಆಧ್ಯಾತ್ಮ ಸಹಕಾರಿಯಾಗಿದೆ ಎಂದು ನುಡಿದರು.ಇಂದಿನ ಒತ್ತಡದ ಜೀವನದಿಂದ ಪಾರಾಗುವುದಕ್ಕೆ ಆಧ್ಯಾತ್ಮವೊಂದೇ ಪರ್ಯಾಯ ಮಾರ್ಗವಾಗಿದೆ. ಯೋಗ, ಧ್ಯಾನ ಮಾಡುವುದರಿಂದ ಮನಸ್ಸು ನಿರ್ಮಲವಾಗುತ್ತದೆ. ಏಕಾಗ್ರತೆ ಮೂಡುತ್ತದೆ. ಒತ್ತಡವನ್ನು ದೂರವಾಗಿಸಿ ನೆಮ್ಮದಿಯನ್ನು ಮೂಡಿಸುತ್ತದೆ. ಆಧ್ಯಾತ್ಮದ ಅನುಭವ ಪಡೆದವರಿಗೆ ಅದರ ಶಕ್ತಿ ಏನೆಂಬುದು ಗೊತ್ತಿರುತ್ತದೆ. ಎಲ್ಲರೂ ಆಧ್ಯಾತ್ಮ ಮಾರ್ಗದಲ್ಲಿ ಮುನ್ನಡೆದಾಗ ಒಳ್ಳೆಯ ಜೀವನವನ್ನು ಕಂಡುಕೊಳ್ಳಬಹುದು ಎಂದರು.
ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಆಧ್ಯಾತ್ಮ ಚಿಂತನೆಗಳನ್ನು ಮೂಡಿಸುವುದು ಒಳ್ಳೆಯದು. ಇದರಿಂದ ಅವರು ಸಂಸ್ಕಾರವಂತರಾಗಿ ಬೆಳವಣಿಗೆ ಕಾಣುತ್ತಾರೆ. ಏಕಾಗ್ರತೆ ಹೆಚ್ಚುವುದರಿಂದ ಬುದ್ಧಿ ಚುರುಕಾಗುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಶಕ್ತಿ ಬರುತ್ತದೆ. ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಅವರಲ್ಲಿ ಹೆಚ್ಚುತ್ತದೆ ಎಂದರು.
ಅಂತಾರಾಷ್ಟ್ರೀಯ ಖ್ಯಾತಿಯ ಫಾಸ್ಟ್‌ಲೈಫ್ ರಿಗ್ರೇಷನ್ ಥೆರಪಿಸ್ಟ್ ಡಾ.ರಾಮಚಂದ್ರ ಗುರೂಜಿ ಮಾತನಾಡಿ, ದೈವಿಕ ಭಾವನೆ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಒಳ್ಳೆಯದನ್ನು ಆಲೋಚಿಸುವುದರತ್ತ ಮನಸ್ಸನ್ನು ಕೇಂದ್ರೀಕರಿಸುತ್ತದೆ. ಆಧ್ಯಾತ್ಮದಿಂದ ಆರೋಗ್ಯವಂತ ಜೀವನ ನಡೆಸುವ ಎಲ್ಲಾ ಅವಕಾಶಗಳಿದ್ದರೂ ಅದರ ಮಹತ್ವ ಇನ್ನೂ ಹೆಚ್ಚಿನವರಿಗೆ ತಿಳಿದಿಲ್ಲ ಎಂದರು.
ಆಧ್ಯಾತ್ಮದಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಶಕ್ತಿ ಬರುತ್ತದೆ. ಶಾಂತಿಯನ್ನು ಬಯಸುತ್ತಾ ಒಳ್ಳೆಯದನ್ನೇ ಆಲೋಚಿಸುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಜನರ ಮನಸ್ಥಿತಿಯೂ ಉತ್ತಮವಾಗಿರುತ್ತದೆ. ಸುಪ್ತ ಮನಸ್ಸಿನಲ್ಲಿರುವ ನಿಗೂಢ ಶಕ್ತಿಗಳ ಮಹತ್ವವನ್ನು ಅರಿತು ಮೌಲ್ಯಯುತ ಬದುಕನ್ನು ನಡೆಸುವಂತೆ ತಿಳಿಹೇಳಿದರು.ಕಾರ್ಯಕ್ರಮದಲ್ಲಿ ಆರ್.ಯೋಗಾನಂದ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಡಾ.ಮನು, ಹಿಮ ಮನು, ಸ್ಟೆಫಿ, ಮಧುಸೂಧನ್, ಅನುಪಮಾ ಇದ್ದರು.