ಬೆಳ್ಳೂಡಿ-ರಾಮತೀರ್ಥ ಸೇತುವೆಗೆ ಶೀಘ್ರವೇ ಶಾಶ್ವತ ಪರಿಹಾರ

| Published : Nov 17 2025, 01:15 AM IST

ಬೆಳ್ಳೂಡಿ-ರಾಮತೀರ್ಥ ಸೇತುವೆಗೆ ಶೀಘ್ರವೇ ಶಾಶ್ವತ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ದುರಸ್ಥಿ ಕಾಣದೇ ನನೆಗುದಿಗೆ ಬಿದ್ದಿರುವ ಬೆಳ್ಳೂಡಿ- ರಾಮತೀರ್ಥ ಸೇತುವೆ ನಿರ್ಮಾಣಕ್ಕೆ ಶೀಘ್ರವೇ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಲೊಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.

- ಸೇತುವೆ ಪರಿಶೀಲನೆ ಬಳಿಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಯ

- - -

ಕನ್ನಡಪ್ರಭ ವಾರ್ತೆ ಹರಿಹರ

ದುರಸ್ಥಿ ಕಾಣದೇ ನನೆಗುದಿಗೆ ಬಿದ್ದಿರುವ ಬೆಳ್ಳೂಡಿ- ರಾಮತೀರ್ಥ ಸೇತುವೆ ನಿರ್ಮಾಣಕ್ಕೆ ಶೀಘ್ರವೇ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಲೊಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ತಾಲೂಕಿನ ಬೆಳ್ಳೂಡಿ ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಶನಿವಾರ ಆಗಮಿಸಿದ್ದ ಸಂದರ್ಭ ಗ್ರಾಮಸ್ಥರ ಒತ್ತಾಯದ ಮೇರೆಗೆ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರೀಶೀಲನೆ ನಡೆಸಿ ಅವರು ಮಾತನಾಡಿದರು. ಈ ಸೇತುವೆ ದುರಸ್ತಿಗೆ ಮೂರು ಪರ್ಯಾಯ ಆಯ್ಕೆಗಳಿವೆ. ತಜ್ಞರೊಂದಿಗೆ ಚರ್ಚೆ ನಡೆಸಿ ಯಾವ ಅಯ್ಕೆ ಸೂಕ್ತ ಎಂದುಬು ನಿರ್ಧರಿಸಿ, ಬೇಗನೆ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದರು.

ಕುಸಿದಿರುವ ಸೇತುವೆ ಮತ್ತು ಸುಸ್ಥಿತಿಯಲ್ಲಿರುವ ಸೇತುವೆ ಪರಿಶೀಲನೆ ನಡೆಸಿ ಹಳೆಯ ಸೇತುವೆಗೆ ಹೊಸ ಸೇತುವೆ ಜೋಡಣೆ ಮಾಡುವ ಅವಕಾಶವಿದ್ದರೆ, ಅದನ್ನೂ ಮಾಡಲಾಗುವುದು. ಇಲ್ಲವೇ ಸಂಪೂರ್ಣವಾಗಿ ಸೇತುವೆ ದ್ವಂಸಗೊಳಿಸಿ ಹೊಸ ಸೇತುವೆ ನಿರ್ಮಾಣ ಮಾಡುವುದೇ ಅಥವಾ ಮೂರನೇ ಪರ್ಯಾಯ ಮಾರ್ಗ ಯಾವುದಾದರು ಇದೆಯೇ ಎನ್ನುವುದನ್ನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಸ್ಥಳದಲ್ಲಿದ್ದ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಮಾತನಾಡಿ, ಸೇತುವೆ ಬಿದ್ದಿರುವ ಕಾರಣ ಸುತ್ತಮುತ್ತಲಿನ ಹತ್ತರಿಂದ ಹದಿನೈದು ಗ್ರಾಮಗಳ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ತಾಲೂಕು ಕೇಂದ್ರಕ್ಕೆ ಭೇಟಿ ನೀಡಲು ೮ ರಿಂದ ೧೦ ಕಿ.ಮೀ. ಸುತ್ತುವರಿದು ಹೋಗುವ ಪರಿಸ್ಥಿತಿಯಿದೆ. ಈ ಸೇತುವೆ ದುರಸ್ಥಿ ಮಾಡಿದರೆ, ಅಂದಾಜು ೧ ಕಿ.ಮೀ. ದೂರದಲ್ಲಿ ಹರಿಹರವನ್ನು ಸಂಪರ್ಕಿಸಲು ಸಹಾಯವಾಗುತ್ತದೆ ಎಂಬುದನ್ನು ಸಚಿವರ ಗಮನಕ್ಕೆ ತಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಮುಖಂಡರಾದ ಹೊದಿಗೆರೆ ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್ ಪಟೇಲ್, ಗ್ರಾಪಂ ಅಧ್ಯಕ್ಷ ಸುದೀಪ್ ಗೌಡ, ಸದಸ್ಯ ಎಚ್.ಉಮೇಶ್, ತಾ.ಪಂ ಮಾಜಿ ಸದಸ್ಯ ಜಿ.ಬಿ.ಹಾಲೇಶ್‌ ಗೌಡ, ಅದಾಪುರದ ವೀರಭದ್ರಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಕುಮಾರ್‌ ಇತರರು ಇದ್ದರು.

- - -

-15HRR.02:

ಹರಿಹರ ತಾಲೂಕಿನಲ್ಲಿ ದುರಸ್ಥಿ ಕಾಣದೇ ನನೆಗುದಿಗೆ ಬಿದ್ದಿರುವ ಬೆಳ್ಳೂಡಿ- ರಾಮತೀರ್ಥ ನಡುವಿನ ಸೇತುವೆ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು. ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀ, ನಂದಿಗಾವಿ ಶ್ರೀನಿವಾಸ್ ಇನ್ನಿತರ ಮುಖಂಡರು, ಗ್ರಾಮಸ್ಥರು ಇದ್ದರು.