ಸಾರಾಂಶ
ಕಾರವಾರ: ಸೀಬರ್ಡ್ ನೌಕಾನೆಲೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡುಬರುವ ಕೃತಕ ನೆರೆಯನ್ನು ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರತಿ ಮಳೆಗಾಲದಲ್ಲಿ ಸೀ ಬರ್ಡ್ ನೌಕಾನೆಲೆ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡದಿಂದ ಬರುವ ನೀರು ಸರಾಗವಾಗಿ ಹರಿದು ಸಮುದ್ರ ಸೇರಲು ಇರುವ ಅಡೆತಡೆಗಳನ್ನು ಶಾಶ್ವತವಾಗಿ ನಿವಾರಿಸುವ ನಿಟ್ಟಿನಲ್ಲಿ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ಸೀಬರ್ಡ್ ನೌಕಾನೆಲೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮಳೆ ಕಡಿಮೆಯಾದ ಕೂಡಲೇ ಆ ಪ್ರದೇಶಕ್ಕೆ ಭೇಟಿ ನೀಡಿ ಅಗತ್ಯ ಮಾರ್ಗೋಪಾಯಗಳನ್ನು ಕಂಡುಕೊಂಡು ಅವುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದ ಸಂಸದರು, ನೌಕಾನೆಲೆಯ ಅಧಿಕಾರಿಗಳು ಜಿಲ್ಲಾಡಳಿತದ ಈ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಕಾರವಾರದಿಂದ ಭಟ್ಕಳದವರೆಗಿನ ರೈಲು ಮಾರ್ಗದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿಗಳು ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ಕೈಗೊಳ್ಳಬೇಕಾಗಿರುವ ಸುಧಾರಣಾ ಕ್ರಮಗಳು ಹಾಗೂ ರೂಪಿಸಬಹುದಾದ ಯೋಜನೆಗಳ ಕುರಿತ ವಿವರವಾದ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಕೊಂಕಣ ರೈಲ್ವೆಯ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ ರೈಲ್ವೆಗೆ ಸಂಬಂಧಪಟ್ಟ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಕುರಿತಂತೆ ರೈಲ್ವೆ ಖಾತೆಯ ಸಚಿವರೊಂದಿಗೆ ಚರ್ಚಿಸಿ ಅವುಗಳ ಸಂಪೂರ್ಣ ಅನುಷ್ಠಾನಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಕೊಂಕಣ ರೈಲ್ವೆಗೆ ಸಂಬಂಧಪಟ್ಟಂತೆ ಬಾಕಿ ಇರುವ ಭೂ ಸ್ವಾಧೀನ ಪ್ರಕರಣಗಳ ಪರಿಹಾರದ ಮೊತ್ತವನ್ನು ಸಂತ್ರಸ್ತರಿಗೆ ಶೀಘ್ರದಲ್ಲಿ ಪಾವತಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವವರಿಗೆ ವೈದ್ಯಕೀಯ ನೆರವಿನೊಂದಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸವಂತೆ ತಿಳಿಸಿದ ಅವರು, ವಿಕೋಪ ಸಂದರ್ಭದಲ್ಲಿ ಎಲ್ಲ ಅಧಿಕಾರಿಗಳು ಸಿಬ್ಬಂದಿ ಸೇವಾ ಮನೋಭಾವ ಮತ್ತು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸಂಬಂಧಪಟ್ಟ ಇಲಾಖೆಗಳು ವಿಪತ್ತು ಎದುರಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳೊಂದಿಗೆ ಸದಾ ಜಾಗರೂಕರಾಗಿರಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಎಸ್ಪಿ ಎಂ. ನಾರಾಯಣ್, ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಸೀಬರ್ಡ್, ನೌಕಾನಲೆ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಮತ್ತಿತರ ಇಲಾಖೆಗಳ ಅಧಿಕಾರಿಗಳು ಇದ್ದರು.ಘಟನೆಗೆ ಕೇಂದ್ರ ಸರ್ಕಾರ ಹೊಣೆ: ಮಂಕಾಳು ವೈದ್ಯಅಂಕೋಲಾ: ತಾಲೂಕಿನಲ್ಲಿ ನಡೆದ ಭೀಕರ ಗುಡ್ಡ ಕುಸಿತಕ್ಕೆ ಕೇಂದ್ರ ಸರ್ಕಾರವೆ ನೇರ ಹೊಣೆ. ಕೇಂದ್ರದ ಚತುಷ್ಪಥ ಯೋಜನೆಯ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿ ಈ ಅನಾಹುತ ನಡೆಯಲು ಕಾರಣವಾಗಿದೆ. ಐಆರ್‌ಬಿ ಕಂಪನಿ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಾದು ಹೋಗಿರುವ ಚತುಷ್ಪಥ ಹೆದ್ದಾರಿಯಿಂದ ಅನೇಕ ದುರ್ಘಟನೆಗಳು ನಡೆಯುತ್ತಿದೆ. ಎಷ್ಟೊ ಜನ ಪ್ರಾಣ ತೆತ್ತಿದ್ದಾರೆ. ಐಆರ್‌ಬಿ ಅಧಿಕಾರಿಗಳು ಮನ ಬಂದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕಿಡಿಕಾರಿದರು.
ಈಗಾಗಲೇ ಗುಡ್ಡ ಕುಸಿತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ವಿಳಂಬವಾಗುತ್ತಿದೆ. ಆದಷ್ಟು ಬೇಗ ರಕ್ಷಣಾ ಕಾರ್ಯವನ್ನು ಮಾಡಿ ಮತ್ತೆ ಮಣ್ಣಿನಡಿಯಲ್ಲಿ ಯಾರು ಇದ್ದಾರೆ, ಎಷ್ಟು ವಾಹನ ಇದೆ ಎನ್ನುವುದನ್ನು ನೋಡಿ ಹೊರ ತೆಗೆಯಲಾಗುವುದು ಎಂದರು.ಡಿಸಿ ವರ್ಗಾವಣೆಗೆ ಬೇಸರ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಗಾಲ ಆರಂಭದಲ್ಲಿಯೇ ನಾನು ಹಿಂದಿನ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರನ್ನು ಕ್ಷೇತ್ರದ ಎಲ್ಲ ಅಪಾಯ ಸ್ಥಳಗಳ ಕುರಿತು ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ತಿಳಿಸಿದ್ದೆ. ಇಂತಹ ಸಂದರ್ಭದಲ್ಲಿಯೆ ಅವರ ವರ್ಗಾವಣೆ ಮಾಡಿರುವುದು ಬೇಸರ ತಂದಿದೆ ಎಂದರು.