ವಿದ್ಯುತ್ ಹೈಟೆನ್ಷನ್ ವೈರ್ ತಗುಲಿ ವ್ಯಕ್ತಿ ಸಾವು

| Published : May 11 2024, 12:33 AM IST

ಸಾರಾಂಶ

ಕುಕನೂರು ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ ಮೇಕೆಗಳನ್ನು ಮೇಯಿಸಿಕೊಂಡು ಬರಲು ಹೋಗಿದ್ದ ಈರಪ್ಪ ಕುರಿ ವಿದ್ಯುತ್ ಹೈಟೆನ್ಷನ್ ವೈರ್ ತಗುಲಿ ಗುರುವಾರ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪವನ ವಿದ್ಯುತ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಕನೂರು: ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ ಮೇಕೆಗಳನ್ನು ಮೇಯಿಸಿಕೊಂಡು ಬರಲು ಹೋಗಿದ್ದ ವ್ಯಕ್ತಿಗೆ ವಿದ್ಯುತ್ ಹೈಟೆನ್ಷನ್ ವೈರ್ ತಗುಲಿ ಗುರುವಾರ ಮೃತಪಟ್ಟ ಘಟನೆ ಜರುಗಿದೆ.

ಈರಪ್ಪ ಕುರಿ (೫೫) ಮೃತ ವ್ಯಕ್ತಿ. ಗುರುವಾರ ಮೇಕೆಗಳನ್ನು ಮೇಯಿಸಿಕೊಂಡು ಬರಲು ಹೋಗಿದ್ದವರು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಮನೆಗೆ ಮೇಕೆಗಳು ಬಂದರೂ ಈರಪ್ಪ ಮಾತ್ರ ಬರಲಿಲ್ಲ. ಇದರಿಂದ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆದರೆ, ತಡರಾತ್ರಿ ಗ್ರಾಮದ ಹೊರವಲಯದಲ್ಲಿರುವ ಮರದ ಕೆಳಗೆ ಶವವಾಗಿ ಪತ್ತೆಯಾಗಿದ್ದರು. ಕೃಷಿ ಜಮೀನಿನಲ್ಲಿರುವ ಹೈಟೆನ್ಷನ್ ವಿದ್ಯುತ್ ವೈರ್ ತಗುಲಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಅಸು ನೀಗಿದ್ದರು. ಕುರಿಗಳಿಗೆ ಗಿಡದ ತೊಪ್ಪಲು ಕಡಿಯಲು ಈರಪ್ಪ ಮರವೇರಿದ್ದರು. ಆಗ ಮರಕ್ಕೆ ವಿದ್ಯುತ್‌ ತಂತಿ ತಗುಲಿ ವಿದ್ಯುತ್ ಸ್ಪರ್ಶಿಸಿ ಈರಪ್ಪ ಮರಣ ಹೊಂದಿದ್ದಾರೆ. ಈರಪ್ಪ ಅವರ ಸಾವಿಗೆ ವಿಂಡ್ ಪವರ್ ಕಂಪನಿಯೇ ಕಾರಣ ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಜಮೀನಿನಲ್ಲಿ ೩೩ ಕೆವಿ ವಿದ್ಯುತ್ ಲೈನ್‌ನ್ನು ವಿಂಡ್ ಪವರ್ ಕಂಪನಿಯವರು ಹಾಕಿದ್ದಾರೆ. ಆದರೆ, ಅನೇಕ ಕಡೆ ಹೈಟೆನ್ಷನ್ ವೈಯರ್ ಬಳಿಯೇ ಮರಗಳಿವೆ. ಮರಗಳ ಟೊಂಗೆಗಳನ್ನು ಕತ್ತರಿಸುವ ಕೆಲಸ ಮಾಡಿಲ್ಲ. ಅಲ್ಲದೇ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಮೃತ ಈರಪ್ಪ ಕುಟುಂಬಕ್ಕೆ ವಿಂಡ್ ಪವರ್ ಕಂಪನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕುಕನೂರು ಪೊಲೀಸ್ ಠಾಣೆಯಲ್ಲಿ ಮೃತ ಈರಪ್ಪ ಅವರ ಮಗ ಭೀರಪ್ಪ ಕುರಿ ವಿಂಡ್ ಕಂಪನಿಯವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಾರದ ಕಂಪನಿಯವರು, ಶವ ನೀಡಲು ನಿರಾಕರಿಸಿದ ಗ್ರಾಮಸ್ಥರು: ವಿಂಡ್ ಕಂಪನಿಯವರು ಸ್ಥಳಕ್ಕೆ ಬರಬೇಕು. ಆನಂತರ ಈರಪ್ಪ ಕುರಿ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಳ್ಳಬೇಕು. ವಿಂಡ್ ಕಂಪನಿಯವರು ಬರಲೇಬೇಕು ಎಂದು ಗ್ರಾಮಸ್ಥರು ಈರಪ್ಪ ಕುರಿ ಅವರ ಶವವನ್ನು ಪೊಲೀಸರು ಮುಟ್ಟದಂತೆ ತಾಕೀತು ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಮಧ್ಯಾಹ್ನ 2 ಗಂಟೆ ವರೆಗೂ ಕಾದರೂ ವಿಂಡ್ ಕಂಪನಿಯವರು ಬಾರದ ಕಾರಣ ಅವರ ವಿರುದ್ಧ ಈರಪ್ಪ ಕುರಿ ಅವರ ಪುತ್ರ ಭೀರಪ್ಪ ಪ್ರಕರಣ ದಾಖಲಿಸಿದರು. ಆನಂತರ ಶವ ಪರೀಕ್ಷಾ ಕಾರ್ಯಕ್ಕೆ ಪೊಲೀಸರು ಶವವನ್ನು ತೆಗೆದುಕೊಂಡು ಬಂದರು.