ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಬಹಿಷ್ಕಾರ ಆರೋಪ; ಸಾಗರೆ ಗ್ರಾಮಕ್ಕೆ ತಹಸೀಲ್ದಾರ್ ಮೋಹನಕುಮಾರಿ ಭೇಟಿ

| Published : Oct 15 2025, 02:06 AM IST

ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಬಹಿಷ್ಕಾರ ಆರೋಪ; ಸಾಗರೆ ಗ್ರಾಮಕ್ಕೆ ತಹಸೀಲ್ದಾರ್ ಮೋಹನಕುಮಾರಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬಹಿಷ್ಕಾರದ ನೆಪವೊಡ್ಡಿ ಕುಡಿಯುವ ನೀರಿಗೆ ಅಡ್ಡಿಪಡಿಸುವುದು, ಅಂಗಡಿಗಳಲ್ಲಿ ಧವಸ ಧಾನ್ಯಗಳನ್ನು ಕೊಡದಿರುವುದು ಕಂಡು ಬಂದರೆ ನನ್ನ ಗಮನಕ್ಕೆ ತನ್ನಿ. ಯಾರೂ ಕೂಡ ಯಾರ ವಿರುದ್ಧವೂ ಅವಾಚ್ಯ ಶಬ್ದಗಳ ಬಳಕೆ ಮಾಡಬಾರದು, ಆದರೆ ಗ್ರಾಮಸ್ಥರು ನಮಗೆ ಗೌರವ ಕೊಟ್ಟಿಲ್ಲ. ಮಾತುಕತೆ ಆಡಿಸುವುದಿಲ್ಲ ಎಂಬುದಕ್ಕೆ ಯಾರೂ ಹೊಣೆಯಲ್ಲ, ನಿಮ್ಮ ಗುಣ, ನಡತೆಯನ್ನು ನೋಡಿ ಅವರು ನಿಮಗೆ ಗೌರವ ಕೊಡುತ್ತಾರೆ.

ಕನ್ನಡಪ್ರಭ ವಾರ್ತೆ ಸರಗೂರು

ಸಾಗರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗುವ ವಿಚಾರ ‘ಸಾಮಾಜಿಕ ಮಾಧ್ಯಮ’ಗಳಲ್ಲಿ ಹೊರ ಬಂದ ಹಿನ್ನೆಲೆ ತಾಲೂಕಿನ ಸಾಗರೆ ಗ್ರಾಮಕ್ಕೆ ತಹಸೀಲ್ದಾರ್ ಮೋಹನಕುಮಾರಿ ಮಂಗಳವಾರ ಭೇಟಿ ನೀಡಿ, ಅಧಿಕಾರಿಗಳು, ಗ್ರಾಮಸ್ಥರೊಂದಿಗೆ ವಿಚಾರಣಾ ಸಭೆ ನಡೆಸಿದರು.

ಬಳಿಕ ವ್ಯಕ್ತಿಯೊಬ್ಬರಿಗೆ ಹಾಕಲಾಗಿದೆ ಎನ್ನಲಾಗುವ ‘ಬಹಿಷ್ಕಾರ’ ಎಂಬ ಆರೋಪ ಸತ್ಯಕ್ಕೆ ದೂರುವಾದುದು ಎಂಬ ಅಂಶ ಬೆಳಕಿಗೆ ಬಂದಿತು.

ಗ್ರಾಮದಲ್ಲಿ ದೊಡ್ಡತಾಯಮ್ಮ, ಎಸ್.ಎಂ. ನಂಜೇಗೌಡ ಎಂಬವರು ವಾಸಿಸುತ್ತಿದ್ದು, ಸರ್ವೇ ನಂ. 436ರ ಸರ್ಕಾರಿ ಖರಾಬು ಜಮೀನಿನಲ್ಲಿ ಅನಧಿಕೃತವಾಗಿ ವಾಸದ ಮನೆ ನಿರ್ಮಿಸಿಕೊಂಡಿರುವುದು ಸರ್ವೇ ಇಲಾಖೆ ನಡೆಸಲಾದ ಆಳತೆಯಲ್ಲಿ ಕಂಡು ಬಂದಿರುತ್ತದೆ. ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಜಾಗ ಬೇಕಾಗಿರುವುದರಿಂದ ಎಸ್.ಎಂ. ನಂಜೇಗೌಡ, ದೊಡ್ಡತಾಯಮ್ಮ ಅವರ ಗಮನಕ್ಕೆ ತಂದಾಗ ಮೂರು ತಿಂಗಳ ಕಾಲಾವಧಿ ನೀಡಿ ನಂತರ ಬಿಟ್ಟುಕೊಡುವುದಾಗಿ ಹೇಳಿದರು. ಮೂರು ತಿಂಗಳ ಬಳಿಕ ಮನೆ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದು, ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಯ ರಕ್ಷಣೆಗಾಗಿ ‘ಬಹಿಷ್ಕಾರ’ ಎಂಬ ಪದ ಬಳಕೆ ಮಾಡಿಕೊಂಡಿದ್ದಾರೆ ಎಂದು ತಹಸೀಲ್ದಾರ್ ಮೋಹನಕುಮಾರಿ ಅವರಿಗೆ ಗ್ರಾಮಸ್ಥರು ದೂರಿದರು.

ಸಭೆಯಲ್ಲಿ ವಾದಿ, ಪ್ರತಿವಾದಿಗಳ ದೂರು ಸ್ವೀಕರಿಸಿದ ತಹಸೀಲ್ದಾರ್ ಮೋಹನಕುಮಾರಿ ಅವರು, ನಂಜೇಗೌಡರ ಕುಟುಂಬಕ್ಕೆ ‘ಸಾಮಾಜಿಕ ಬಹಿಷ್ಕಾರ’ ಹಾಕಲಾಗಿದೆಯೇ ಎಂಬುದರ ಬಗ್ಗೆ ಗ್ರಾಮಸ್ಥರಲ್ಲಿ ಮಾಹಿತಿ ಕಲೆಹಾಕಿದರು. ನಂಜೇಗೌಡ ಕುಟುಂಬದ ಪರ ಸಕಾರಾತ್ಮಕ ಅಭಿಪ್ರಾಯ ಬಾರದ ಹಿನ್ನೆಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಎಂಬ ಆರೋಪ ಸುಳ್ಳು. ಸರ್ಕಾರಿ ಖರಾಬು ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವುದು ಅಪರಾಧ. ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆ ರಕ್ಷಣೆಗಾಗಿ ಬಹಿಷ್ಕಾರ ಎಂಬ ಪದ ಬಳಕೆ ಮಾಡಿಕೊಳ್ಳುವುದೂ ಅಪರಾಧವೇ. ಜಮೀನು ವಿಚಾರ ಸಂಬಂಧ ಈಗಾಗಲೇ ಸರ್ವೇ ಸ್ಕೇಚ್ ಮಾಡಿಸಲಾಗಿದೆ. ಅಲ್ಲದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಈ ಕುರಿತು ಇದರ ಕಡತ ನೀಡಲಾಗಿದ್ದು, ಸಮಗ್ರ ವರದಿ ತರಿಸಿಕೊಳ್ಳಲಾಗುವುದು. ಮನೆ ನಿರ್ಮಾಣದ ಸಂಬಂಧ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಕ್ರಮವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬಹಿಷ್ಕಾರದ ನೆಪವೊಡ್ಡಿ ಕುಡಿಯುವ ನೀರಿಗೆ ಅಡ್ಡಿಪಡಿಸುವುದು, ಅಂಗಡಿಗಳಲ್ಲಿ ಧವಸ ಧಾನ್ಯಗಳನ್ನು ಕೊಡದಿರುವುದು ಕಂಡು ಬಂದರೆ ನನ್ನ ಗಮನಕ್ಕೆ ತನ್ನಿ. ಯಾರೂ ಕೂಡ ಯಾರ ವಿರುದ್ಧವೂ ಅವಾಚ್ಯ ಶಬ್ದಗಳ ಬಳಕೆ ಮಾಡಬಾರದು, ಆದರೆ ಗ್ರಾಮಸ್ಥರು ನಮಗೆ ಗೌರವ ಕೊಟ್ಟಿಲ್ಲ. ಮಾತುಕತೆ ಆಡಿಸುವುದಿಲ್ಲ ಎಂಬುದಕ್ಕೆ ಯಾರೂ ಹೊಣೆಯಲ್ಲ, ನಿಮ್ಮ ಗುಣ, ನಡತೆಯನ್ನು ನೋಡಿ ಅವರು ನಿಮಗೆ ಗೌರವ ಕೊಡುತ್ತಾರೆ. ಹೀಗಾಗಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನುವುದು ಸುಳ್ಳು ಎಂದು ಅವರು ವಿವರಿಸಿದರು. ಬಳಿಕ ಗ್ರಾಮಸ್ಥರಲ್ಲಿ ಮಹಜರು ಪತ್ರ ಬರೆಯಿಸಿಕೊಳ್ಳಲಾಯಿತು.

ಕರ್ನಾಟಕ ರಾಜ್ಯ ರೈತ ಪರ್ವ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೈ.ಎಲ್. ನವೀನ್ ಗೌಡ, ಆರ್ಐಗಳಾದ ಲಕ್ಷ್ಮಣಶೆಟ್ಟಿ, ಮುಜೀಬ್, ಗ್ರಾಮಸ್ಥರು ಇದ್ದರು.