ಮನುಷ್ಯನ ಬದುಕು ಕೇವಲ ಲೌಕಿಕ ಸಂಪತ್ತಿನ ಭಾಗವಾಗದೆ, ಆಧ್ಯಾತ್ಮ ಜ್ಞಾನ ಸಂಪತ್ತಿನ ಮೂಲಕ ಶೃಂಗಾರಗೊಳ್ಳಬೇಕು ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಹಾವೇರಿ: ಮನುಷ್ಯನ ಬದುಕು ಕೇವಲ ಲೌಕಿಕ ಸಂಪತ್ತಿನ ಭಾಗವಾಗದೆ, ಆಧ್ಯಾತ್ಮ ಜ್ಞಾನ ಸಂಪತ್ತಿನ ಮೂಲಕ ಶೃಂಗಾರಗೊಳ್ಳಬೇಕು ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಬಸವಕೇಂದ್ರ ಹೊಸಮಠದಲ್ಲಿ ಬುಧವಾರ ಸಂಜೆ ಬಸವಕೇಂದ್ರ ಹೊಸಮಠ, ಹಾವೇರಿ ಶರಣ ಸಂಗಮ ಹಾಗೂ ಶ್ರಾವಣ ಸಂಭ್ರಮದ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.`ನೀರಿಂಗೆ ನೈದಿಲೆಯ ಶೃಂಗಾರ, ಸಮುದ್ರಕ್ಕೆ ತೆರೆಯೆ ಶೃಂಗಾರ, ನಾರಿಗೆ ಗುಣವೆ ಶೃಂಗಾರ, ಗಗನಕ್ಕೆ ಚಂದ್ರಮನೆ ಶೃಂಗಾರ, ನಮ್ಮ ಕೂಡಲಸಂಗನ ಶರಣರಿಗೆ ನೂಸಲ ವಿಭೂತಿ ಶೃಂಗಾರ'''''''' ಎಂಬ ಶರಣರ ವಚನದ ಆಶಯವನ್ನು ವಿವರಿಸಿದ ಅವರು, ಶ್ರಾವಣ ಮಾಸವು ಸದಾಚಾರ, ಸದ್ಗುಣಗಳನ್ನು ಆಲಿಸಿ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳುವ ಅವಯಾಗಿದೆ ಎಂದರು.
ಭಾರತವು ಬಹು ಸಂಸ್ಕೃತಿಗಳ ದೇಶವಾಗಿದ್ದು, ವಿವಿಧ ಧರ್ಮ, ಜಾತಿ, ಮತ ಹಾಗೂ ಪಂಥಗಳ ಜನರು ಪರಸ್ಪರ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಈ ಸಹಬಾಳ್ವೆಯಲ್ಲಿ ಭಕ್ತಿ ಪಂಥದ ಕೊಡುಗೆ ಮಹತ್ವದ್ದಾಗಿದೆ. ಪ್ರಾಚೀನ ಕರ್ನಾಟಕದಲ್ಲಿ ಬೌದ್ಧ, ಜೈನ, ಹಿಂದೂ, ಸಿಖ್, ಲಿಂಗಾಯತ, ಶೈವ, ವೈಷ್ಣವ ಸೇರಿದಂತೆ ವಿವಿಧ ಪರಂಪರೆಗಳ ಆರಾಧಕರು ಭಕ್ತಿ-ಶ್ರದ್ಧೆಯೊಂದಿಗೆ ನೀತಿ ಪ್ರಸಾರ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.ದಾಸರ ಕೀರ್ತನೆಗಳು, ಜಾನಪದ ಹಾಗೂ ತತ್ವಪದಗಳು ಲೋಕನೀತಿಯನ್ನು ಬೋಧಿಸಿವೆ. ವಚನ ಸಾಹಿತ್ಯವು ಸಾಮಾನ್ಯ ಜನರ ಆಡುಭಾಷೆಯಾದ ಕನ್ನಡದಲ್ಲಿ ಅಂದಿನ ಸಾಮಾಜಿಕ ತಲ್ಲಣಗಳಿಗೆ ಪರಿಹಾರದ ರೂಪದಲ್ಲಿ ಮೂಡಿಬಂದಿದ್ದರಿಂದ ಅದು ಜನಮಾನಸದಲ್ಲಿ ಆಳವಾಗಿ ನೆಲೆನಿಂತಿದೆ ಎಂದರು.
ಮುಖಂಡ ಹೊನ್ನಪ್ಪ ಭೋವಿ ಮಾತನಾಡಿ, ಜನರು ಮೂಢನಂಬಿಕೆ ಹಾಗೂ ಕಂದಾಚಾರಗಳ ಬಂಧನದಿಂದ ಹೊರಬಂದು ವೈಚಾರಿಕ ಬದುಕು ರೂಪಿಸಿಕೊಳ್ಳಬೇಕು ಎಂದು ಉಪನ್ಯಾಸ ನೀಡಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಸಿ. ಸಿದ್ದನಗೌಡರ ಮಾತನಾಡಿ, ಶ್ರೀ ಮಠವು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ಮಲ್ಲಿಕಾರ್ಜುನ ಹಿಂಚಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ, ಬಸಯ್ಯ ಹಿರೇಮಠ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಸಂತಾ ಬಾಗೂರು, ವಿರಾಜ ಕೋಟಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಕ್ಕನ ಬಳಗದ ಸದಸ್ಯರು ಪ್ರಾರ್ಥಿಸಿದರು. ಜಯದೇವ ಕೆರೂಡಿ ಸ್ವಾಗತಿಸಿದರು. ಅನಿತಾ ಉಪಲಿ ನಿರೂಪಿಸಿದರು.