ಸಾರಾಂಶ
ಕಳೆದ ಮಳೆಗಾಲದಲ್ಲಿ ಸಣ್ಣಪುಟ್ಟ ಕಟ್ಟಿಗೆ ತುಂಡುಗಳು ಮತ್ತು ಗಿಡಗಂಟಿಗಳು ಸಿಕ್ಕಿಕೊಂಡ ಪರಿಣಾಮ ಇಲ್ಲಿ ಬೆಂಕಿ ಬೀಳುವುದಕ್ಕೆ ಕಾರಣವಾಗಿದೆ.
ಯಲ್ಲಾಪುರ: ಯಲ್ಲಾಪುರ- ಶಿರಸಿ ರಸ್ತೆಯ ನಡುವಿನ ಬೇಡ್ತಿ ಸೇತುವೆಯ ಬಳಿ ಮಳೆಗಾಲದ ನೀರಿನ ರಭಸಕ್ಕೆ ಸೇತುವೆಯ ಕೆಳಭಾಗದ ಪಿಲ್ಲರ್‌ಗಳಿಗೆ ತೇಲಿಬಂದ ಜಲಾವು ಸೇರಿದಂತೆ ಒಣದಿಂಬೆಗಳು ನಿಂತು ರಾಶಿಯಾಗಿದ್ದ ಕಟ್ಟಿಗೆಗೆ ಜೂ. ೧೩ರಂದು ರಾತ್ರಿ ಬೆಂಕಿಬಿದ್ದು, ಧಗಧಗ ಹೊತ್ತಿ ಉರಿದಿದೆ.
ಅರಣ್ಯ ಇಲಾಖೆಯ ಗಮನಕ್ಕೆ ಬಂದ ನಂತರ ಇಲಾಖೆಯವರು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ನದಿಯಲ್ಲಿ ಒಣಗಿರುವ ಬೆಲೆಬಾಳುವ ಉತ್ತಮ ಸ್ಥಿತಿಯಲಿದ್ದ ಬೃಹತ್ ತುಂಡುಗಳನ್ನು ಅರಣ್ಯ ಇಲಾಖೆ ಬೇರೆಡೆಗೆ ಸಾಗಿಸಿತ್ತು. ಆದರೂ ಇಲ್ಲಿ ಸಂಗ್ರಹಗೊಂಡಿದ್ದ ಉಳಿದ ಸಣ್ಣಪುಟ್ಟ ತುಂಡು ಕಟ್ಟಿಗೆಯ ರಾಶಿಗೆ ಕಿಡಿಗೇಡಿಗಳ ಕೃತ್ಯದಿಂದಲೋ ಅಥವಾ ಆಕಸ್ಮಿಕವಾಗಿಯೋ ಬೆಂಕಿ ತಗುಲಿದ ಘಟನೆ ನಡೆದಿದ್ದು, ಅಗ್ನಿಶಾಮಕದಳ ಮತ್ತು ಅರಣ್ಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆಯಿಂದ ಹೊತ್ತುರಿಯುತ್ತಿದ್ದ ಬೆಂಕಿಯನ್ನು ಶಮನಗೊಳಿಸಲಾಗಿದೆ.ಈ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಅವರನ್ನು ಸಂಪರ್ಕಿಸಿದಾಗ ಇಲಾಖೆಯಿಂದ ಬೆಲೆಬಾಳುವ ಕಟ್ಟಿಗೆಯನ್ನು ಈಗಾಗಲೇ ತೆಗೆಯಲಾಗಿದೆ. ಉಳಿದಿರುವ ಬೆಲೆಬಾಳುವ ಕಟ್ಟಿಗೆಯನ್ನು ಬೇಸಿಗೆ ನಂತರ ತೆಗೆಯುತ್ತೇವೆ. ಇಲ್ಲಿ ಕಳೆದ ಮಳೆಗಾಲದಲ್ಲಿ ಸಣ್ಣಪುಟ್ಟ ಕಟ್ಟಿಗೆ ತುಂಡುಗಳು ಮತ್ತು ಗಿಡಗಂಟಿಗಳು ಸಿಕ್ಕಿಕೊಂಡ ಪರಿಣಾಮ ಇಲ್ಲಿ ಬೆಂಕಿ ಬೀಳುವುದಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.