ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ವಿಜಯಪುರ ಡಿಸಿಸಿ ಬ್ಯಾಂಕ್ ₹60 ಸಾವಿರ ಷೇರು ಬಂಡವಾಳದೊಂದಿಗೆ ಆರಂಭವಾಗಿ ಇಂದು ₹13 ಸಾವಿರ ಕೋಟಿ ವಹಿವಾಟು ಹೊಂದಿದೆ. ರೈತರ ಬದುಕು ಹಾಸನಾಗಿಸಲು ಶೂನ್ಯ ಬಡ್ಡಿ ದರ ಸಾಲ, ವ್ಯಾಪಾರ, ಮಹಿಳೆಯರ ಸ್ವಸಹಾಯ ಗುಂಪುಗಳಿಗೆ, ಹೈನುಗಾರಿಕೆ ಹಾಗೂ ರೈತರ ಅನುಕೂಲಕ್ಕಾಗಿ ತೋಟದ ಮನೆ ಕಟ್ಟಡ ನಿರ್ಮಾಣಕ್ಕೆ ಸಾಲ ನೀಡಲು ಯೋಜನೆ ರೂಪಿಸಿದ್ದಾಗಿ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.ತಾಲ್ಲೂಕಿನ ಪಡಗಾನೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕಿನಿಂದ ಸಾಲ ಪಡೆದ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿಗಳ ಸ್ಮರಣೆಯನ್ನು ಮಾಡಬೇಕಾಗಿದೆ. ರೈತರ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ನಿಗದಿ ಮಾಡುವ ಪ್ರಧಾನ ಮಂತ್ರಿ ಇದುವರೆಗೂ ನಮಗೆ ಸಿಗದಿರುವುದು ರೈತರ ದುರಾದಷ್ಟ. ಸಹಕಾರಿ ಬ್ಯಾಂಕ್ ಯಶಸ್ವಿಯಾಗಲು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗಿದ್ದೀರಿ. 75 ವರ್ಷಗಳಿಂದ ನಿರಂತರವಾಗಿ ಈ ಭಾಗದ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹಿರಿಯರ ಆಶಯದಂತೆ ಜನೋಪಯೋಗಿಯಾಗಿ ಮುನ್ನಡೆದುಕೊಂಡು ಬಂದಿರುವ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಆಡಳಿತ ಮಂಡಳಿ, ಸಿಬ್ಬಂದಿ ಸಂಸ್ಥೆ ಶ್ರೇಯೋಭಿವದ್ಧಿಗಾಗಿ ತಮ್ಮದೇ ಆದ ಕೊಡುಗೆ ನೀಡಿದ್ದು, ಸಂಸ್ಥೆ ಇಂದು ಅಮೃತ ಮಹೋತ್ಸವ ಆಚರಿಸುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಜಾಗ ದಾನ ಮಾಡಿದ ಹಣಮಂತರಾಯಗೌಡ ದಂಪತಿ ಕಾರ್ಯಾ ಶ್ಲಾಘನೀಯ ಎಂದರು.
ಮಾಜಿ ಶಾಸಕ ದಿ.ಶಂಕರಗೌಡ ಪಾಟೀಲ ಅವರು ಕಟ್ಟಿದ ಸಂಸ್ಥೆಗೆ 75 ವರ್ಷಗಳಾಗಿವೆ. ಸಹಕಾರ ಸಂಘದ ಅಭಿವೃದ್ಧಿಗೆ ಉಚಿತ ಜಾಗ ನೀಡಿ ಈ ಭಾಗದ ಸಹಕಾರಿ ಕ್ಷೇತ್ರದಲ್ಲಿ ಹಣಮಂತರಾಯಗೌಡ ಪಾಟೀಲ ಮಾದರಿ ಪಿಕೆಪಿಎಸ್ ಅಧ್ಯಕ್ಷರಾಗಿದ್ದಾರೆ ಎಂದು ಶ್ಲಾಘಿಸಿದರು.ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ದೇಶದ ಪ್ರಗತಿಯಲ್ಲಿ ಸಹಕಾರ ಬ್ಯಾಂಕ್‌ಗಳ ಕೊಡುಗೆ ಅಪಾರ. ವಿಜಯಪುರದ ಡಿಸಿಸಿ ಬ್ಯಾಂಕ್ ಸದೃಢವಾಗಿದೆ ಎಂದರೆ ಸಹಕಾರ ರಂಗ ಗಟ್ಟಿಯಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಭಿವೃದ್ಧಿಯಾದರೆ ರೈತರ ಅಭಿವದ್ಧಿ ಸಾಧ್ಯ. ಸಂಘಗಳಲ್ಲಿ ರಾಜಕೀಯ ಬೆರೆಸುವ ಬದಲು ರಾಜಕೀಯ ಮುಕ್ತ ಸಹಕಾರ ಸಂಘಗಳ ಏಳಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.ಪಿಕೆಪಿಎಸ್ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಮಾತನಾಡಿ, ಸಹಕಾರಿ ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿಯ ಪ್ರಾಮಾಣಿಕ ಪ್ರಯತ್ನ ಮುಖ್ಯ ಎಲ್ಲರ ಉದ್ದೇಶ ಒಂದೇ ಆಗಿದ್ದರೆ ಸಂಸ್ಥೆ ಅಭಿವೃದ್ಧಿಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಸಾನಿಧ್ಯವನ್ನು ಕಡಗಂಚಿಯ ವೀರಭದ್ರ ಶ್ರೀಗಳು ವಹಿಸಿದ್ದರು. ಸಿಂದಗಿ, ದೇವರಹಿಪ್ಪರಗಿ ಹಾಗೂ ಆಲಮೇಲ ತಾಲೂಕಿನ ಪಿಕೆಪಿಎಸ್ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.ಈ ವೇಳೆ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಬಿ.ಎಸ್.ಪಾಟೀಲ ಯಾಳಗಿ, ಅಯ್ಯಪ್ಪಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಆಕಳವಾಡಿ, ಸ್ಥಳೀಯ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಬಿರಾದಾರ, ಸಿಇಒ ಶಂಕರಗೌಡ ಪಾಟೀಲ, ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕರು, ಸಂಘಗಳ ಉಪನಿಬಂಧಕರು, ಗ್ರಾಪಂ ಉಪಾಧ್ಯಕ್ಷರು ಸೇರಿ ಸದಸ್ಯರು ಹಾಜರಿದ್ದರು. ಆರ್.ಎಂ.ಬಣಗಾರ ನಿರೂಪಿಸಿದರು.