ಅವಳಿ ಜಿಲ್ಲೆಗಳಿಗೆ ಕೃಷ್ಣಾನದಿ ನೀರು ಹರಿಸಲು ಯೋಜನೆ ರೂಪಿಸಲಿ: ಗೋಪಾಲಗೌಡ

| Published : Oct 08 2025, 01:00 AM IST

ಅವಳಿ ಜಿಲ್ಲೆಗಳಿಗೆ ಕೃಷ್ಣಾನದಿ ನೀರು ಹರಿಸಲು ಯೋಜನೆ ರೂಪಿಸಲಿ: ಗೋಪಾಲಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳು ಆಂಧ್ರಪ್ರದೇಶದ ಗಡಿ ಹಂಚಿಕೊಂಡಿವೆ. ಈ ಗಡಿಯ ಅಂಚಿನಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಜನಸಾಮಾನ್ಯರು ಶುದ್ಧ ಕುಡಿಯುವ ನೀರಿಗಾಗಿ ಬಹಳಷ್ಟು ಕಷ್ಟಪಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ಕೊಳವೆಬಾವಿ ಅವಲಂಬಿಸಿದ್ದಾರೆ. ಆದರೆ ಈ ಕೊಳವೆ ಬಾವಿಗಳಿಂದ ಬರುವ ನೀರು ಈಗಾಗಲೇ ಗುಣಮಟ್ಟ ಕಳೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ಕೃಷ್ಣಾ ನದಿಯ ನೀರನ್ನು ಕೋಲಾರ- ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಹರಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುವಂತೆ ಆಗ್ರಹಿಸಿ ಜನ ಜಾಗೃತಿ ವೇದಿಕೆ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಎಂ. ಗೋಪಾಲಗೌಡ ತಹಸೀಲ್ದಾರ್ ಎಂ.ವಿ.ರೂಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಅವರು ಮನವಿ ಸಲ್ಲಿಸಿ ಮಾತನಾಡಿ, ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನವಾಗದೆ ತೀವ್ರ ಸಂಕಷ್ಟ ಎದುರಾಗಿದೆ. ಕೆ.ಸಿ.ವ್ಯಾಲಿ, ಎಚ್.ಎನ್ ವ್ಯಾಲಿಯ ತ್ಯಾಜ್ಯ ನೀರಿನಿಂದ ಜನರಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿವೆ. ಎತ್ತಿನ ಹೊಳೆ ಯೋಜನೆ, ಮೇಕೆದಾಟು ನೀರಾವರಿ ಯೋಜನೆಗಳಿಂದ ಎರಡು ಜಿಲ್ಲೆಗಳಿಗೆ ನೀರು ಬರುವುದು ಕಷ್ಟಕರವಾಗಲಿದೆ. ಈಗಾಗಲೇ ಕೋಲಾರ ಜಿಲ್ಲೆಯ ಗಡಿ ಭಾಗದಲ್ಲಿರುವ ಆಂಧ್ರದ ಚಿತ್ತೂರು ಜಿಲ್ಲೆಗೆ ಕೃಷ್ಣಾನದಿ ನೀರು ಪೈಪ್ ಲೈನ್ ಮೂಲಕ ಹರಿದು ಬಂದಿದೆ, ಅದರಂತೆ ಅವಳಿ ಜಿಲ್ಲೆಗಳಿಗೆ ಸರ್ಕಾರವು ಕೃಷ್ಣೆಯ ನೀರು ಹರಿಸಲಿ ಎಂದು ಒತ್ತಾಯಿಸಿದರು.

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳು ಆಂಧ್ರಪ್ರದೇಶದ ಗಡಿ ಹಂಚಿಕೊಂಡಿವೆ. ಈ ಗಡಿಯ ಅಂಚಿನಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಜನಸಾಮಾನ್ಯರು ಶುದ್ಧ ಕುಡಿಯುವ ನೀರಿಗಾಗಿ ಬಹಳಷ್ಟು ಕಷ್ಟಪಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ಕೊಳವೆಬಾವಿ ಅವಲಂಬಿಸಿದ್ದಾರೆ. ಆದರೆ ಈ ಕೊಳವೆ ಬಾವಿಗಳಿಂದ ಬರುವ ನೀರು ಈಗಾಗಲೇ ಗುಣಮಟ್ಟ ಕಳೆದುಕೊಂಡಿದೆ. ಈ ನೀರಿನಲ್ಲಿ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ- ಪಕ್ಷಿಗಳ ಸಂಕುಲಕ್ಕೂ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಬಾಧಿಸುತ್ತಿವೆ ಎಂದ ಡಾ.ಗೋಪಾಲ್‌ ಗೌಡರು, ಈ ಸಮಸ್ಯೆಗಳ ಪರಿಹಾರಕ್ಕಾಗಿ ಕೃಷ್ಣಾನದಿ ನೀರು ಜಿಲ್ಲೆಗೆ ಹರಿಸುವುದೊಂದೇ ಮಾರ್ಗವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಮತ್ತು ಆಂಧ್ರ ಸರ್ಕಾರಗಳು ಗಮನ ಹರಿಸಿ, ಈ ಭಾಗಕ್ಕೆ ಕೃಷ್ಣಾ ನದಿ ನೀರು ನೀಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಎಇಒ ಬಾಲಕೃಷ್ಣಪ್ಪ, ಗ್ರಾಪಂ ಸದಸ್ಯ ವೆಂಕಟಸ್ವಾಮಿ, ಮಾಜಿ ಸದಸ್ಯ ಮುನಿರಾಜು, ರೈತ ಸಂಘಟನೆ ಮುಖಂಡರು ಇನ್ನಿತರರು ಹಾಜರಿದ್ದರು.