ವಿಕಲಚೇತನರ ಪ್ರತಿಭೆ ಅನಾವರಣಕ್ಕೆ ವೇದಿಕೆ ಅವಶ್ಯ

| Published : Apr 07 2025, 12:34 AM IST

ಸಾರಾಂಶ

ಅಂಗವೈಕಲ್ಯತೆಗೆ ಅನುಗುಣವಾದ ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಬೇಕಿದೆ. ವಿಶೇಷಚೇತನ ನೌಕರರು ಕ್ರೀಡೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿದಾಗ ಅವಕಾಶ ಕಲ್ಪಿಸಲಾಗಿದೆ. 6ನೇ ಬಾರಿಗೆ ಜಿಲ್ಲೆಯಲ್ಲಿ ವಿಶೇಷಚೇತನ ನೌಕರರಿಗೆ ಪ್ರತ್ಯೇಕವಾಗಿ ಕ್ರೀಡಾಕೂಟ ಏರ್ಪಡಿಸಲಾಗಿದೆ.

ಕೊಪ್ಪಳ:

ವಿಕಲಚೇತನರಲ್ಲಿ ವಿಶಿಷ್ಟವಾದ ಶಕ್ತಿ ಅಡಗಿದ್ದು, ಅಂಥ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಬೇಕೆಂದು ಸರ್ಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ನಾಗರಾಜ ಆರ್. ಜುಮ್ಮಣ್ಣನ್ನವರ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಅವರ ಅಂಗವೈಕಲ್ಯತೆಗೆ ಅನುಗುಣವಾದ ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಬೇಕಿದೆ. ವಿಶೇಷಚೇತನ ನೌಕರರು ಕ್ರೀಡೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿದಾಗ ಅವಕಾಶ ಕಲ್ಪಿಸಲಾಗಿದೆ. 6ನೇ ಬಾರಿಗೆ

ಜಿಲ್ಲೆಯಲ್ಲಿ ವಿಶೇಷಚೇತನ ನೌಕರರಿಗೆ ಪ್ರತ್ಯೇಕವಾಗಿ ಕ್ರೀಡಾಕೂಟ ಏರ್ಪಡಿಸಲಾಗಿದೆ. ಅವರ ಆಸೆಯದಂತೆ ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದಲ್ಲೂ ವಿಶೇಷಚೇತನ ನೌಕರರ ಕ್ರೀಡಾಕೂಟ ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್‌ ಜಾಬಗೌಡರ, ಯಾವುದೇ ರೀತಿಯ ಕ್ರೀಡೆ ಆಯೋಜಿಸಿದರೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಉತ್ತಮ ಪ್ರತಿಭೆ ಗುರುತಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ೨೦೧೨ರಿಂದ ಸಂಘದಿಂದ ವಿಶೇಷಚೇತನ ನೌಕರರಿಗಾಗಿ ಪ್ರತ್ಯೇಕ ಕ್ರೀಡಾಕೂಟವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಆಯೋಜಿಸಲಾಯಿತು. ಕೊಪ್ಪಳ ಜಿಲ್ಲೆ ಅನುಸರಿಸಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲೂ ಪ್ರತ್ಯೇಕ ಕ್ರೀಡಾಕೂಟ ಆಯೋಜಿಸುತ್ತಿದ್ದಾರೆ. ಆದರೆ, ಉಳಿದ ಜಿಲ್ಲೆಯ ನೌಕರರು ಕ್ರೀಡಾಕೂಟದಿಂದ ವಂಚಿತರಾಗುತ್ತಿದ್ದಾರೆ. ಕೇವಲ ಈ ಕ್ರೀಡೆ ಜಿಲ್ಲಾಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದು, ರಾಜ್ಯಮಟ್ಟದಲ್ಲೂ ಪ್ರತ್ಯೇಕ ಕ್ರೀಡಾಕೂಟ ಆಯೋಜಿಸುವಂತೆ ಮನವಿ ಮಾಡಿದರು.

ಈ ವೇಳೆ ಜಿಲ್ಲಾ ಖಚಾಂಚಿ ಜಯತೀರ್ಥ ದೇಸಾಯಿ, ರಾಜ್ಯ ಪರಿಷತ್ ಸದಸ್ಯ ಆಸೀಫ್ ಅಲಿ, ಜಂಟಿ ಕಾರ್ಯದರ್ಶಿ ನಾಗರಾಜ ಕುಷ್ಟಗಿ, ಕನಕಗಿರಿ ತಾಲೂಕಾಧ್ಯಕ್ಷೆ ಶಂಶಾದ ಬೇಗಂ, ಕಾರಟಗಿ ತಾಲೂಕಾಧ್ಯಕ್ಷ ಹನುಮಂತಪ್ಪ ನಾಯಕ, ವಿಕಲಚೇತನ ಜಿಲ್ಲಾಧ್ಯಕ್ಷ ಅಂದಪ್ಪ ಬೋಳರೆಡ್ಡಿ, ತಾಲೂಕಾಧ್ಯಕ್ಷ ಅಂದಪ್ಪ ಇದ್ಲಿ, ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಳಪ್ಪ ಕಾಳೆ, ಪ್ರಚಾರ ಸಮಿತಿ ಸಂಚಾಲಕ ನಾಗರಾಜ ನಾಯಕ ಡೊಳ್ಳಿನ, ರಾಜ್ಯ ಕ್ರೀಡಾ ಕಾರ್ಯದರ್ಶಿ ಮಂಜುನಾಥ ಆರೆಂಟನೂರು, ಪತ್ತಿನ ಸಂಘದ ಸದಸ್ಯರಾದ ಮಲ್ಲಪ್ಪ ಗುಡದಣ್ಣವರ, ನಫೀಜಖಾನ ಪಠಾಣ ಹಾಜರಿದ್ದರು.