ಸಾರಾಂಶ
ದಿನನಿತ್ಯದ ಜಂಜಾಟದಲ್ಲಿ ಕಳೆದು ಹೋಗುತ್ತಿರುವ ಜನರಿಗೆ ವಿನೂತನ, ವಿಭಿನ್ನ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮನರಂಜನೆ ನೀಡುತ್ತಿದೆ. ನಾಟಕಗಳು ಮನರಂಜನೆಯೊಂದಿಗೆ ಆದಾಯದ ಮೂಲವು ಆಗಿದೆ. ಸಕ್ರಿಯವಾಗಿ ಜೀವನ ನಡೆಸಲು ನಾಟಕಗಳು ಪ್ರೇರಣೆಯಾಗಿವೆ.
ಧಾರವಾಡ:
ಸಂಗೀತ, ಸಾಹಿತ್ಯಕ್ಕೆ ಹೆಸರಾದ ಧಾರವಾಡದಲ್ಲಿ ರಂಗಾಯಣವು ನಾಟಕಗಳ ಮೂಲಕ ಮನರಂಜನೆಯೊಂದಿಗೆ ಜೀವನದ ಕುರಿತು ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಹೇಳಿದರು.ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ರಂಗ ತಂಡಗಳ ಸಹಯೋಗದಲ್ಲಿ ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಿದ್ಧಗೊಂಡ ಹಾಗೂ ಸ್ಥಳೀಯ ತಂಡಗಳಿಂದ ಶನಿವಾರ ಹಮ್ಮಿಕೊಂಡಿದ್ದ “ರಂಗಾಯಣ ನಾಟಕೋತ್ಸವ” ಉದ್ಘಾಟಿಸಿದ ಅವರು, ದಿನನಿತ್ಯದ ಜಂಜಾಟದಲ್ಲಿ ಕಳೆದು ಹೋಗುತ್ತಿರುವ ಜನರಿಗೆ ವಿನೂತನ, ವಿಭಿನ್ನ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮನರಂಜನೆ ನೀಡುತ್ತಿದೆ. ನಾಟಕಗಳು ಮನರಂಜನೆಯೊಂದಿಗೆ ಆದಾಯದ ಮೂಲವು ಆಗಿದೆ. ಸಕ್ರಿಯವಾಗಿ ಜೀವನ ನಡೆಸಲು ನಾಟಕಗಳು ಪ್ರೇರಣೆಯಾಗಿವೆ. ಉತ್ತಮ ಸಂದೇಶಗಳಿರುವ ನಾಟಕಗಳನ್ನು ಪ್ರದರ್ಶನ ಮಾಡುವ ಕಾರ್ಯವನ್ನು ರಂಗಾಯಣ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿರುವ ವ್ಯಕ್ತಿತ್ವವನ್ನು ಹೊಂದಿದ ಬಿ.ವಿ ಕಾರಂತರ ಕನಸಿನ ಕೂಸಿನ ಧಾರವಾಡ ರಂಗಾಯಣವು ಇಂದು ಹಲವಾರು ಸೃಜನಾತ್ಮಕ ನಿರ್ದೇಶಕರು, ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದೆ. ಇದೇ ರೀತಿ ರಂಗಾಯಣವು ಹಲವಾರು ಯೋಜನೆಗಳ ಮೂಲಕ ರಂಗಭೂಮಿಯ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿದೇರ್ಶಕ ಡಾ. ರಾಜು ತಾಳಿಕೋಟಿ, ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ ಜನರಿಗೆ ಮಾಹಿತಿಯ ಜತೆಗೆ ಮನರಂಜನೆ ನೀಡುವ ಕಾರ್ಯವನ್ನು ರಂಗಾಯಣ ಮಾಡುತ್ತಿದೆ. ನಾಟಕಗಳನ್ನು ನೋಡಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ನಂತರ “ಅಂಗುಲಿಮಾಲ” ದೊಡ್ಡಾಟ ಪ್ರಸಂಗವನ್ನು ಹುಬ್ಬಳ್ಳಿ ಜನಪದ ಕಲಾಬಳಗ ಟ್ರಸ್ಟ್‌ನಿಂದ ಪ್ರಸ್ತುತ ಪಡಿಸಿದರು. ಭಾನುವಾರ “ಹೆತ್ತವಳ ಹಾಲು ವಿಷವಾಯಿತು” ನಾಟಕವನ್ನು ಹುಬ್ಬಳ್ಳಿ ಕನ್ನಡ ಕಲಾ ಸೇವಾ ಸಂಘದಿಂದ ಪ್ರಸ್ತುತ ಪಡಿಸಲಿದ್ದಾರೆ.