ಬಿಜೆಪಿಯಿಂದ ಗ್ಯಾರಂಟಿ ಯೋಜನೆ ನಿಲ್ಲಿಸುವ ಕುತಂತ್ರ: ಸಲೀಂ ಅಹ್ಮದ

| Published : Jun 22 2024, 12:52 AM IST

ಬಿಜೆಪಿಯಿಂದ ಗ್ಯಾರಂಟಿ ಯೋಜನೆ ನಿಲ್ಲಿಸುವ ಕುತಂತ್ರ: ಸಲೀಂ ಅಹ್ಮದ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಾಗಿ ಪೆಟ್ರೋಲ್‌-ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳು ನಿಲ್ಲಬೇಕು, ಬಡವರಿಗೆ ಸಿಗುತ್ತಿದ್ದ ಸೌಲಭ್ಯಗಳು ಸಿಗದಂತಾಗಬೇಕು ಎನ್ನುವುದು ರಾಜ್ಯ ಬಿಜೆಪಿ ನಾಯಕರ ಕುತಂತ್ರವಾಗಿದೆ ಎಂದು ಸಲೀಂ ಅಹ್ಮದ್‌ ಹೇಳಿದರು.

ಗದಗ: ತೈಲ ಬೆಲೆ ಹೆಚ್ಚಳ ಕುರಿತು ರಾಜ್ಯ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳು ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಕುತಂತ್ರವಾಗಿದೆ ಎಂದು ಸರ್ಕಾರದ ಮುಖ್ಯ ಸಚೇತಕ, ವಿಪ ಸದಸ್ಯ ಸಲೀಂ ಅಹ್ಮದ ಹೇಳಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಅವರದ್ದೇ ಸರ್ಕಾರ 10 ವರ್ಷ ಆಡಳಿತ ನಡೆಸಿದ್ದು, ₹60 ಇದ್ದ ಪೆಟ್ರೋಲ್ ಬೆಲೆಯನ್ನು ₹100ಕ್ಕೆ ತಂದು ನಿಲ್ಲಿಸಿದೆ. ಅಂದು ಪ್ರತಿಭಟನೆ ಮಾಡದ ಬಿಜೆಪಿಯವರು ಈಗ ನಮ್ಮ ಸರ್ಕಾರ ಹಲವಾರು ವರ್ಷಗಳ ಆನಂತರ ತೆರಿಗೆಯಲ್ಲಿ ಅಲ್ಪ ಪ್ರಮಾಣದ ಹೆಚ್ಚಳ ಮಾಡಿರುವುದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಗ್ಯಾರಂಟಿ ಯೋಜನೆಗಾಗಿ ಪೆಟ್ರೋಲ್‌-ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳು ನಿಲ್ಲಬೇಕು, ಬಡವರಿಗೆ ಸಿಗುತ್ತಿದ್ದ ಸೌಲಭ್ಯಗಳು ಸಿಗದಂತಾಗಬೇಕು ಎನ್ನುವುದು ರಾಜ್ಯ ಬಿಜೆಪಿ ನಾಯಕರ ಕುತಂತ್ರವಾಗಿದೆ ಎಂದು ಸಲೀಂ ಅಹ್ಮದ್‌ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಬಿಜೆಪಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆದರೂ ಅವರು ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿದ್ದಾರೆ. 10 ವರ್ಷ ಅಧಿಕಾರದಲ್ಲಿದ್ದು, ಅಬ್ ಕಿ ಬಾರ್ ಚಾರ್ ಸೋ ಪಾರ್ ಎನ್ನುತ್ತಿದ್ದವರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಇದು ದೇಶವ್ಯಾಪಿ ಬಿಜೆಪಿಗೆ ಇರುವ ವಿರೋಧಿ ಅಲೆಯನ್ನು ತೋರಿಸುತ್ತದೆ. ದೇಶದಲ್ಲಿ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು.

ದರ್ಶನ ವಿಷಯವಾಗಿ ಸರ್ಕಾರ ಯಾವುದೇ ಒತ್ತಡ ತಂತ್ರ ಮಾಡುತ್ತಿಲ್ಲ, ಇಲಾಖೆಯವರು ತನಿಖೆ ನಡೆಸುತ್ತಿದ್ದಾರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಆಗಿರುವ ಹಿನ್ನಡೆ ಕುರಿತು ಪರಿಶೀಲನೆ ನಡೆಸಲು ಎಐಸಿಸಿ ವಿಶೇಷ ಸಮಿತಿ ರಚಿಸಿದೆ. ಅದರ ಆಧಾರದಲ್ಲಿ ಪಕ್ಷದ ಹಿರಿಯರು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ದೇಶ ವಿರೋಧಿಯಾಗಿ ನಡೆದರೆ ತಪ್ಪು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆನಂತರ ಪಾಕಿಸ್ತಾನ ಪರವಾಗಿ ಜಯಘೋಷ ಕೂಗುವ ಘಟನೆಗಳು ಹೆಚ್ಚಾಗಿವೆ ಎನ್ನುವ ವಿರೋಧಿ ಪಕ್ಷಗಳ ಆರೋಪ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಆಗಿರಲಿ ದೇಶ ವಿರೋಧಿಯಾಗಿ ನಡೆದುಕೊಂಡರೆ ಅದು ತಪ್ಪೇ, ಅದನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ, ಯಾರೇ ಆಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಲೀಂ ಅಹ್ಮದ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಿಚಡಿ ಸರ್ಕಾರ: ಪ್ರಧಾನಿ ಮೋದಿ ನೇತೃತ್ವದಲ್ಲಿ ರಚನೆಯಾಗಿರುವುದು ಕಿಚಡಿ ಸರ್ಕಾರ. ಈ ಸರ್ಕಾರ ಬಹಳ ದಿನಕಾಲ ಉಳಿಯುವುದಿಲ್ಲ, ಇದನ್ನು ಬರೆದಿಟ್ಟುಕೊಳ್ಳಿ. ನಾಯ್ಡು, ನಿತೀಶ ಅವರೊಟ್ಟಿಗೆ ಅಧಿಕಾರ ಮಾಡುವುದಕ್ಕೆ ಬಿಜೆಪಿ ಅನಿವಾರ್ಯವಾಗಿ ಒಪ್ಪಿಕೊಂಡಿದೆ ಅಷ್ಟೇ ಎಂದು ಸಲೀಂ ಅಹ್ಮದ ಲೇವಡಿ ಮಾಡಿದರು.

ಕಮಿಷನ್‌ ತನಿಖೆ ವರದಿ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ ಶೇ. 40 ಕಮಿಷನ್ ಆರೋಪದ ಕುರಿತು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್ ಕಮಿಟಿ ತನಿಖೆ ನಡೆಸುತ್ತಿದೆ. ಈ ಕುರಿತು ವರದಿ ಕೂಡ ಸಿದ್ಧವಾಗಿದೆ ಎನ್ನುವ ಮಾಹಿತಿ ಇದೆ. ಈ ಕುರಿತು ಸರ್ಕಾರ ಯಾವುದೇ ಒತ್ತಡ ಹಾಕುವ ಪ್ರಶ್ನೆಯೇ ಇಲ್ಲ. ಸಮಿತಿ ಅಧ್ಯಕ್ಷರು ಪೂರ್ಣ ವರದಿಯನ್ನಾದರೂ ಕೊಡಬಹುದು, ಅದಕ್ಕಿಂತ ಮೊದಲು ಮಧ್ಯಂತರ ವರದಿಯನ್ನಾದರೂ ಕೊಡಬಹುದು. ಇದರಲ್ಲಿ ಸರ್ಕಾರ ಒತ್ತಡ ಹಾಕುವ ಪ್ರಶ್ನೆಯೇ ಇಲ್ಲ ಎಂದು ಸಲೀಂ ಅಹ್ಮದ್‌ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಮಾಜಿ ಅಧ್ಯಕ್ಷ ವಾಸಪ್ಪ ಕುರುಡಗಿ, ಸುಜಾತಾ ದೊಡ್ಡಮನಿ, ಸೈಯ್ಯದ ಖಾಲಿದ ಕೊಪ್ಪಳ, ಕೆ.ಎಂ. ಸೈಯ್ಯದ ಮುಂತಾದವರು ಹಾಜರಿದ್ದರು.