ಸಾರಾಂಶ
ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದ ಎದುರಿನ ರಸ್ತೆಯ ಬದಿಯಲ್ಲಿ ಉರಿ ಬಿಸಿಲಿನಲ್ಲಿ ಕಳೆದ ಒಂದು ವಾರದಿಂದ ಪಿಒಪಿ ಗೊಂಬೆಗಳ ಮಾರಾಟ ಮಾಡುತ್ತಿರುವ ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ.
ಊರೂರು ಅಲೆಯುತ್ತಿದೆ ಬದುಕಿನ ಬಂಡಿ । ಲಾಭದ ನಿರೀಕ್ಷೆಗಿಂತ ಹೊಟ್ಟೆ ತುಂಬಿಸಿಕೊಳ್ಳುವುದೇ ಸವಾಲುಏಕನಾಥ ಮೆದಿಕೇರಿ
ಕನ್ನಡಪ್ರಭ ವಾರ್ತೆ ಹನುಮಸಾಗರಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದ ಎದುರಿನ ರಸ್ತೆಯ ಬದಿಯಲ್ಲಿ ಉರಿ ಬಿಸಿಲಿನಲ್ಲಿ ಕಳೆದ ಒಂದು ವಾರದಿಂದ ಪಿಒಪಿ ಗೊಂಬೆಗಳ ಮಾರಾಟ ಮಾಡುತ್ತಿರುವ ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ.
ಮೂಲತಃ ರಾಜಸ್ಥಾನ ರಾಜ್ಯದವರಾದ ರಜಪೂತ ಕುಟುಂಬ ಪಕ್ಕದ ಹುನಗುಂದ ತಾಲೂಕಿನಲ್ಲಿ ಪಿಒಪಿಗಳ ನಾನಾ ಕಲಾಕೃತಿಗಳನ್ನು ತಯಾರಿಸುತ್ತಿರುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು, ಊರೂರು ಸುತ್ತುತ್ತಾ ಗೊಂಬೆಗಳ ಮಾರಾಟ ಮಾಡುತ್ತ ಅಲೆದಾಡುತ್ತಿದೆ. ಲಾಭದ ನಿರೀಕ್ಷೆಗಿಂತ ಹೊಟ್ಟೆ ತುಂಬಿಸಿಕೊಳ್ಳುವುದೇ ಒಂದು ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಇವರ ಬದುಕಿನ ಬಂಡಿ ಊರೂರು ಅಲೆಯುತ್ತಾ ಸಾಗಿದೆ.ಅಂದ ಚಂದದ ಕಲಾಕೃತಿಗಳು:
ಗೊಂಬೆಗಳ ಮಾರಾಟದಿಂದ ಸಾವಿರಾರು ರು. ಆದಾಯ ಬರುತ್ತದೆ ಎನ್ನುವುದಕ್ಕಿಂತ ಬದುಕಲು ಹೊಟ್ಟೆ ತುಂಬಿದರೆ ಸಾಕು ಎನ್ನುವ ನಿರೀಕ್ಷೆಯನ್ನು ಈ ಕುಟುಂಬದವರು ಹೊಂದಿದ್ದಾರೆ. ಇವರ ಕೈಯಿಂದ ಸಿದ್ಧಗೊಂಡ ಕಲಾಕೃತಿಗಳಲ್ಲಿ, ಅಲಂಕಾರಿಕ ಹೂವಿನ ವಸ್ತುಗಳು, ಬುದ್ಧ, ಮಹಾವೀರ, ರಾಧಾಕೃಷ್ಣ, ಡಾ. ಬಿ.ಆರ್. ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜ ಹೀಗೆ ವಿವಿಧ ಪುತ್ಥಳಿಗಳು, ಗಿಳಿ, ನವಿಲು ಸೇರಿ ಮುಂತಾದ ಪಕ್ಷಿಗಳು, ಎತ್ತು, ಆನೆ, ಜಿಂಕೆ, ಈಶ್ವರ, ಗಣೇಶ, ಚೀನಿ ಗೊಂಬೆ ಸೇರಿದಂತೆ ನಾನಾ ರೀತಿಯ ಕಲಾಕೃತಿ ಕಾಣಬಹುದಾಗಿದೆ. ಇದನ್ನು ಹೊತ್ತು ಉರಿ ಬಿಸಿಲಿನಲ್ಲಿ ಊರೂರು ಅಲೆಯುತ್ತಾ ಮಾರಾಟ ಮಾಡುತ್ತಿದ್ದಾರೆ. ಅಂದಚಂದದ ಪಿಒಪಿ ಮೂರ್ತಿಗಳು, ಅಲಂಕಾರಿಕ ವಸ್ತುಗಳು ಇವರ ಹೊಟ್ಟೆ ತುಂಬಿಸುತ್ತಿವೆ. ಅವರು ತಯಾರಿಸಿರುವ ಮೂರ್ತಿಗಳು, ಕಲಾಕೃತಿಗಳು ಹಾದಿಯಲ್ಲಿ ಹೋಗುವವರನ್ನು ಕೈಬೀಸಿ ಕರೆಯುತ್ತಿವೆ.ಆಕರ್ಷಣೆ:
ಈ ಪಿಒಪಿ ಮೂರ್ತಿ ಹಾಗೂ ಅಲಂಕಾರಿಕ ವಸ್ತುಗಳು ಅತ್ಯಂತ ಸುಂದರವಾಗಿವೆ. ಹಾದಿಯಲ್ಲಿ ಹೋಗುವವರ ಕಣ್ಮನ ಸೆಳೆಯುತ್ತಿವೆ. ಹೀಗಾಗಿ ಅನೇಕರು ಆ ಕಲಾಕೃತಿಗಳನ್ನು ಕೊಳ್ಳಲು ಆಗಮಿಸುತ್ತಾರೆ. ಇವರ ಬಳಿ ₹೧೦೦ ರಿಂದ ಹಿಡಿದು ₹ಒಂದು ಸಾವಿರದವರೆಗಿನ ಬೆಲೆಯ ಮೂರ್ತಿಗಳು ಹಾಗೂ ಕಲಾಕೃತಿಗಳು ಲಭ್ಯ ಇವೆ.