ಇಂದು ಶಾಸಕ ಎಂ.ವೈ ಪಾಟೀಲರಿಂದ ರಸ್ತೆ ಕಾಮಗಾರಿಗೆ ಚಾಲನೆ

| Published : Mar 15 2024, 01:22 AM IST / Updated: Mar 15 2024, 01:23 AM IST

ಇಂದು ಶಾಸಕ ಎಂ.ವೈ ಪಾಟೀಲರಿಂದ ರಸ್ತೆ ಕಾಮಗಾರಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಸಂಪರ್ಕ ರಸ್ತೆಗಳು ಹದಗೆಟ್ಟು ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿವೆ. ರಸ್ತೆಗಳನ್ನು ನಿರ್ಮಿಸಿ ಎಂದು ನಾಗರಿಕ ಹೋರಾಟ ಸಮಿತಿಯಿಂದ ಕಳೆದ 19 ದಿನಗಳಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಸಂಪರ್ಕ ರಸ್ತೆಗಳು ಹದಗೆಟ್ಟು ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿವೆ. ರಸ್ತೆಗಳನ್ನು ನಿರ್ಮಿಸಿ ಎಂದು ನಾಗರಿಕ ಹೋರಾಟ ಸಮಿತಿಯಿಂದ ಕಳೆದ 19 ದಿನಗಳಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. 19 ದಿನಗಳ ಬಳಿಕ ಗ್ರಾಮಸ್ಥರ ಧರಣಿ ಸತ್ಯಾಗ್ರಹ ಫಲ ನೀಡಿದಂತಾಗಿದ್ದು ಮಾ.15ರಂದು ಬೆ.12 ಗಂಟೆಗೆ ಶಾಸಕ ಎಂ.ವೈ. ಪಾಟೀಲ್ ಅವರು ರಸ್ತೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಿದ್ದಾರೆ.

ಬಡದಾಳ ಗ್ರಾಮದಿಂದ ಬಳೂರ್ಗಿ ರಾಷ್ಟ್ರೀಯ ಹೆದ್ದಾರಿ ವರೆಗಿನ ಸಂಪರ್ಕ ರಸ್ತೆಯನ್ನು 5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಶಾಸಕ ಎಂ.ವೈ. ಪಾಟೀಲ್ ಅವರು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಲಿದ್ದಾರೆ. ವಿಷಯ ತಿಳಿದ ನಾಗರಿಕ ಹೋರಾಟ ಸಮಿತಿಯವರು ಅಂತು ಇಂತು ಗ್ರಾಮದ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಶಾಸಕರು ಮುಂದಾಗಿದ್ದು ಖುಷಿಯ ವಿಚಾರ ಕೇವಲ ಬಳೂರ್ಗಿ ಸಂಪರ್ಕ ರಸ್ತೆ ನಿರ್ಮಿಸಿದರೆ ಸಾಲದು ಗ್ರಾಮಕ್ಕೆ ಸಂಪರ್ಕಿಸುವ ನಾಲ್ಕು ದಿಕ್ಕಿನ ರಸ್ತೆಗಳು ಬಹಳಷ್ಟು ಹದಗೆಟ್ಟಿವೆ ಎಲ್ಲಾ ರಸ್ತೆಗಳನ್ನು ಹಂತಹಂತವಾಗಿ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.

ಗುರುವಾರದಂದು ಧರಣಿ ಸ್ಥಳಕ್ಕೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಮೇಶ ಹುಗಾರ ಹಾಗೂ ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಮುಖಂಡ ಅವ್ವಣ್ಣ ಮ್ಯಾಕೇರಿ ಭೇಟಿ ನೀಡಿ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿ ದೇಶಕ್ಕೆ ಸ್ವಾತಂತ್ರ ಸಿಕ್ಕು 7 ದಶಕ ಕಳೆದರೂ ಕೂಡ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಧರಣಿ ಸತ್ಯಾಗ್ರಹ, ಹೋರಾಟ ಮಾಡುವಂತ ಕೆಟ್ಟ ಪರಿಸ್ಥಿತಿ ನಮ್ಮಲ್ಲಿದೆ ಎಂದರೆ ನಾವು ಆಯ್ಕೆ ಮಾಡಿ ಕಳಿಸುವ ಜನಪ್ರತಿನಿಧಿಗಳ ಮನಸ್ಥಿತಿ ಹೇಗಿದೆ ಎಂದು ಆಲೋಚನೆ ಮಾಡಬೇಕಾಗಿದೆ. ಆದರೆ ಬಡದಾಳ ಗ್ರಾಮಸ್ಥರ ಬೇಡಿಕೆ ನ್ಯಾಯಯುತವಾಗಿದ್ದು ನಾವು ಇದರಲ್ಲಿ ರಾಜಕೀಯ ಬೆರೆಸಲು ಹೋಗುವುದಿಲ್ಲ. ಗ್ರಾಮಸ್ಥರ ಬೇಡಿಕೆಗೆ ಬೆಂಬಲವಾಗಿ ನಿಲ್ಲುತ್ತೇವೆ ಶಾಸಕರು ಕೂಡಲೇ ಸಂಪರ್ಕ ರಸ್ತೆಗಳನ್ನು ನಿರ್ಮಿಸಬೇಕು. ಜಿಲ್ಲೆಯಲ್ಲಿ ದೊಡ್ಡ ಭಕ್ತಬಳಗ ಹೊಂದಿರುವ ಚನ್ನಮಲ್ಲೇಶ್ವರ ಮಠವಿರುವ ಗ್ರಾಮಕ್ಕೆ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಾಗರಿಕ ಹೋರಾಟ ಸಮಿತಿಯ ಪ್ರಮುಖರು, ಗ್ರಾಮಸ್ಥರು ಇದ್ದರು.