ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಭ್ರಷ್ಟಾಚಾರ ರಹಿತ, ಶಕ್ತಿಶಾಲಿಯಾಗಿ ಮುನ್ನುಗ್ಗುತ್ತಿರುವ ಭಾರತವನ್ನು ಇಂದು ಜಗತ್ತಿನಲ್ಲಿ ಯಾವುದೇ ಸಮಸ್ಯೆ ಎದುರಾದರೆ ಸಂಧಾನಕ್ಕೆ ಕರೆಯುತ್ತಾರೆ. ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಭಾರತೀಯರು ಶಕ್ತಿ ಮೀರಿದ ಪ್ರಯತ್ನ ಮಾಡುವ ಮೂಲಕ ದೇಶವನ್ನು ಇನ್ನಷ್ಟು ಸುಭದ್ರಗೊಳಿಸಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಬೆಳ್ತಂಗಡಿ ಮಿನಿವಿಧಾನಸೌಧದಲ್ಲಿ ಜರಗಿದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಖಂಡ ಭಾರತವನ್ನು ತ್ರಿಖಂಡ ಭಾರತವನ್ನಾಗಿ 1947 ಆ.14ರಂದು ಮಾಡಲಾಯಿತು. ಇದರಿಂದ ದೇಶ ವಿಭಜನೆಯಾಯಿತು. ಈ ದೇಶಕ್ಕೆ ಕೇವಲ ಶಾಂತಿಯಿಂದ ಸ್ವಾತಂತ್ರ್ಯ ಬಂದಿಲ್ಲ ಕ್ರಾಂತಿಕಾರಿಗಳ ಸಾಹಸ ಸ್ವಾತಂತ್ರ್ಯಕ್ಕೆ ಪ್ರಮುಖ ಕಾರಣ ಎಂದರು.ಪ್ರಧಾನ ಭಾಷಣಕಾರ ಡಾ. ಪ್ರದೀಪ್ ಎ. ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ಅಂದಿನ ಮಹಿಳೆಯರ ಪಾತ್ರವು ಅನನ್ಯ. ಅವರನ್ನು ನೆನಪಿಸಿಕೊಳ್ಳುವ ಕೆಲಸವಾಗಬೇಕು ಎಂದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ ಧ್ವಜಾರೋರಣ ನೆರವೇರಿಸಿದರು.ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ ಕದ್ರಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರಾಜೇಶ್, ತೋಟಗಾರಿಕೆ ಇಲಾಖೆಯ ಚಂದ್ರಶೇಖರ್ ಕೆ.ಎಸ್. ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಪ್ರಿಯಾ ಆಗ್ನೆಸ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಸರ್ಕಾರಿ ಪ್ರೌಢಶಾಲೆಗಳಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವೇಣೂರು ಜೂನಿಯರ್ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳಾದ ರಿತೀಶಾ, ಶ್ರಾವ್ಯಾ ಉಜಿರೆಯ ಪೆರ್ಲ ಬೈಪಾಡಿ ಪ್ರೌಢಶಾಲೆಯ ಸುರಕ್ಷಿತ ಅವರಿಗೆ ಲ್ಯಾಪ್ ಟಾಪ್ ಹಸ್ತಾಂತರಿಸಲಾಯಿತು.ತಾಪಂ ಸಿಇಒ ಭವಾನಿ ಶಂಕರ್ ಸ್ವಾಗತಿಸಿದರು. ಸುಧಾಕರ ಶೆಟ್ಟಿ ಮತ್ತು ರಾಜಶ್ರೀ ನಿರೂಪಿಸಿದರು. ಜೇಕಬ್ ಮತ್ತು ಜಯಾನಂದ ಧ್ವಜನಿರ್ವಹಣೆ ಮಾಡಿದರು. ಬೆಳ್ತಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ನಾಡಗೀತೆ , ಸಂತ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಂದೇ ಮಾತರಂ, ವಾಣಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ರೈತ ಗೀತೆ, ಹೋಲಿ ರಿಡಿಮರ್ ಶಾಲೆಯ ವಿದ್ಯಾರ್ಥಿಗಳು ಧ್ವಜಗೀತೆ, ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಜರಗಿತು.