ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಡ್ಯಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜಿಲಿ ಯೋಜನೆ ಮೂಲಕ ಹಳ್ಳಿಗಳಲ್ಲಿ ಸೋಲಾರ್ ಕ್ರಾಂತಿ ಮೂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮಾದರಿ ಸೋಲಾರ್ ಗ್ರಾಮಕ್ಕೆ ಒಂದು ಕೋಟಿ ರು. ಬಹುಮಾನವನ್ನೂ ಘೋಷಿಸಿದೆ. ಈ ಯೋಜನೆಯಡಿ ಸೋಲಾರ್ ಅಳವಡಿಕೆಗೆ ಹಳ್ಳಿ ಜನರ ಜೊತೆಗೆ ಸರ್ಕಾರಿ ಅಧಿಕಾರಿಗಳ ಆಸಕ್ತಿ ಪ್ರದರ್ಶನವೂ ಇಲ್ಲಿ ಬಹಳ ಮುಖ್ಯವಾಗಿದೆ.
ಮಾದರಿ ಸೋಲಾರ್ ಗ್ರಾಮ ಸ್ಪರ್ಧೆಗೆ ೨೦೧೧ರ ಜನಗಣತಿಯಂತೆ ೫ ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ೧೦ ಗ್ರಾಮಗಳನ್ನು ಮಂಡ್ಯ ಜಿಲ್ಲೆಯಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ಜುಲೈ ೧ರಿಂದ ಆರು ತಿಂಗಳ ಅವಧಿಯವರೆಗೆ ಯಾವ ಗ್ರಾಮ ಸೋಲಾರ್ ಬಳಕೆಯಲ್ಲಿ ಮೇಲುಗೈ ಸಾಧಿಸುವುದೋ ಆ ಗ್ರಾಮ ಪಂಚಾಯ್ತಿಗೆ ೧ ಕೋಟಿ ರು. ಬಹುಮಾನ ಸಿಗಲಿದೆ.ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಗ್ರಾಪಂ ಕಚೇರಿಗಳು, ಇಲಾಖಾ ಕಚೇರಿಗಳು, ಶಾಲಾ-ಕಾಲೇಜು, ಶುದ್ಧ ಕುಡಿಯುವ ನೀರಿನ ಘಟಕ, ಕುಡಿಯುವ ನೀರು ಪೂರೈಕೆ, ಬೀದಿದೀಪಗಳಿಗೆ ಕಡ್ಡಾಯವಾಗಿ ಸೋಲಾರ್ ಅಳವಡಿಕೆಗೆ ಕ್ರಮ ವಹಿಸಬೇಕಿದೆ. ಸೋಲಾರ್ ಮೇಲ್ಚಾವಣಿ ಅಳವಡಿಸಿದ್ದಲ್ಲಿ ಅವುಗಳ ಸುಸ್ಥಿತಿಯಲ್ಲಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ.
ಗ್ರಾಮ ವ್ಯಾಪ್ತಿಯಲ್ಲಿರುವ ಎಲ್ಲಾ ಮನೆಗಳಿಗೆ ಸೋಲಾರ್ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್‌ನಲ್ಲಿ ಸಾವಲಂಬನೆ ಸಾಧಿಸುವಂತೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಸುವುದಕ್ಕೆ ಮನವೊಲಿಸುವುದು. ಸ್ಪರ್ಧೆಗೆ ಆಯ್ಕೆಯಾಗಿರುವ ಗ್ರಾಮಗಳು ಪರಿಣಾಮಕಾರಿಯಾಗಿ ಸ್ಪರ್ಧಿಸಲು ಅನುಕೂಲವಾಗುವಂತೆ ಪಂಚಾಯ್ತಿ ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದ್ದು, ಜಂಟಿಯಾಗಿ ಕಾರ್ಯನಿರ್ವಹಿಸುವಂತೆ ತಿಳಿಸಲಾಗಿದೆ.ಜಿಲ್ಲಾ ವ್ಯಾಪ್ತಿಯಲ್ಲಿ ಪಿಎಂ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಲಾಗಿದೆ. ಜಿಲ್ಲಾಧಿಕಾರಿ ಸಮಿತಿಯ ಅಧ್ಯಕ್ಷರಾಗಿದ್ದು, ಜಿಪಂ ಸಿಇಒ, ತಹಸೀಲ್ದಾರ್, ಸೆಸ್ಕ್ ಎಂಜಿನಿಯರ್‌ಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಜಿಲ್ಲೆಯಲ್ಲಿ ಮಾದರಿ ಸೋಲಾರ್ ಗ್ರಾಮ ಸ್ಪರ್ಧೆಯಲ್ಲಿರುವ ಗ್ರಾಮಗಳು
ತಾಲೂಕುಗ್ರಾಮಜನಸಂಖ್ಯೆಪಾಂಡವಪುರಕೆನ್ನಾಳು೬೯೭೩ಗುಮ್ಮನಹಳ್ಳಿ೬೧೪೫
ಶ್ರೀರಂಗಪಟ್ಟಣಬೆಳಗೊಳ೧೦೩೧೩ಅರಕೆರೆ೧೦೩೧೩
ಮಂಡ್ಯಕೀಲಾರ೫೧೧೨ಸಂತೆಕಸಲಗೆರೆ೭೪೫೭
ಮದ್ದೂರುಬೆಸಗರಹಳ್ಳಿ೧೦೬೬೯ಕೆಸ್ತೂರು೫೬೮೫
ಮಳವಳ್ಳಿಬೆಳಕವಾಡಿ೯೧೫೧ಕಿರುಗಾವಲು೮೨೬೮ಗೃಹಜ್ಯೋತಿ, ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಅಡ್ಡಿ
ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಗೃಹಜ್ಯೋತಿ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಯೋಜನೆಗಳು ಮಾದರಿ ಸೋಲಾರ್ ಗ್ರಾಮದ ಆಶಯಕ್ಕೆ ಅಡ್ಡಿಯಾಗಿರುವಂತೆ ಕಂಡುಬರುತ್ತಿದೆ.ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್, ರೈತರ ಪಂಪ್‌ಸೆಟ್‌ಗಳಿಗೆ ಮೊದಲಿನಿಂದಲೂ ಉಚಿತವಾಗಿಯೇ ವಿದ್ಯುತ್ ಪೂರೈಸಿಕೊಂಡು ಬರಲಾಗುತ್ತಿದೆ. ಇದರಿಂದ ಲಕ್ಷಾಂತರ ರು. ಖರ್ಚು ಮಾಡಿ ಸೋಲಾರ್ ಶಕ್ತಿಯ ಬಳಕೆಗೆ ಗ್ರಾಮೀಣ ಜನರು ಆಸಕ್ತಿ ತೋರದಿರುವ ಸಾಧ್ಯತೆಗಳೂ ಇವೆ. ಇದರ ನಡುವೆ ಸೋಲಾರ್ ಶಕ್ತಿಯ ಉಪಯೋಗ ಪಡೆಯುವಂತೆ ಮಾಡುವುದು ಪಂಚಾಯಿತಿಗಳಿಗೆ ದೊಡ್ಡ ಸವಾಲಾಗಿದೆ.
ಗೃಹಜ್ಯೋತಿ ಶಾಶ್ವತ ಯೋಜನೆ ಏನಲ್ಲ. ಜೊತೆಗೆ ಈಗ ವಿದ್ಯುತ್ ದರ ಏರಿಕೆಯೂ ಮುಂದೆ ಯಾವುದೇ ಸರ್ಕಾರ ಬಂದರೂ ಇಳಿಸುವುದಿಲ್ಲ. ಹಾಗಾಗಿ ವಿದ್ಯುಚ್ಛಕ್ತಿ ಬಳಕೆಯಿಂದ ಮುಂದೆ ಎದುರಾಗಬಹುದಾದ ಆರ್ಥಿಕ ಹೊರೆಯನ್ನು ತಗ್ಗಿಸುವುದಕ್ಕೆ ಸೋಲಾರ್ ಮೊರೆ ಹೋಗುವುದು ಸೂಕ್ತ ಎಂಬ ಬಗ್ಗೆ ಜನರಿಗೆ ಅರಿವು ಮೂಡಿಸಿ ಸೋಲಾರ್ ಶಕ್ತಿ ಉಪಯೋಗಿಸುವುದರ ಕಡೆ ಕರೆತರಬೇಕಿದೆ. ೧ಕಿಲೋ ವ್ಯಾಟ್ ಸೋಲಾರ್ ಪ್ಯಾನಲ್‌ಗೆ ೫೦ ರಿಂದ ೬೦ ಸಾವಿರ ರು. ವೆಚ್ಚವಾಗಲಿದೆ. ಅದರಲ್ಲಿ ೩೦ ಸಾವಿರ ರು.ವರೆಗೆ ರಿಯಾಯಿತಿ ಸಿಗಲಿದೆ. ೨ ಕಿಲೋವ್ಯಾಟ್ ಅಳವಡಿಸಿಕೊಂಡರೆ ೬೦ ಸಾವಿರ ರು. ೩ ಕಿಲೋವ್ಯಾಟ್‌ಗೆ ೭೮ ಸಾವಿರ ರು.ವರೆಗೆ ರಿಯಾಯ್ತಿ ಜನರಿಗೆ ಸಿಗಲಿದೆ ಎಂದು ಸೆಸ್ಕಾಂ ಇಲಾಖೆ ಅಧಿಕಾರಿಗಳು ತಿಳಿಸಿದರು.ಹೆಚ್ಚುವರಿ ವಿದ್ಯುತ್ ದೊರಕಿದರೆ ರೈತರಿಂದ ಹಾಗೂ ಸಂಬಂಧಿಸಿದ ಇಲಾಖೆಗಳಿಂದ ಸೆಸ್ಕಾಂ ಪ್ರತಿ ಯೂನಿಟ್‌ಗೆ ೨ ರು.ನಂತೆ ವಿದ್ಯುತ್ ಖರೀದಿ ಮಾಡಲಿದೆ. ಗೃಹಜ್ಯೋತಿ, ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಿಗುತ್ತಿರುವುದನ್ನು ಮರೆತು ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಳ್ಳುವುದಕ್ಕೆ ಜನರು ಮನಸ್ಸು ಮಾಡಿದರೆ ಆ ಗ್ರಾಮ ಮಾದರಿ ಸೋಲಾರ್ ಗ್ರಾಮವಾಗುವುದರಲ್ಲಿ ಅನುಮಾನವಿಲ್ಲ.ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಪಿಎಂ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಮೀಣ ಜನರು, ರೈತರು ಈ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಇದರಿಂದ ವಿದ್ಯುತ್ ಉಚಿತವಾಗಿ ದೊರಕಲಿದೆ. ಹೆಚ್ಚುವರಿ ವಿದ್ಯುತ್ ದೊರಕಿದರೆ ಅದನ್ನು ಮಾರಾಟ ಮಾಡಿ ಹಣ ಗಳಿಸಬಹುದು. ನಿರ್ವಹಣೆ ಖರ್ಚು ಬರುವುದಿಲ್ಲ. ಪರಿಸರ ಸ್ನೇಹಿ ಯೋಜನೆಯನ್ನು ಹಳ್ಳಿ ಜನರು ಅಳವಡಿಸಿಕೊಂಡು ಸೋಲಾರ್ ಶಕ್ತಿ ಬಳಕೆಯಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲಬೇಕು.
- ಬಿ.ಸೋಮಶೇಖರ್, ಸೂಪರಿಂಟೆಂಡೆಂಟ್ ಎಂಜಿನಿಯರ್, ಸೆಸ್ಕಾಂ