ಕಣ್ಮನ ಸೆಳೆದ ಜಾನಪದ ಕಲಾತಂಡಗಳ ಮೆರವಣಿಗೆ

| Published : Mar 01 2025, 01:02 AM IST

ಸಾರಾಂಶ

ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆವಳಡಿ ಗ್ರಾಮದ ಮಲ್ಲಮ್ಮ ಉತ್ಸವದ ಜಾನಪದ ಕಲಾ ವಾಹಿನಿ ಮೆರವಣಿಗೆಯನ್ನು ಕೂಡಲ ಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ನಡೆದ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವದ ಮೊದಲ ದಿನದ ಜಾನಪದ ಕಲಾವಾಹಿನಿ ಮೆರವಣಿಗೆ ನೋಡುಗರ ಗಮನ ಸೆಳೆಯಿತು.

ಹಣೆಗೆ ತಿಲಕ, ತಲೆಗೆ ಪೇಠ ತೊಟ್ಟು ಕಂಗೊಳಿಸಿದ ಯುವಕರು, ಊರಿನ ಹಿರಿಯರು, ಪೂರ್ಣಕುಂಭ ಹೊತ್ತು ಸಾಗಿದ ಸುಮಂಗಲೆಯರು ಮೆರವಣಿಗೆ ಆಕರ್ಷಣೆಯಾಗಿದ್ದರು. ವಿಶ್ವದಲ್ಲೇ ಪ್ರಥಮ ಮಹಿಳಾ ಸೈನ್ಯ ಕಟ್ಟಿ ನಾಡ ರಕ್ಷಣೆಗೆ ದಿಟ್ಟ ಹೋರಾಟ ನಡೆಸಿ ಇತಿಹಾಸ ಸೃಷ್ಟಿಸಿದ ರಾಣಿ ಮಲ್ಲಮ್ಮಳ ಉತ್ಸವದಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ಜನರ ಮನಸೂರೆಗೊಳಿಸಿತು.

ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಮಲ್ಲಮ್ಮಳ ಪ್ರತಿಮೆಗೆ ಹೂಮಾಲೆ ಹಾಕಿ ಗೌರವ ಸಮರ್ಪಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಶಿರಸಿ ತಾಲೂಕು ಸೋಂದಾ ಗ್ರಾಮದಿಂದ ವಿವಿಧೆಡೆ ಪೂಜೆ ಹಾಗೂ ಗೌರವ ಸ್ವಾಗತಗೊಂಡು ಆಗಮಿಸಿದ ಮಲ್ಲಮ್ಮಳ ವಿಜಯ ಜ್ಯೋತಿಗೆ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಬೆಳವಡಿ ಮಲ್ಲಮ್ಮ ವೃತ್ತದಲ್ಲಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಬೆಳವಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು.

ಗ್ರಾಪಂ ಉಪಾಧ್ಯಕ್ಷೆ ಸಂಗೀತಾ ಕನೇಕರ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತಹಸೀಲ್ದಾರ್‌ ಹಣಮಂತ ಶಿರಹಟ್ಟಿ, ಡಿವೈಎಸ್ಪಿ ರವಿ ನಾಯಕ, ಆರೋಗ್ಯಾಧಿಕಾರಿ ಎಸ್.ಎಸ್.ಸಿದ್ದಣ್ಣವರ, ಬಿಇಒ ಎ.ಎನ್.ಪ್ಯಾಟಿ, ಸಿಪಿಐಗಳಾದ ಪಂಚಾಕ್ಷರಿ ಸಾಲಿಮಠ, ಶಿವಾನಂದ ಗುಡಗನಟ್ಟಿ, ಪಿಎಸ್ಐ ಸುಮಾ ಗೋರಾಬಾಳ, ಪಿಡಿಒ ಜಿ.ಐ.ಬರಗಿ,ಜಿಪಂ ಮಾಜಿ ಸದಸ್ಯರುಗಳಾದ ಈರಣ್ಣ ಕರೀಕಟ್ಟಿ, ರೋಹಿಣಿ ಪಾಟೀಲ, ಗ್ರಾಪಂ ಸದಸ್ಯರಾದ ಬಸಯ್ಯ ವಿರಕ್ತಮಠ, ಬಸಪ್ಪ ದೇಗಾವಿ, ವಿಶ್ವನಾಥ ಕರೀಕಟ್ಟಿ, ಈರಪ್ಪ ತುರಾಯಿ, ಆನಂದ ಮುಪ್ಪಯ್ಯನವರಮಠ, ಗಜಾನಾನ ರಾಣೋಜಿ, ಈರನಗೌಡ ಪಾಟೀಲ, ಸಿದ್ದಪ್ಪ ನಂದಿಹಳ್ಳಿ, ಯಲ್ಲಪ್ಪ ಬಾರ್ಕಿ, ಮೈಲಾರ ತುರಾಯಿ, ರಾಜು ಬಿಸಲಳ್ಳಿ, ಬಸಪ್ಪ ನರೆಗಲ್ಲ, ಮಹಾಂತಕ್ಕ ಗುಡ್ಡದಮಠ, ಮಂಜುಳಾ ಮಟ್ಟಿ, ಸುಮಂಗಲಾ ಪರಮನಾಯಕರ, ರಿಯಾನಾಬೇಗಂ ದಿಲ್ಲುನಾಯಕ, ರೇಣುಕಾ ಕುರಿ, ಕೌಸರ ಸಂಗ್ರಶಕೊಪ್ಪ, ರೇಣುಕಾ ಗುಗ್ಗರಿ, ಸಾರಾಬಿ ಹಾದಿಮನಿ, ದುರ್ಗವ್ವ ಮಾದರ, ದುರ್ಗವ್ವ ಕಪರಿ, ಫಕ್ಕೀರವ್ವ ಕರೀಕಟ್ಟಿ, ಬಾಳವ್ವ ಅಬ್ಬಾರ ಹಾಗೂ ಕರವೇ ಕಾರ್ಯಕರ್ತರು, ರಾಣಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಪದಾಧಿಕಾರಿಗಳು ಶಿಕ್ಷಕರು, ಉಪನ್ಯಾಸಕರು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಯುವಕ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೆರಗು ತಂದ ಕಲಾ ತಂಡಗಳು:

ಗ್ರಾಮದ ಎಲ್ಲ ಮನೆಗಳ ಮುಂಭಾಗದ ರಸ್ತೆಯುದ್ದಕ್ಕೂ ಬಣ್ಣಬಣ್ಣದ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಕಲಾ ತಂಡಗಳ ಮೆರವಣಿಗೆಯೊಂದಿಗೆ ಸಾಗಿದ ರಾಣಿ ಮಲ್ಲಮ್ಮಳ ವೀರಜ್ಯೋತಿಗೆ ಮಹಿಳೆಯರು ಮಕ್ಕಳು ಪೂಜೆ ಸಲ್ಲಿಸಿ ಆರತಿ ಬೆಳಗಿ ಕೈಮುಗಿದು ಪ್ರಾರ್ಥಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಸಮಾಜ ಸೇವಕ ವಿಜಯ ಬಿಸಲೊಳ್ಳಿ ಮಜ್ಜಿಗೆ ವ್ಯವಸ್ಥೆ ಮಾಡಿದ್ದರು.

ಮೂಡಲಗಿ ಪುರವಂತಿಕೆ ಕಲಾ ಮೇಳ, ಡೊಳ್ಳು ಕುಣಿತ, ಅಥಣಿ ಮತ್ತು ರಾಮದುರ್ಗದ ಮಹಿಳಾ ಡೊಳ್ಳು ಕುಣಿತ, ಜಗ್ಗಲಗಿ ತಂಡ, ಸಂಬಳ ವಾದನ, ರಾಯಬಾಗದ ಹಲಗೆ ವಾದನ, ರಾಯಬಾಗದ ಡೋಲ್ ಪಥಕ್, ಕರಬಲ್ ಕುಣಿತ, ಚಿಕ್ಕೋಡಿಯ ಕರಡಿ ಮಝಲು ಮತ್ತು ಜಾಂಝ್ ಪಥಕ್, ಗೋಕಾಕದ ಡೊಳ್ಳು ಕುಣಿತ, ಸಿ.ಎಸ್.ಲೋಕೇಶ ವೀರ ಹುನುಮಾನ ಗೊಂಬೆ ರೂಪಕದಲ್ಲಿ ಗಮನ ಸೆಳೆದರು. ಉಳಿದಂತೆ ವೀರಗಾಸೆ. ಅಗೋರಿ, ತಮಟೆ ವಾದನ, ಪೂಜಾ ಕುಣಿತ, ಕಂಸಾಳೆ ಕುಣಿತ ಉತ್ಸವದ ಕಳೆ ಹೆಚ್ಚಿಸಿದವು. ಬೆಳವಡಿಯ ಈಶಪ್ರಭು ಶಿಕ್ಷಣ ಸಂಸ್ಥೆಯ ಶಾಲೆಯ ವಿದ್ಯಾರ್ಥಿಗಳು ಬೆಳವಡಿ ಮಲ್ಲಮ್ಮ ಮತ್ತು ರಾಜಾಈಶಪ್ರಭು ರೂಪಕ ಮತ್ತು ಮಹಿಳಾ ಸೈನ್ಯದ ವೇಷಭೂಷಣದಲ್ಲಿ ಮಿಂಚಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಸವಜಯ ಮೃತ್ಯಂಜಯ ಸ್ವಾಮಿಜಿ, ರಾಣಿ ಮಲ್ಲಮ್ಮಳ ಶೌರ್ಯ ಸಾಹಸ ಪರಾಕ್ರಮದ ಇತಿಹಾಸ ಸೂರ್ಯ ಚಂದ್ರರಿರುವರೆಗೂ ಅಜರಾಮರವಾಗಿದೆ. ತನ್ನ ಸಂಸ್ಥಾನದ ಪ್ರಜೆಗಳ ರಕ್ಷಣೆಗೆ ಹೋರಾಡಿ ಮಡಿದ ರಾಣಿ ಮಲ್ಲಮ್ಮಳ ನಾಡಾಭಿಮಾನ ಎಲ್ಲರಿಗೂ ಸ್ಪೂರ್ತಿಯಾಗಿದೆ. ವಿಶ್ವದಲ್ಲೇ ಮೊದಲ ಮಹಿಳಾ ಸೈನ್ಯ ಕಟ್ಟಿ ಸಾಹಸ ತೋರಿದ ರಾಣಿ ಮಲ್ಲಮ್ಮಳ ಇತಿಹಾಸ ಇಡೀ ವಿಶ್ವಕ್ಕೆ ಪರಿಚಯವಾಗಬೇಕು. ಸರಕಾರ ಈ ಬಗ್ಗೆ ಚಿಂತನೆ ನಡೆಸಿ ಆದಷ್ಟು ಬೇಗ ಅಭಿವೃದ್ಧಿ ಪ್ರಾಧಿಕಾರ ಘೋಷಿಸಬೇಕು. ಹಾಗೆಯೇ ಆಗಿನ ಕಾಲದಲ್ಲೇ ಮರಾಠಿಗರು ಹಾಗೂ ಕನ್ನಡಿಗರ ಮಧ್ಯೆ ಭಾಂಧವ್ಯ ಮೂಡಿಸಿ ಸಹೋದರತ್ವ ಭಾವ ಬೆಳೆಸಿದ ರಾಣಿ ಮಲ್ಲಮ್ಮಳ ದೇಶಪ್ರೇಮ ನಮ್ಮೆಲ್ಲರಿಗೂ ಅನುಕರಣೀಯ ಎಂದರು.