ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಾಶಿ ಕಾರಿಡಾರ್ ಮಾದರಿಯಲ್ಲೇ ಭೀಮಾ ತೀರದಲ್ಲಿರುವ ದತ್ತಾತ್ರೇಯ ನೆಲೆ ನಿಂತಿರುವ ಗಾಣಗಾಪುರ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದೆ.ಕೇಂದ್ರದ ಪ್ರವಾಸೋದ್ಯಮ ಇಲಾಖೆಯ ಪ್ರಸಾದ ಯೋಜನೆಯಡಿಯಲ್ಲಿ ₹85 ಕೋಟಿ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದ್ದು ಶೀಘ್ರ ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ ಎಂದು ಮಾಜಿ ಜಿಪಂ ಸದಸ್ಯರು, ಎಚ್ಕೆಇ ಸಂಸ್ಥೆಯ ಆಡಲಿತ ಮಂಡಳಿ ಸದಸ್ಯರು, ಶಾಸಕ ಎಂವೈ ಪಾಟೀಲರ ಪುತ್ರ ಅರುಣ ಪಾಟೀಲ್ ಹೇಳಿದ್ದಾರೆ.
ಗುರುವಾರ ಇದೇ ಯೋಜನೆಯ ವಿಸ್ತೃತ ಯೋಜನಾ ವರದಿ ವಿಚಾರದಲ್ಲಿ ಸ್ಥಳ ಭೇಟಿಗೆಂದು ಗಾಣಗಾಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಕನ್ನಡಪ್ರಭ ಜೊತೆ ದೂರವಾಣಿಯಲ್ಲಿ ಮಾತನಾಡುತ್ತ ಸದರಿ ಯೋಜನೆ ಮಂಜೂರಾದಲ್ಲಿ ಬರುವ ದಿನಗಳಲ್ಲಿ ಗಾಣಗಾಪುರದ ನೋಟವೇ ಬದಲಾಗುವ ವಿಶ್ವಾಸ ವ್ಯಕ್ತಪಡಿಸಿದರು.ಪ್ರಸಾದ್ ಯೋಜನೆಯಡಿಯಲ್ಲಿ ಗಾಣಗಾಪುರ ಪ್ರಗತಿಗೆ ಯೋಜನೆ ಸಿದ್ಧವಿದೆ. ಇದು ಸದ್ಯ ರಾಜ್ಯದ ಪ್ರವಾಸೋದ್ಯಮ ಇಲಾಖೆ ನಿರ್ದಶಕರ ಬಳಿ ಇದ್ದು ಅಂತಿಮ ಹಂತದ ಪರಶೀಲನೆಯಲ್ಲಿದೆ. ತಕ್ಷಣ ಇದನ್ನು ಸರಕಾರದ ಪರವಾಗಿಯೇ ಮಂಜೂರಾತಿಗೆ ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ. ಅಲ್ಲಿಂದ ಈ ಯೋಜನೆಯ ಬಗ್ಗೆ ಸತತ ಬೆನ್ನು ಹತ್ತಿ ಅದನ್ನು ಗಾಣಗಾಪುರಕ್ಕೆ ಮಂಜೂರುಮಾಡಿಸಿಕೊಂಡು ಬರಲಾಗುವುದು ಎಂದು ಅರುಣ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಅಫಜಲ್ಪೂರ ತಾಲೂಕಿನ ಪುಟ್ಟದಾದ ಪುಣ್ಯತಾಣ ಗಾಣಗಾಪುರ ಜಗತ್ತಿನಲ್ಲೇ ಏಕಮೇವ ದತ್ತ ನೆಲೆನಿಂತ ಪವಿತ್ರ ತಾಣವಾಗಿ ಹೆಸರಾಗಿದೆ.ಇಲ್ಲಿಗೆ ವಿವಿಐಪಿ ಭಕ್ತರು ಸಾವಿರಾರು ಬಂದು ಹೋಗೋದರಿಂದ ಈಚೆಗಿನ ದಿನಗಳಲ್ಲಿ ಇಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಲು ಕೂಗು ಹೆಚ್ಚಿತ್ತು. ಇದೀಗ ಪ್ರಸಾದ ಯೋಜನೆಯಡಿಯಲ್ಲಿ ಕೇಂದ್ರದಿಂದ ಅನುಕೂಲವಾದಲ್ಲಿ ಬರುವ ದಿನಗಳಲ್ಲಿ ಇಲ್ಲಿಗೆ ಬಂದು ಹೋಗುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ.