ವಿಶೇಷಚೇತನ ಕುಟುಂಬಕ್ಕೆ ನ್ಯಾಯದ ಭರವಸೆ

| Published : May 26 2024, 01:34 AM IST

ಸಾರಾಂಶ

ಮೇ 25ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ಈ ಕುಟುಂಬಕ್ಕಿಲ್ಲ ಆಧಾರ; ತುತ್ತು ಅನ್ನಕ್ಕೂ ತತ್ವಾರ! ಶೀರ್ಷಿಕೆ ವರದಿಗೆ ಸ್ಪಂದನೆ

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಹೃದಯ ಭಾಗದಲ್ಲಿರುವ ಖವಾಸಪುರ ಮಹ್ಮದೀಯ ಮಸೀದಿ ಹತ್ತಿರವಿರುವ ಅಂಗವಿಕಲ ಕುಟುಂಬದ ಸಾದಿಯಾ ಪರ್ವೀನ್ ಮನೆಗೆ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸಿದ್ರಾಮ ಟಿ. ಪಿ. ಅವರು ಭೇಟಿ ನೀಡಿ, ಅಂಗವಿಕಲ ಕುಟುಂಬದ ಸಮಸ್ಯೆ ಆಲಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ, ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡಿದರು.

ಮೇ 25ರಂದು ಕನ್ನಡಪ್ರಭದಲ್ಲಿ ಈ ಕುಟುಂಬಕ್ಕಿಲ್ಲ ಆಧಾರ; ತುತ್ತು ಅನ್ನಕ್ಕೂ ತತ್ವಾರ! ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಗೆ ಸ್ಪಂದಿಸಿದ ನ್ಯಾಯಾಧೀಶರು, ಮೇ 25ರಂದು ಶನಿವಾರ ಅಂಗವಿಕಲೆ ಸಾದಿಯಾ ಪರ್ವೀನ್ ಮನೆಗೆ ಭೇಟಿ ನೀಡಿ, ಆ ಕುಟುಂಬದ ಪರಿಸ್ಥಿತಿ ನೋಡಿ ನಿಜವಾಗಲೂ ಸರ್ಕಾರದ ಯೋಜನೆಗಳು ಇಂಥ ಕುಟುಂಬಕ್ಕೆ ತಲುಪಿಸಬೇಕಾದದ್ದು, ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ ಎಂದರು.

ಅಧಿಕಾರಿಗಳು ನಿಜವಾದ ಫಲಾನುಭವಿಗಳು ಯೋಜನೆಯಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ. ಅಂಗವಿಕಲರ ವೇತನ ಕಳೆದ ಎಂಟ್ಹತ್ತು ತಿಂಗಳುಗಳಿಂದ ಬರುತ್ತಿಲ್ಲ. ಮೇ 27ರೊಳಗಾಗಿ ಇವರಿಗೆ ಅಂಗವಿಕಲ ವೇತನ ಅದು ಎಲ್ಲಿಂದ ನಿಂತಿದೆಯೋ, ಅಲ್ಲಿಂದ ಇಲ್ಲಿಯವರೆಗೆ ಈ ಕುಟುಂಬಕ್ಕೆ ತಲುಪುವಂತಾಗಬೇಕು. ಸೂರಿಗಾಗಿ ನಗರಸಭೆ ಅಧಿಕಾರಿ ಕರೆಯಿಸಿ ಮಾತನಾಡುವುದಾಗಿ ತಿಳಿಸಿದರು.

ಅಂಗವಿಕಲ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಾಲೂಕು ಮಟ್ಟದ ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ) ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ನಿಮ್ಮ ಇಲಾಖೆಯಲ್ಲಿ ಅಂಗವಿಕಲರಿಗೆ ಏನೇನು ಸೌಲಭ್ಯಗಳಿವೆ ಎಂದು ಕೇಳಿದರು.

ಆಗ ಅವರು, ನಮ್ಮ ಇಲಾಖೆಯಲ್ಲಿ ಕೆಲವೊಂದು ಸೇವೆಗಳನ್ನು ಸಂಸ್ಥೆ ಮೂಲಕ ನೀಡಲಾಗುತ್ತಿದೆ. ನಮ್ಮಲ್ಲಿ ಎಪಿಡಿ ಎನ್ನುವ ಸಂಸ್ಥೆ ಇದ್ದು, ಅದರ ಮೂಲಕ ಫಿಜಿಯೋಥೆರಪಿ, ಅಂಗವಿಕಲ ಫಲಾನುಭವಿಗಳ ನಿರಾಮಯ್ ಕಾರ್ಡ್ ಕೊಡಲಾಗುತ್ತಿದೆ. ಈ ಕಾರ್ಡ್ ಹೊಂದಿರುವ ಫಲಾನುಭವಿ ವರ್ಷದಲ್ಲಿ ₹1 ಲಕ್ಷದವರೆಗೆ ವೈದ್ಯಕೀಯ ವೆಚ್ಚ ನೀಡಲಾಗುವುದು. ಅಲ್ಲದೆ ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಶಾಲೆ ಹಾಗೂ ಕೇಂದ್ರ ತೆರೆಯಲಾಗಿದೆ. ಇಂತಹ ಮಕ್ಕಳನ್ನು ಬಿಡಬಹುದು. ಅಂಗವಿಕಲ ಬುದ್ಧಿಮಾಂಧ್ಯ ಮಕ್ಕಳಿಗೆ ತಿಂಗಳಿಗೆ ನೀಡುವ ₹1400 ಬದಲಿಗೆ ₹2 ಸಾವಿರ ಆಗಿದೆ. ಅದನ್ನು ಮಾಡಿಕೊಡುತ್ತೇವೆ. ಈ ಕುಟುಂಬಕ್ಕೆ ವೀಲ್ಹ್‌ಚೇರ್ ನೀಡುವುದಾಗಿ ಮತ್ತು ಇವರ ಜೊತೆ ನಿಕಟ ಸಂಪರ್ಕ ಹೊಂದುವುದಾಗಿ ಅವರು ತಿಳಿಸಿದರು.

ಸ್ಥಳದಲ್ಲಿ ಹಾಜರಿದ್ದ ಕಂದಾಯ ಇಲಾಖೆ ಕಂದಾಯ ನಿರೀಕ್ಷಿತ ಬಸನಗೌಡ ಹಾಗೂ ಗ್ರಾಮಾಡಳಿತ ಅಧಿಕಾರಿ ವೆಂಕಟೇಶ್ ಸೋಮವಾರ ಎಸ್‌ಬಿಐ ಬ್ಯಾಂಕಿಗೆ ಹೋಗಿ ಅವರ ಅಕೌಂಟಿಗೆ ಎನ್‌ಪಿಸಿಐ ಲಿಂಕ್ ಮಾಡಿ ಅಂಗವಿಕಲ ವೇತನ ಬರುವಂತೆ ಮಾಡುವುದಾಗಿ ನ್ಯಾಯಾಧೀಶರಿಗೆ ತಿಳಿಸಿದರು.

ಮೈಸೂರು ಮತ್ತು ಹುಬ್ಬಳ್ಳಿಯಲ್ಲಿರುವ ಇಂಥ ಮಕ್ಕಳಿಗಾಗಿರುವ ಶಾಲೆ ಹಾಗೂ ಕೇಂದ್ರಕ್ಕೆ ಈ ಮಗುವನ್ನು ಕಳುಹಿಸಿಕೊಟ್ಟರೆ ಅಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅಲ್ಲಿ ನುರಿತ ವೈದ್ಯಾಧಿಕಾರಿಗಳು, ಸಿಬ್ಬಂದಿ ಇರುತ್ತಾರೆ. ಇದೇ ಮಕ್ಕಳನ್ನು ನೋಡಿ ಈ ಮಗು ಆರೋಗ್ಯದಲ್ಲಿ ಚೇತರಿಸಿಕೊಳ್ಳಬಹುದು. ಮಗುವಿನ ಆರೋಗ್ಯದ ದೃಷ್ಟಿಯಿಂದ ಅಲ್ಲಿಗೆ ಬಿಡುವುದು ಸೂಕ್ತ. ಕುಟುಂಬದವರು ಮಾತನಾಡಿಕೊಂಡು ಒಂದು ನಿರ್ಧಾರಕ್ಕೆ ಬನ್ನಿ ಎಂದು ನ್ಯಾಯಾಧೀಶರು ಕುಟುಂಬದ ಯಜಮಾನಿ ಶನಾಜ್ ಬೇಗಂ ಅವರಿಗೆ ತಿಳಿಸಿದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಅವರು, ಈ ಕುಟುಂಬಕ್ಕೆ ಸರಕಾರದ ಸೌಲಭ್ಯಗಳು ಒದಗಿಸಿಕೊಡುವಲ್ಲಿ ಅಧಿಕಾರಿಗಳು ವಿಫಲವಾದರೆ ನ್ಯಾಯಾಲಯದ ಮೂಲಕ ಪಡೆಯಲು ಆ ಕುಟುಂಬಕ್ಕೆ ನಮ್ಮ ಸಂಘ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.

ಪ್ರಧಾನ ನ್ಯಾಯಾಧೀಶೆ ಶೋಭಾ, ವಕೀಲರ ಸಂಘದ ಅಧ್ಯಕ್ಷ ಸಂತೋಷ್ ದೇಶಮುಖ್, ಕಾರ್ಯದರ್ಶಿ ಭೀಮನಗೌಡ, ಪ್ಯಾನಲ್ ವಕೀಲೆ ಆಯುಷ್ ಪರ್ವೀನ್ ಜಮಖಂಡಿ, ಎಂ.ಆರ್. ಡಬ್ಲ್ಯೂ ನಾಗರಾಜ, ಯು.ಆರ್. ಡಬ್ಲ್ಯೂ ರಮೇಶ್, ಅಂಗನವಾಡಿ ಕಾರ್ಯಕರ್ತೆ ಮಹಮ್ಮದ್ ಸಾಲರ್ ಮಿರಾಜ್‍ದಾರ್ ಇದ್ದರು.ನೊಂದವರ, ಸರ್ಕಾರಿ ಸೌಲಭ್ಯ ವಂಚಿತ ವ್ಯಕ್ತಿಗಳು, ಮಾನಸಿಕ ಅಸ್ವಸ್ಥರು, ವಿಕಲಚೇತನರು, ಕೋಮು ಘರ್ಷಣೆಗೆ ಬಲಿಯಾದವರು, ಎಸ್ಸಿ-ಎಸ್ಟಿ, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆ ಕೆಲಸಗಾರರು ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಕಾನೂನು ಸೇವಾ ಪ್ರಾಧಿಕಾರ ನೆರವು ನೀಡಲು ಸದಾಸಿದ್ಧವಿದೆ.

ಸಿದ್ರಾಮ ಟಿ.ಪಿ., ಹಿರಿಯ ಶ್ರೇಣಿ ನ್ಯಾ., ಶಹಾಪುರ.

ಜೀವನದಲ್ಲಿ ಬಹಳ ನೊಂದಿದ್ದೇವೆ. ನಮ್ಮಲ್ಲಿ ಬದುಕುವ ಭರವಸೆ ಕಮರಿತ್ತು. ಈಗ ಜಡ್ಜ್ ಸಾಹೇಬರು ಮನೆಗೆ ಬಂದು ನಮ್ಮ ಸಮಸ್ಯೆ ಕಣ್ಣಾರೆ ಕಂಡು ಸೌಲಭ್ಯ ಒದಗಿಸಿ ಕೊಡುವ ಭರವಸೆ ನೀಡಿದ್ದರಿಂದ ಬದುಕುವ ಭರವಸೆ ಮೂಡಿದೆ.

ಶಹನಾಜ್ ಬೇಗಂ, ಅಂಗವಿಕಲೆ ಸಾಧಿಯಾ ಪರ್ವೀನ್‌ಳ ತಾಯಿ.