ಮಕ್ಕಳ ಶೈಕ್ಷಣಿಕ ಹಿತಕ್ಕಾಗಿ ಬೇಡಿಕೆ ಈಡೇರಿಸುವ ಭರವಸೆ

| Published : Jun 25 2024, 12:35 AM IST

ಸಾರಾಂಶ

ಇಂಗ್ಲೀಷ, ಕನ್ನಡ ಶಿಕ್ಷಕರನ್ನು ಒದಗಿಸಲು ಒತ್ತಾಯಿಸಿ ಧರಣಿ ನಡೆಸುತ್ತಿದ್ದ ಶೇಷಗಿರಿ ಸರಕಾರಿ ಪ್ರೌಢಶಾಲೆಗೆ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಕಳೆದ ೪ ದಿನಗಳಿಂದ ಮುಖ್ಯೋಪಾಧ್ಯಾಯರನ್ನು ವರ್ಗಾಯಿಸುವ ಹಾಗೂ ಇಂಗ್ಲೀಷ, ಕನ್ನಡ ಶಿಕ್ಷಕರನ್ನು ಒದಗಿಸಲು ಒತ್ತಾಯಿಸಿ ಧರಣಿ ನಡೆಸುತ್ತಿದ್ದ ಶೇಷಗಿರಿ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕ ಶ್ರೀನಿವಾಸ ಮಾನೆ, ಮಕ್ಕಳ ಶೈಕ್ಷಣಿಕ ಹಿತಕ್ಕಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿ ಧರಣಿ ಅಂತ್ಯಗೊಳಿಸಿ ಮಕ್ಕಳು ಪಾಠಕ್ಕೆ ತೆರಳಲು ಮನವೊಲಿಸಿ ಎಲ್ಲ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಸೋಮವಾರ ವಿದ್ಯಾರ್ಥಿಗಳು ಧರಣಿ ನಿರತ ಹಾನಗಲ್ಲ ತಾಲೂಕಿನ ಶೇಷಗಿರಿ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಳೆಯಲ್ಲಿಯೇ ಧರಣಿ ನಡೆಸಿದ ಮಕ್ಕಳಿಗೆ ತಿಳಿವಳಿಕೆ ಹೇಳಿದರು. ಪಾಠದ ಅವಧಿಯನ್ನು ಕಳೆದುಕೊಳ್ಳುವುದು ಬೇಡ. ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಅವಕಾಶ ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶ. ಶಾಲೆಯಲ್ಲಿ ಶಿಕ್ಷಕರ ಲೋಪದಿಂದ ಸಮಸ್ಯೆಯಾದರೆ ಅದನ್ನು ಇಲಾಖೆ ಹಾಗೂ ಸರಕಾರ ಪರಿಹರಿಸುತ್ತದೆ. ಹಠದಿಂದ ಯಾವುದೇ ಸಮಸ್ಯೆಗೆ ಪರಿಹಾರವಿಲ್ಲ. ಈ ಶಾಲೆಯ ಸಮಸ್ಯೆ ಪರಿಹರಿಸುವ ಕರ್ತವ್ಯ ನನ್ನದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರು ವರ್ಗಾವಣೆಯಾಗದ ಹೊರತು ಧರಣಿ ನಿಲ್ಲಿಸುವುದಿಲ್ಲ. ಅವರಿಂದ ಶಾಲೆಯ ಪಾಠಗಳಿಗೆ ತೊಂದರೆಯಾಗಿದೆ. ಇದು ಇಡೀ ಶಾಲೆಯ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಪರಿಣಾಮವಾಗಿದೆ. ಮುಖ್ಯ ಶಿಕ್ಷಕರ ವರ್ಗಾವಣೆ ಆಗಲೇಬೇಕು. ಇಲ್ಲಿನ ಕನ್ನಡ ಶಿಕ್ಷಕರು ಮರಳಿ ಶಾಲೆಗೆ ಬರಬೇಕು ಎಂದು ಪಟ್ಟು ಹಿಡಿದರು. ಆಗ ಸರಕಾರ ಎಂದರೆ ಅದಕ್ಕೊಂದು ನಿಯಮ ಇದೆ. ಅದರ ಅಡಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಮುಖ್ಯೋಪಾಧ್ಯಾಯರನ್ನು ವರ್ಗಾವಣೆ ಮಾಡುವುದು ಸರಕಾರದಲ್ಲಿ ಆಗಬೇಕು. ಅದು ಉಪನಿರ್ದೇಶಕರಿಂದಲ್ಲ. ಸರಕಾರದ ನಿರ್ದೇಶನ ಬೇಕು. ಯಾವುದೇ ಸಮಸ್ಯೆಗಳನ್ನು ಸರಳ ಮಾರ್ಗದಲ್ಲಿ ಇತ್ಯರ್ಥಗೊಳಿಸಬೇಕು. ನೀವೆಲ್ಲ ಇನ್ನೂ ಮಕ್ಕಳು. ನಿಮ್ಮ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿರಿ. ಶಾಲೆಯ ಸಮಸ್ಯೆ ಪರಿಹರಿಸುವ ಭರವಸೆ ನನ್ನದು ಎಂದು ಮನವೊಲಿಸಿದ ನಂತರ ಮಕ್ಕಳು ಧರಣಿ ನಿಲ್ಲಿಸಿ ಪಾಠದ ಕೊಠಡಿಗೆ ತೆರಳಿದರು.

ಈ ಸಂದರ್ಭದಲ್ಲಿ ಚಂದ್ರಪ್ಪ ಜಾಲಗಾರ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಸದಸ್ಯರಾದ ಅರುಣ ಕೊಂಡೋಜಿ, ಪ್ರಭು ಗುರಪ್ಪನವರ, ಶಂಕ್ರಣ್ಣ ಗುರಪ್ಪನವರ, ಪರಶುರಾಮ ಅಂಬಿಗೇರ, ಬಸವರಾಜ ಬಡೆಮ್ಮಿ, ಸಿದ್ದು ಕೊಂಡೋಜಿ, ರಾಘಪ್ಪ ಅಂಬಿಗೇರ, ನಾಗರಾಜ ನೆಲ್ಲಿಕೊಪ್ಪ, ಮಲ್ಲಿಕಾರ್ಜುನ ಚಕ್ರಸಾಲಿ, ಚಂದ್ರಶೇಖರ ರೊಟ್ಟಿ, ಸಿದ್ದಪ್ಪ ಅಂಬಿಗೇರ, ಅಶೋಕ ಕೊಂಡೋಜಿ, ಶಿವಕುಮಾರ ಅಪ್ಪಾಜಿ ಮೊದಲಾದವರಿದ್ದರು.