ಕುಂದಾಪುರ: ಭಾರತದಂತಹ ಮಹಾನ್ ದೇಶವು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಈಗಾಗಲೇ ವಿಶ್ವದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಆದರೆ ಎಲ್ಲ ಕ್ಷೇತ್ರಗಳಲ್ಲೂ ಅತ್ಯುನ್ನತ ಸಾಧನೆ ಮಾಡಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದು ಅತ್ಯಗತ್ಯ ಎಂದು ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಹೆಮ್ಮಾಡಿಯ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸುಳ್ಸೆಯಲ್ಲಿ ನೂತನವಾಗಿ ನಿರ್ಮಿಸಲಾದ ‘ಶ್ಲಾಘನಾ-ಶನಯ’ ನೂತನ ವಿದ್ಯಾರ್ಥಿ ವಸತಿ ನಿಲಯಗಳ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯನ ಶ್ರೇಷ್ಠ ಶಕ್ತಿಯೇ ಬುದ್ಧಿಶಕ್ತಿ. ಆ ಬುದ್ಧಿಯ ಸಮಗ್ರ ವಿಕಾಸಕ್ಕೆ ಶಿಕ್ಷಣವೇ ಮೂಲಾಧಾರವಾಗಿದೆ ಎಂದರು.ಜನತಾ ಶಿಕ್ಷಣ ಸಂಸ್ಥೆಯು ಸಣ್ಣ ಪ್ರಯತ್ನದಿಂದ ಆರಂಭಗೊಂಡು ಇಂದು ಮಹತ್ವದ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿರುವುದು ಶ್ಲಾಘನೀಯ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಿರುವ ಈ ಸಂಸ್ಥೆ ಮತ್ತಷ್ಟು ಬೆಳೆಯಲಿ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತೆ ಉತ್ತಮ ವಸತಿ ಹಾಗೂ ಆಹಾರ ವ್ಯವಸ್ಥೆ ಒದಗಿಸಲು ನಿರ್ಮಿಸಿರುವ ವಸತಿ ನಿಲಯವು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ ಹಾಗೂ ಕಾರ್ಯದರ್ಶಿ ಶ್ಯಾಮಲಾ ಗಣೇಶ್ ದಂಪತಿ ಜಗದ್ಗುರುಗಳ ಪಾದಪೂಜೆ ಸಲ್ಲಿಸಿದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಶಿಕ್ಷಣ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಮತ್ತು ವಿದ್ಯಾಭಿಮಾನಿಗಳು ಭಾಗವಹಿಸಿದ್ದರು.ವಿದ್ಯಾರ್ಥಿನಿಯರಾದ ಸಿಂಚನಾ ಜಿ. ಭಟ್ ಹಾಗೂ ಸಮೃದ್ಧಿ ಶೆಟ್ಟಿ ಅವರು ಆದಿ ಶಂಕರಾಚಾರ್ಯರ ಜೀವನ ಹಾಗೂ ಕೊಡುಗೆಗಳ ಕುರಿತು ಮಾತನಾಡಿದರು.ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇ.ಮೂ. ಲೋಕೇಶ್ ಅಡಿಗ ಬಡಾಕೆರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಉದಯ ನಾಯ್ಕ್ ಸ್ವಾಗತಿಸಿದರು. ದಾಮೋದರ ಶರ್ಮಾ ನಿರೂಪಿಸಿದರು.