ನಾವೆಲ್ಲರೂ ಒಂದಾದಾಗ ಮಾತ್ರ ಮಾತ್ರ ಸಮೃದ್ಧ ರಾಷ್ಟ್ರ ನಿರ್ಮಾಣ: ಶ್ರೀಧರ ಸ್ವಾಮಿ

| Published : Oct 14 2024, 01:20 AM IST

ನಾವೆಲ್ಲರೂ ಒಂದಾದಾಗ ಮಾತ್ರ ಮಾತ್ರ ಸಮೃದ್ಧ ರಾಷ್ಟ್ರ ನಿರ್ಮಾಣ: ಶ್ರೀಧರ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯದಶಮಿ ಅಂಗವಾಗಿ ಭಾನುವಾರ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳಿಂದ ಅದ್ಧೂರಿಯಾಗಿ ಪಥ ಸಂಚಲನ ನಡೆಯಿತು.

ಹುಬ್ಬಳ್ಳಿ: ದೇಶದಲ್ಲಿ ಹತ್ತಾರು ಕಾರಣಗಳನ್ನು ಮುಂದಿಟ್ಟುಕೊಂಡು ಜಾತಿ ಜಾತಿಗಳನ್ನು ಒಡೆಯುವ ಕಾರ್ಯ ಮಾಡಲಾಗುತ್ತಿದೆ. ನಾವೆಲ್ಲರೂ ಒಂದು, ನಾವೆಲ್ಲರೂ ಭಾರತೀಯರು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು, ಅಂದಾಗ ಮಾತ್ರ ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯ ಕ್ಷೇತ್ರ ಬೌದ್ಧಿಕ ಪ್ರಮುಖ ಶ್ರೀಧರ ಸ್ವಾಮಿ ಹೇಳಿದರು.

ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ನೇತೃತ್ವದಲ್ಲಿ ವಿಜಯದಶಮಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಪಥ ಸಂಚಲನದ ಪೂರ್ವದಲ್ಲಿ ನಡೆದ ಬಹಿರಂಗ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿವಿಧ ಆಕ್ರಮಣಗಳಿಗೆ ತುತ್ತಾಗಿ ಹಿಂದೂಗಳು ಸ್ವಾತಂತ್ರ್ಯ ಕಳೆದುಕೊಂಡರು. ಅದಕ್ಕಾಗಿ ಹೆಡಗೇವಾರರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದ್ದಾರೆ. ಆ ಸಂಘ ಇದೀಗ 99 ವರ್ಷಗಳನ್ನು ಪೂರೈಸಿ ನೂರರತ್ತ ದಾಪುಗಾಲು ಇಡುತ್ತಿರುವ ಪರ್ವ ಕಾಲವಾಗಿದೆ ಎಂದರು.

ನಮ್ಮ ಸಿದ್ಧಾಂತ ಎಷ್ಟೇ ಒಳ್ಳೆಯದಿದ್ದರೂ ನಾವು ದುರ್ಬಲವಾಗಿದ್ದರೆ ಯಾವುದೇ ಪ್ರಯೋಜನವಿಲ್ಲ. ಸಜ್ಜನರ ರಕ್ಷಣೆ ಮಾಡಲು, ದುಷ್ಟರ ಶಿಕ್ಷಿಸಲು ಶಸ್ತ್ರ ಬಳಕೆ ಮಾಡಬೇಕು ಎಂಬುದನ್ನು ಸನಾತನ ಧರ್ಮ ತಿಳಿಸುತ್ತದೆ. ದುಷ್ಟರ ದುಷ್ಟತನ ಶಿಕ್ಷಿಸಲು ದೇವರ ಕೈಗಳಲ್ಲಿ ಶಸ್ತ್ರಗಳಿವೆ. ಕಲಿಯುಗದಲ್ಲಿ ಸಂಘಟನೆಯೇ ಶಕ್ತಿ ಎಂಬುದನ್ನು ಅರಿತ ಹೆಡಗೇವಾರ ಅವರು ಸಂಘವನ್ನು ಸಂಘಟಿಸಿದ್ದಾರೆ ಎಂದರು.

ಶಕ್ತಿಯುತ ಸಮಾಜ ನಿರ್ಮಿಸಿ:

ನಮ್ಮ ಹಿಂದೂ ಸಮಾಜ ಇನ್ನಷ್ಟು ಶಕ್ತಿಶಾಲಿಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕೊರತೆಯಾದ ಮೇಲು-ಕೀಳಿನ ಭೇದ-ಭಾವ ಮರೆಯಬೇಕು. ಎಲ್ಲ ಸಮಾಜದ ಮುಖಂಡರು ನಾವೆಲ್ಲರೂ ಹಿಂದೂ ಸಮಾಜದ ಅಂಗ ಎಂದು ಅರಿತುಕೊಂಡು ಪರಿವರ್ತನೆ ಹೊಂದಬೇಕು. ಆ ಮೂಲಕ ಶಕ್ತಿಯುತ ಸಮಾಜ ನಿರ್ಮಾಣಕ್ಕೆ ಅಣಿಯಾಗಬೇಕು ಎಂದು ಕರೆ ನೀಡಿದರು.

ಧರ್ಮ ರಕ್ಷಿಸಿ:

ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾಂತ ಕಾಟವೆ ಮಾತನಾಡಿ, ಇತ್ತೀಚೆಗೆ ಸಮಾಜದಲ್ಲಿನ ಆಗು-ಹೋಗು ಗಮನಿಸಿದರೆ ಸಮಾಜಕ್ಕೆ ಪ್ರಸ್ತುತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಗತ್ಯತೆ ಹೆಚ್ಚಿರುವುದು ಕಂಡು ಬರುತ್ತದೆ. ಹಿಂದೂಗಳಲ್ಲಿ ಒಡಕು ಮೂಡಿಸುವ ಪ್ರಯತ್ನ ನಿರಂತವಾಗಿ ನಡೆಯುತ್ತಿವೆ. ಇದನ್ನು ಅರಿತು ನಾವೆಲ್ಲರೂ ಒಂದಾಗಿ ಮುನ್ನಡೆಯಬೇಕಿದೆ. ನಮ್ಮ ಭವಿಷ್ಯವಾಗಿರುವ ಮಕ್ಕಳಿಗೆ ಹಿಂದೂ ಧರ್ಮ, ಸಂಸ್ಕೃತಿ ತಿಳಿಸುವ ಕಾರ್ಯ ನಮ್ಮಿಂದಾಗಬೇಕಿದೆ. ನಮ್ಮ ಧರ್ಮವನ್ನು ನಾವು ರಕ್ಷಿಸಿ ಆಚರಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಜಗದೀಶ ಶೆಟ್ಟರ, ಶಾಸಕ ಮಹೇಶ ಟೆಂಗಿನಕಾಯಿ, ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ಡಾ. ವಿ.ಎಸ್‌.ವಿ. ಪ್ರಸಾದ, ಗೋವಿಂದ ಜೋಶಿ, ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಮಲ್ಲಿಕಾರ್ಜುನ ಸಾಹುಕಾರ, ರಾಜಣ್ಣ ಕೊರವಿ, ಲಿಂಗರಾಜ ಪಾಟೀಲ, ಶಂಕರಣ್ಣ ಮುನವಳ್ಳಿ, ತಿಪ್ಪಣ್ಣ ಮಜ್ಜಗಿ, ನಾಗೇಶ ಕಲಬುರ್ಗಿ ಸೇರಿದಂತೆ ಹಲವರಿದ್ದರು.

ಅದ್ಧೂರಿಯಾಗಿ ನಡೆದ ಪಥಸಂಚಲನ

ವಿಜಯದಶಮಿ ಅಂಗವಾಗಿ ಭಾನುವಾರ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ನ ಗಣವೇಷಧಾರಿಗಳಿಂದ ಅದ್ಧೂರಿಯಾಗಿ ಪಥ ಸಂಚಲನ ನಡೆಯಿತು. ಇಲ್ಲಿಯ ನೆಹರೂ ಮೈದಾನದಿಂದ ಆರಂಭಗೊಂಡ ಪಥಸಂಚಲನಕ್ಕೆ ನಗರದೆಲ್ಲೆಡೆ ಅದ್ಧೂರಿ ಸ್ವಾಗತ ದೊರೆಯಿತು.

ಗಣವೇಷಧಾರಿಗಳ ಪಥಸಂಚಲನ ಆರಂಭಗೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೇ, ರಸ್ತೆಯ ಇಕ್ಕೇಲಗಳಲ್ಲಿ ನಿಂತಿದ್ದ ಮಹಿಳೆಯರು ಪಥಸಂಚಲನದ ಮೇಲೆ ಪುಷ್ಪ ವೃಷ್ಟಿಗೈದರು. ಮಾರ್ಗದುದ್ದಕ್ಕೂ ಪಥಸಂಚಲನ ವೀಕ್ಷಣೆಗೆ ನಿಂತಿದ್ದ ಮಹಿಳೆಯರು, ಮಕ್ಕಳು ಪುಷ್ಪ ವೃಷ್ಟಿಗೈಯುವ ಜತೆಗೆ ಘೋಷಣೆ ಕೂಗಿ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಹುರದುಂಬಿಸಿದರು.

ನೆಹರು ಮೈದಾನದಿಂದ ಎರಡು ಮಾರ್ಗದಲ್ಲಿ ಸಾಗಿದ ಪಥಸಂಚಲನಲ್ಲಿ ಒಂದು ಕೃಷ್ಣಭವನ, ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ್‌ಪೇಟೆ, ತುಳಜಾಭವಾನಿ ವೃತ್ತ, ಪೆಂಡಾರಗಲ್ಲಿ, ಶಂಕರ ಮಠ, ಕಂಚಗಾರ ಗಲ್ಲಿ, ಹಿರೇಪೇಟೆ, ಸರಾಫ್‌ಗಟ್ಟಿ ವೃತ್ತ, ಜವಳಿ ಸಾಲ, ಬೆಳಗಾವಿ ಗಲ್ಲಿ ಮಾರ್ಗವಾಗಿ ದುರ್ಗದಬೈಲ್ ತಲುಪಿತು. ಇನ್ನೊಂದು ತಂಡ ಟೌನ್‌ಹಾಲ್, ಶಕ್ತಿ ರಸ್ತೆ, ಸ್ಟೇಷನ್ ರಸ್ತೆ, ಗಣೇಶಪೇಟೆ ವೃತ್ತ, ಸಿಬಿಟಿ, ಮಂಗಳವಾರ ಪೇಟೆ ಮಾರ್ಗವಾಗಿ ದುರ್ಗಬೈಲ್ ತಲುಪಿತು. ಇಲ್ಲಿಂದ ಎರಡು ತಂಡಗಳು ಸಂಗಮಗೊಂಡು ಬ್ರಾಡವೇ, ಶಿವಾಜಿ ವೃತ್ತ, ಕೊಪ್ಪಿಕರ ರಸ್ತೆ ಮಾರ್ಗವಾಗಿ ಮರಳಿ ನೆಹರು ಮೈದಾನಕ್ಕೆ ಆಗಮಿಸಿ ಸಂಪನ್ನಗೊಂಡಿತು.