ಹಾಳಾದ ಉದ್ಯಾನಕ್ಕೆ ಶೀಘ್ರ ಕಾಯಕಲ್ಪ

| Published : Dec 15 2023, 01:30 AM IST

ಸಾರಾಂಶ

ತಕ್ಷಣ ಗ್ರಾಮ ಅರಣ್ಯ ಸಮಿತಿ ಸದಸ್ಯರ ಸಭೆ ನಡೆಸಿ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಹಕಾರದಿಂದ ಉದ್ಯಾನ ಅಭಿವೃದ್ಧಿಗೆ ಕ್ರಮಕೈಗೊಳ್ಳುವ ಯೋಜನೆ ರೂಪಿಸಿ

ಮುಂಡಗೋಡ:

ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಹಾಳಾದ ತಾಲೂಕಿನ ಸನವಳ್ಳಿ ಜಲಾಶಯದ ಅಂಚಿನ ಉದ್ಯಾನವನ್ನು ಗ್ರಾಮ ಅರಣ್ಯ ಸಮಿತಿ ಮೂಲಕ ಶೀಘ್ರದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ ಹೇಳಿದರು.

ಗುರುವಾರ ಸನವಳ್ಳಿ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಹಿಂದೆ ಉದ್ಯಾನ ಹೇಗಿತ್ತು? ಏಕೆ ಬಂದ್ ಮಾಡಲಾಯಿತು ಹಾಗೂ ಉದ್ಯಾನವನ್ನು ಹೇಗೆ ಪುನಶ್ಚೇನಗೊಳಿಸಬಹುದು ಎಂಬುವುದರ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.ದೋಣಿ ವಿಹಾರ, ಉದ್ಯಾನ ಸೇರಿದಂತೆ ಪ್ರವಾಸಿ ತಾಣವಾಗಿದ್ದ ಉದ್ಯಾನ ನಿರ್ವಹಣೆ ಮಾಡದೆ ಬೀಗ ಹಾಕಿದ್ದರಿಂದ ಗಿಡ-ಗಂಟಿ ಬೆಳೆದು ನಿಂತು ಪ್ರವಾಸಿಗರಿಗೆ ತೀವ್ರ ನಿರಾಸೆ ಮೂಡಿಸಿದೆ. ಮತ್ತೆ ಉದ್ಯಾನಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿ ಪುನಾರಂಭಿಸುವುದುರಿಂದ ಪ್ರವಾಸಿಗರಿಗೆ ಅನುಕೂಲ ಮಾತ್ರವಲ್ಲದೇ ಇದರಿಂದ ಅರಣ್ಯ ಇಲಾಖೆಗೂ ಆದಾಯ ಬರುತ್ತದೆ ಎಂದು ಗ್ರಾಮಸ್ಥರಾದ ರಾಜು ಗುಬ್ಬಕ್ಕನವರ, ಗೌರೀಶ ಹಾಗೂ ಮಹೇಶ ಕೆರೆಹೊಲ್ದವರ ಮನವರಿಕೆ ಮಾಡಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ, ತಕ್ಷಣ ಗ್ರಾಮ ಅರಣ್ಯ ಸಮಿತಿ ಸದಸ್ಯರ ಸಭೆ ನಡೆಸಿ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಹಕಾರದಿಂದ ಉದ್ಯಾನ ಅಭಿವೃದ್ಧಿಗೆ ಕ್ರಮಕೈಗೊಳ್ಳುವ ಯೋಜನೆ ರೂಪಿಸುವಂತೆ ಮುಂಡಗೋಡ ವಲಯ ಅರಣ್ಯಾಧಿಕಾರಿ ವಾಗೀಶ ಬಾಚಿನಕೊಪ್ಪ ಅವರಿಗೆ ಸೂಚಿಸಿದರು.