ಉಮ್ರಾಣಿ ಏತ ನೀರಾವರಿ ಸಮಸ್ಯೆಗಳ ಚರ್ಚೆಗೆ ಶೀಘ್ರ ಸಭೆ

| Published : Jun 23 2024, 02:10 AM IST

ಉಮ್ರಾಣಿ ಏತ ನೀರಾವರಿ ಸಮಸ್ಯೆಗಳ ಚರ್ಚೆಗೆ ಶೀಘ್ರ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿಯೇ ಯಶಸ್ವಿ ನೀರಾವರಿ ಯೋಜನೆಯಾಗಿದ್ದ ಉಬ್ರಾಣಿ- ಅಮೃತಾಪುರ ಏತನೀರಾವರಿ ಯೋಜನೆ ಪ್ರಾರಂಭದ ದಿನಗಳಲ್ಲಿ ಎಲ್ಲ ಕೆರೆಗಳಿಗೂ ಸಮರ್ಪಕ ನೀರು ಹರಿಯುತ್ತಿತ್ತು. ಬರಬರುತ್ತಾ ಈ ಭಾಗದ ರೈತರ ಸ್ವಾರ್ಥದಿಂದ ಹದಗೆಡುತ್ತಿದೆ. ತಾಂತ್ರಿಕ ತೊಂದರೆ ಮತ್ತು ರೈತರೇ ಸೃಷ್ಠಿ ಮಾಡಿಕೊಂಡಿರುವ ತೊಂದರೆಗಳಿಂದ ಈ ಯೋಜನೆಯ ಕೆರೆಗಳಿಗೆ ನೀರು ತುಂಬುತ್ತಿಲ್ಲ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಚನ್ನಗಿರಿಯಲ್ಲಿ ನುಡಿದಿದ್ದಾರೆ.

- ಚನ್ನಗಿರಿ ಬಸವ ಬಳಗದಿಂದ ಬಸವಣ್ಣ ಜಯಂತ್ಯುತ್ಸವದಲ್ಲಿ ಸಿರಿಗೆರೆ ತರಳಬಾಳು ಜಗದ್ಗುರು ಹೇಳಿಕೆ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ರಾಜ್ಯದಲ್ಲಿಯೇ ಯಶಸ್ವಿ ನೀರಾವರಿ ಯೋಜನೆಯಾಗಿದ್ದ ಉಬ್ರಾಣಿ- ಅಮೃತಾಪುರ ಏತನೀರಾವರಿ ಯೋಜನೆ ಪ್ರಾರಂಭದ ದಿನಗಳಲ್ಲಿ ಎಲ್ಲ ಕೆರೆಗಳಿಗೂ ಸಮರ್ಪಕ ನೀರು ಹರಿಯುತ್ತಿತ್ತು. ಬರಬರುತ್ತಾ ಈ ಭಾಗದ ರೈತರ ಸ್ವಾರ್ಥದಿಂದ ಹದಗೆಡುತ್ತಿದೆ. ತಾಂತ್ರಿಕ ತೊಂದರೆ ಮತ್ತು ರೈತರೇ ಸೃಷ್ಠಿ ಮಾಡಿಕೊಂಡಿರುವ ತೊಂದರೆಗಳಿಂದ ಈ ಯೋಜನೆಯ ಕೆರೆಗಳಿಗೆ ನೀರು ತುಂಬುತ್ತಿಲ್ಲ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ಪಟ್ಟಣದ ಹೊರವಲಯದ ಶ್ರೀ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಬಸವ ಬಳಗ ವತಿಯಿಂದ ಹಮ್ಮಿಕೊಂಡಿದ್ದ 891ನೇ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ಮುಂದಿನ ಕೆಲ ದಿನಗಳಲ್ಲಿ ಉಬ್ರಾಣಿ ಏತ ನೀರಾವರಿ ಯೋಜನೆಯ ಎಲ್ಲಾ ಕೆರೆಗಳ ಅಚ್ಚುಕಟ್ಟು ಪ್ರದೇಶ ಗ್ರಾಮಗಳ ರೈತರ ಸಭೆ ಕರೆದು, ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದರು.

ಸಹಕಾರ-ಸಹಬಾಳ್ವೆ ಇರಲಿ:

ಉಬ್ರಾಣಿ- ಅಮೃತಾಪುರ ಏತನೀರಾವರಿ ಯೋಜನೆ ಜಾರಿಗೊಂಡ ನಂತರ ಈ ಭಾಗದ ರೈತರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಈ ಯೋಜನೆ ಪ್ರಾರಂಭದಲ್ಲಿಯೇ ರೈತರಿಗೆ ತಿಳಿಸಿದಂತೆ ಕೆರೆಯ ಅರ್ಧ ಭಾಗವನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಕೆಲ ಗ್ರಾಮಗಳಲ್ಲಿ ನಮ್ಮೂರ ಕೆರೆ ತುಂಬ ಬೇಕು ಎಂಬ ಸ್ವಾರ್ಥದಿಂದ ಕೆರೆ ತುಂಬುವವರೆಗೂ ಮುಂದಿನ ಕೆರೆಗಳಿಗೆ ನೀರು ಬಿಡುತ್ತಿಲ್ಲ. ಇದು ಆಗಬಾರದು. ಪರಸ್ಪರ ಸಹಕಾರ ಸಹಬಾಳ್ವೆಯಿಂದ ರೈತರು ಜೀವನ ನಡೆಸಬೇಕು ಎಂದರು.

22 ಸಾವಿರ ವಚನಗಳ ವೆಬ್‌ಸೈಟ್‌:

ಜೀವನದ ಪ್ರತಿಯೊಂದು ಸಮಸ್ಯೆಗಳು, ಸವಾಲುಗಳಿಗೆ ಬಸವಣ್ಣನವರ ವಚನಗಳಲ್ಲಿ ಉತ್ತರ ಅಡಗಿದೆ. ನಮ್ಮ ಮಠದ ಸಂಕಲ್ಪದಂತೆ ಪ್ರತಿಯೊಬ್ಬರಿಗೂ ವಚನಗಳ ಸಾರ ತಿಳಿಸುವ ಉದ್ದೇಶದಿಂದ "ವಚನ ತರಳಬಾಳು " ಎಂಬ ವೆಬ್ ಸೈಟ್‌ನಲ್ಲಿ 12ನೇ ಶತಮಾನದ ಎಲ್ಲ ಶಿವಶರಣರ ಸುಮಾರು 22 ಸಾವಿರಕ್ಕೂ ಹೆಚ್ಚಿನ ವಚನಗಳು ಸಿಗುವಂತೆ ಮಾಡಲಾಗಿದೆ ಎಂದರು.

ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಎಲ್ಲ ಸರ್ಕಾರಗಳು ಸಮಸಮಾಜದ ಹರಿಕಾರ ಬಸವಣ್ಣ ಅವರನ್ನು ಗುರುತಿಸಿರಲಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ, ಪ್ರತಿ ಸರ್ಕಾರಿ ಕಚೇರಿಗಳಲ್ಲಿಯೋ ಬಸವಣ್ಣನವರ ಭಾವಚಿತ್ರ ಹಾಕಬೇಕು ಎಂಬ ಆದೇಶ ಮಾಡಿರುವುದು ಶ್ಲಾಘನೀಯ ಎಂದರು.

ನಾನು ರಾಜಕಾರಣಕ್ಕೆ ಅನಿರೀಕ್ಷಿತವಾಗಿ ಬಂದವನಾಗಿದ್ದು, ಸಾಮಾನ್ಯ ಕುಟುಂಬದಿಂದ ಬಂದವನನ್ನು ಗುರುತಿಸಿ ಇಂದು ಶಾಸಕನನ್ನಾಗಿ ಮಾಡಿದ್ದೀರಿ. ಇದರಲ್ಲಿ ತರಳಬಾಳು ಗುರುಗಳ ಆಶೀರ್ವಾದವಿದ್ದು, ಸಿರಿಗೆರೆಯ ತರಳಬಾಳು ಬೃಹ್ಮಮಠಕ್ಕೆ ಸದಾ ಚಿರಋಣಿ. ಶ್ರೀಗಳ ನೇತೃತ್ವದಲ್ಲಿ ಉಬ್ರಾಣಿ ಏತ ನೀರಾವರಿ ಯೋಜನೆ ಯಶಸ್ವಿಯಾಗಿದೆ. ಸಾಸಿವೆಹಳ್ಳಿ ಏತನೀರಾವರಿ ಯೋಜನೆಗೆ ಇದ್ದ ಎಲ್ಲ ಅಡೆ-ತಡೆಗಳನ್ನು ಬಗೆಹರಿಸಿದ್ದು, ಈ ಮಳೆಗಾಲ ಮುಗಿಯುವ ಒಳಗಾಗಿ ಸಾಸಿವೆಹಳ್ಳಿ ಏತನೀರಾವರಿ ಯೋಜನೆ ಎಲ್ಲ ಕೆರೆಗಳಿಗೆ ನೀರು ಹರಿಸುತ್ತೇನೆ ಎಂದರು.

ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಏನು ಮಾಡಬೇಡಿರಿ ಎಂದು ಸಮಾಜಕ್ಕೆ ಹೇಳಿದ್ದರೂ, ಅವರ ಅನುಯಾಯಿಗಳಾದ ನಾವು ಅವುಗಳನ್ನೇ ಮಾಡಿಕೊಂಡು ಹೊರಟಿರುವುದು ಬಸವಣ್ಣ ಅವರಿಗೆ ಮಾಡುತ್ತಿರುವ ಅಪಮಾನವಾಗಿದೆ. ದುಡ್ಡು-ಅಧಿಕಾರಕ್ಕೆ ಆಸೆಪಡದೇ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾಗಿದೆ ಎಂದರು.

"ಇಂದಿಗೆ ಸಲ್ಲುವ ಬಸವಣ್ಣ " ಎಂಬ ವಿಷಯದ ಬಗ್ಗೆ ನಿವೃತ್ತ ಪ್ರಾಂಶುಪಾಲ ರಾ. ವೆಂಕಟೇಶ ಶೆಟ್ಟಿ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಬಳಗದ ಉಪಾಧ್ಯಕ್ಷ ಎಚ್.ಎಸ್.ಮಲ್ಲಿಕಾರ್ಜುನಪ್ಪ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಸದಸ್ಯ ವಡ್ನಾಳ್ ಜಗದೀಶ್, ತುಮ್ ಕೋಸ್ ಅಧ್ಯಕ್ಷ ಆರ್.ಎಂ. ರವಿ, ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ನಿವೃತ್ತ ಶಿಕ್ಷಕ ಮಲ್ಲೇಶಪ್ಪ, ಚಂದ್ರಪ್ಪ ಮೊದಲಾದವರು ಹಾಜರಿದ್ದರು.

- - -

ಕೋಟ್‌ ಬಸವಣ್ಣ ಅವರು ಸಮಸಮಾಜದ ಕನಸನ್ನು ಕಂಡ ಮಹಾನ್ ಪುರುಷರಾಗಿದ್ದಾರೆ. ಅವರ ಮಾರ್ಗದರ್ಶನದಂತೆ ನಮ್ಮ ಕಾಂಗ್ರೆಸ್‌ ಸರ್ಕಾರ ಸಮಾಜದ ಎಲ್ಲ ವರ್ಗದ ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಶಕ್ತಿ ತುಂಬುತ್ತಿದೆ

- ಬಸವರಾಜ ವಿ. ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ

- - - -22ಕೆಸಿಎನ್‌ಜಿ1:

ಸಮಾರಂಭದ ಉದ್ಘಾಟನೆಯನ್ನು ಸಿರಿಗೆರೆ ತರಳಬಾಳು ಬೃಹನ್ಮಠ ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು.