ಒಮ್ಮೆ ಬಿಡುವಿಲ್ಲದೆ ಲಾರಿಗಳಿಂದ ತುಂಬಿರುತ್ತಿದ್ದ ಬೇಲೂರು ಕೈಗಾರಿಕಾ ಪ್ರದೇಶದ ಟ್ರಕ್ ಟರ್ಮಿನಲ್ ಇಂದು ಸ್ತಬ್ಧವಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ, ವಿದ್ಯುತ್ ಸಂಪರ್ಕದ ಅಭಾವ ಇದಕ್ಕೆ ಕಾರಣ. ₹ 9 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಟರ್ಮಿನಲ್‌ ಈಗ ಸಮಸ್ಯೆಗಳ ಆಗರವಾಗಿದೆ.

ಬಸವರಾಜ ಹಿರೇಮಠ

ಧಾರವಾಡ: ಟಾಟಾ ಮಾರ್ಕೋಪೋಲೋದಂತಹ ಪ್ರಮುಖ ಕೈಗಾರಿಕಾ ಕಂಪನಿ ಹೊಂದಿರುವ, ನಿತ್ಯ ನೂರಾರು ಲಾರಿಗಳ ಸಂಚರಿಸುವ ಇಲ್ಲಿಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿದ್ದ ಟ್ರಕ್‌ ಟರ್ಮಿನಲ್ ಸದ್ಯ ಸ್ತಬ್ಧವಾಗಿದೆ.

ವರ್ಷದಿಂದ ವರ್ಷಕ್ಕೆ ಬೇಲೂರಿನಲ್ಲಿ ಹೊಸ ಹೊಸ ಕೈಗಾರಿಕೆಗಳು ಬರುತ್ತಿದ್ದು ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳು ಹೆಚ್ಚಾಗಬೇಕು. ಆದರೆ, ಇದು ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಈ ಪೈಕಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಟ್ರಕ್‌ ಟರ್ಮಿನಲ್‌ ಪ್ರಮುಖ ಉದಾಹರಣೆ.

ಸೌಲಭ್ಯ, ಸುರಕ್ಷತೆ ಇಲ್ಲ:

ದೇಶದ ವಿವಿಧ ಮೂಲೆಗಳಿಂದ ಆಗಮಿಸುವ ಸರಕು ಸಾಗಣೆ ಲಾರಿಗಳ ನಿಲುಗಡೆ ಹಾಗೂ ಚಾಲಕ-ಕ್ಲೀನರ್​ಗಳ ವಿಶ್ರಾಂತಿಗೆ ಬೇಲೂರ ಕೈಗಾರಿಕೆ ಪ್ರದೇಶದಲ್ಲಿ ಡಿ. ದೇವರಾಜ ಅರಸ್ ಹೆಸರಿನ ಟ್ರಕ್​ ಟರ್ಮಿನಲ್‌​ ನಿಮಿರ್ಸಲಾಗಿದೆ. ಈ ಟರ್ಮಿನಲ್‌​ ಲಾರಿಗಳ ನಿಲ್ದಾಣದ ಬದಲಿಗೆ ಸಮಸ್ಯೆಗಳ ನಿಲ್ದಾಣವಾಗಿ ಪರಿಣಮಿಸಿದೆ. ದಶಕದ ಹಿಂದೆ ಇಲ್ಲಿ ಟರ್ಮಿನಲ್‌​ ನಿರ್ಮಿಸಲಾಗಿದೆ. ಆರಂಭದಲ್ಲಿ ಎಲ್ಲವೂ ಉತ್ತಮವಾಗಿತ್ತು. ನಂತರ ಎದುರಾದ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ. ಇಲ್ಲಿ ಲಾರಿ ಚಾಲಕರು ಮತ್ತು ಕ್ಲೀನರ್​ಗಳಿಗೆ ಸೌಲಭ್ಯ ಹಾಗೂ ಸುರಕ್ಷತೆ ಇಲ್ಲ. ಮುಖ್ಯವಾಗಿ ಈ ಟರ್ಮಿನಲ್‌​ಗೆ ವಿದ್ಯುತ್​ ಸಂಪರ್ಕವೇ ಇಲ್ಲ. ಎಲ್ಲ ಸಮಸ್ಯೆಗಳಿಗೂ ಇದೇ ಮೂಲ. ಬೋರ್‌ವೆಲ್‌ ವ್ಯವಸ್ಥೆ ಇದ್ದರೂ ವಿದ್ಯುತ್​ ಇಲ್ಲದ ಕಾರಣ ಕುಡಿಯಲು ಹಾಗೂ ಬಳಕೆಗೆ ನೀರಿಲ್ಲದಂತಾಗಿದೆ. ಹೀಗಾಗಿ ವಿಶ್ರಾಂತಿ ಗೃಹಗಳು ಉಪಯೋಗಕ್ಕೆ ಬಾರದಂತಾಗಿವೆ ಎಂದು ಲಾರಿ ಚಾಲಕರು ಅಲ್ಲಿಯ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

ಏಳು ಎಕರೆ, ₹ 9 ಕೋಟಿ ವೆಚ್ಚ:

ಸುಮಾರು ಏಳು ಎಕರೆ ಜಾಗದಲ್ಲಿ ಅಂದಾಜು ₹ 9 ಕೋಟಿ ವೆಚ್ಚದಲ್ಲಿ ಈ ಟರ್ಮಿನಲ್‌​ ಸ್ಥಾಪಿಸಲಾಗಿದೆ. 150ಕ್ಕೂ ಹೆಚ್ಚು ಲಾರಿ ನಿಲ್ಲಿಸಬಹುದು. ವಿಶ್ರಾಂತಿ ಗೃಹ, ಸರಕು ಸಾಗಣೆ ಏಜೆನ್ಸಿ ಅವರಿಗೆ 14 ಕಚೇರಿಗಳಿವೆ. ಮೇಲ್ಮಹಡಿಯಲ್ಲಿ ವಿಶಾಲ ಸಭಾಭವನ, ಕೆಳಮಹಡಿ ಹಾಗೂ ಮೇಲ್ಮಹಡಿ ಸೇರಿ ಒಟ್ಟು 12 ಸ್ನಾನಗೃಹ, ಶೌಚಗೃಹಗಳಿವೆ. ಆದರೆ ನೀರಿಲ್ಲದ ಕಾರಣ ಇವುಗಳು ಉಪಯೋಗಕ್ಕೆ ಬಾರದಂತಾಗಿವೆ. ಹಲವು ವರ್ಷಗಳಿಂದ ವಿಶ್ರಾಂತಿ ಗೃಹ ಬಳಕೆಯಾಗದೆ ಭೂತ ಬಂಗಲೆ ಆಗುತ್ತಿದೆ. ಕೊಠಡಿಗಳಿಗೆ ಹಾಕಿರುವ ಬೀಗ ತುಕ್ಕು ಹಿಡಿಯುತ್ತಿದೆ.

ಟರ್ಮಿನಲ್‌​ ಬಳಿ ಇರುವ ಕ್ಯಾಂಟೀನ್​ ಸಹ ಸಂಜೆ ಹೊತ್ತಿಗೆ ಬಾಗಿಲು ಮುಚ್ಚಲಿದೆ. ಇದರಿಂದ ಚಾಲಕರು, ಕ್ಲೀನರ್​ಗಳು ಊಟ, ಉಪಾಹಾರಕ್ಕೆ ದೂರದ ಮುಖ್ಯ ರಸ್ತೆಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ವಿದ್ಯುತ್​ ಸಂಪರ್ಕವಿತ್ತು. ಆದರೆ ಬಿಲ್​ ಮಾಸಿಕವಾಗಿ ₹ 60 ಸಾವಿರ ಮೀರಿ ಬಂದ ಕಾರಣ ಬಿಲ್​ ಸರಿಪಡಿಸಿಕೊಡಿಸಲು ಹೆಸ್ಕಾಂಗೆ ಪತ್ರ ಬರೆಯಲಾಗಿತ್ತು. ಆಗ ಕಡಿತಗೊಂಡ ವಿದ್ಯುತ್​ ಸಂಪರ್ಕ ಇನ್ನೂ ಬಂದಿಲ್ಲ. ಸೌಲಭ್ಯಗಳು ಇಲ್ಲವೆಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಲಾರಿಗಳು ಬರುತ್ತಿಲ್ಲ. ಹೀಗಾಗಿ ಆದಾಯ ಕೊರತೆಯಾಗಿ ಎಲ್ಲವೂ ಹೊರೆಯಾಗಿದೆ ಎಂದು ಗುತ್ತಿಗೆದಾರರು ಗೋಳು ತೋಡಿಕೊಳ್ಳುತ್ತಿದ್ದಾರೆ.

ಟೆಂಡರ್​ ಪಡೆಯದ ಗುತ್ತಿಗೆದಾರರು:

ಈ ಹಿಂದೆ ಸವಣೂರ ಎಂಬುವವರು ಇದರ ಗುತ್ತಿಗೆ ಪಡೆದಿದ್ದರು. ಆದರೆ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗದ ಕಾರಣ ಅವರು ಗುತ್ತಿಗೆ ಮುಂದುವರಿಸಿರಲಿಲ್ಲ. ಇದೀಗ ಟೆಂಡರ್​ ಪಡೆಯಲು ಯಾವ ಗುತ್ತಿಗೆದಾರರೂ ಮುಂದೆ ಬರುತ್ತಿಲ್ಲ. ಹೀಗಾಗಿ ಕೂಡಲೇ ಸಮಸ್ಯೆಗಳನ್ನು ಪರಿಹರಿಸಿ ಮರು ಟೆಂಡರ್​ ಕರೆಯಬೇಕಲ್ಲದೆ, ಗುತ್ತಿಗೆದಾರರಿಗೆ ಅನುಕೂಲವಾಗುವಂತಹ ದರ ಸಹ ನಿಗದಿ ಮಾಡಬೇಕಿದೆ ಎಂದು ಕೈಗಾರಿಕೋದ್ಯಮಿ ರಾಜು ಪಾಟೀಲ ಆಗ್ರಹಿಸುತ್ತಾರೆ.