ಒಂದಾಗಿರುವ ಜಾತಿ ಒಡೆಯುವ ಹುನ್ನಾರ

| Published : Jan 16 2025, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನ್ಯಾ.ನಾಗಮೋಹನದಾಸ ಅವರ ಕಮಿಟಿ ಮಾಡಿ, ಒಳ ಮೀಸಲಾತಿ ಕಲ್ಪಿಸಲು ಹೊರಟಿರುವ ರಾಜ್ಯ ಸರ್ಕಾರ ದಲಿತರ, ಪರಿಶಿಷ್ಟರು ಒಂದಾಗಿರುವ ಜಾತಿಗಳನ್ನು ಒಡೆಯುವ ಹುನ್ನಾರ ಮಾಡುತ್ತಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದು ಬಂಜಾರಾ ಸಮಾಜದ ಮುಖಂಡ ಡಾ.ಬಾಬುರಾಜೇಂದ್ರ ನಾಯಿಕ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನ್ಯಾ.ನಾಗಮೋಹನದಾಸ ಅವರ ಕಮಿಟಿ ಮಾಡಿ, ಒಳ ಮೀಸಲಾತಿ ಕಲ್ಪಿಸಲು ಹೊರಟಿರುವ ರಾಜ್ಯ ಸರ್ಕಾರ ದಲಿತರ, ಪರಿಶಿಷ್ಟರು ಒಂದಾಗಿರುವ ಜಾತಿಗಳನ್ನು ಒಡೆಯುವ ಹುನ್ನಾರ ಮಾಡುತ್ತಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದು ಬಂಜಾರಾ ಸಮಾಜದ ಮುಖಂಡ ಡಾ.ಬಾಬುರಾಜೇಂದ್ರ ನಾಯಿಕ ಎಚ್ಚರಿಸಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯದ ಸಾಂವಿಧಾನಿಕ ಪೀಠ ಒಳ ಮೀಸಲಾತಿ ನೀಡಬಹುದು ಎಂದು ತೀರ್ಪು ನೀಡಿದೆ. ಹಾಗಾಗಿ ರಾಜ್ಯ ಸರ್ಕಾರ ನ್ಯಾ.ಎಚ್.ಎನ್.ನಾಗಮೋಹನದಾಸ ಅವರ ಏಕಸದಸ್ಯ ಪೀಠದ ಆಯೋಗ ರಚಿಸಿದ್ದು, ಒಳ ಮೀಸಲಾತಿಗಾಗಿ ಯಾವುದಾದರೂ ಆಕ್ಷೇಪಣೆಗಳು ಇದ್ದಲ್ಲಿ ಆಯೋಗದ ಮುಂದೆ ಸಲ್ಲಿಸಲು ಪ್ರಕಟಣೆ ಹೊರಡಿಸಿತ್ತು. ಆದರೆ, ಈ ಆಯೋಗ ಜಾತಿ ಹಾಗೂ ಜನಸಂಖ್ಯೆ ಸೇರಿದಂತೆ ವಾಸ್ತವಿಕ ದತ್ತಾಂಶ ಎಲ್ಲಿಂದ ಪಡೆಯುತ್ತದೆ?. ಜನಗಣತಿ, ಜಾತಿಗಣತಿ ಮಾಹಿತಿ ಕೊಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅವಕಾಶ ಇದೆ. ಆದರೆ 2010ರಲ್ಲಿ ಆದ ಜನಗಣತಿಯನ್ನು ಪರಿಗಣಿಸಿದರೆ ಅದು ಇಗಾಗಲೇ ಎಕ್ಸಪೈರಿ ಆಗಿ 14 ವರ್ಷಗಳೇ ಕಳೆದಿವೆ. ಅದನ್ನು ಪಡೆಯುವ ಬದಲು ಮುಂದಿನ ಜನಗಣತಿ ಬಿಡಗಡೆ ಆಗುವವರೆಗೆ ಕಾಯಬೇಕಿತ್ತು. ಒಂದು ವೇಳೆ ಅದನ್ನೇ ಪರಿಗಣಿಸುವುದಾದರೇ ಹಿಂದುಳಿದ ಆಯೋಗದ ನ್ಯಾ.ಕಾಂತರಾಜು ವರದಿ ಒಪ್ಪಿಕೊಂಡಿಲ್ಲ ಯಾಕೆ? ಇತ್ಯಾದಿ ಪ್ರಶ್ನೆಗಳು ಉದ್ಭವಿಸಲಿವೆ ಎಂದರು. ರಾಜ್ಯ ಸರ್ಕಾರವೇ ಪ್ರಕಟಣೆ ನೀಡಿದ್ದರಿಂದ ಎಲ್ಲರೂ ಜನೇವರಿ 31ರ ಒಳಗಾಗಿ ತಮ್ಮ ಆಕ್ಷೇಪಣೆಗಳನ್ನು ವೈಯಕ್ತಿಕವಾಗಿ ಅಥವಾ ತಮ್ಮ ಸಂಘಸಂಸ್ಥೆಗಳ ಮೂಲಕ ಸಲ್ಲಿಸಬೇಕು. ಪರಿಶಿಷ್ಠರು ಹಾಗೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಅಹವಾಲು ಸಲ್ಲಿಸಿ ಒಳಮೀಸಲಾತಿ ಮಾಡಿ ಜಾತಿಗಳನ್ನು ಒಡೆಯದಂತೆ ತಡೆಯಬೇಕಿದೆ. ಇದು ಅಖಂಡ ಪರಿಶಿಷ್ಟ ಜಾತಿಗಳ ಅಳಿವು ಉಳಿವಿನ ಪ್ರಶ್ನೆ. ಮೀಸಲಾತಿ ಕಸಿದುಕೊಳ್ಳುವ ಹುನ್ನಾರ ಆಗಿರಬಹುದು. ಯಾವುದೇ ಸರ್ಕಾರ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ಸಮಸ್ಯೆ ಆಗಲಿದೆ. ಕಾಂತರಾಜು ವರದಿ ಒಪ್ಪಿಕೊಳ್ಳದೆ ಇದನ್ನು ಮಾಡಿದರೆ ಅನಾಹುತಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.ಹಿಂದಳಿದವರು ದಲಿತರು, ಅಲ್ಪಸಂಖ್ಯಾತರು ಹೋರಾಟಕ್ಕಿಳಿದರೂ ಆಶ್ಚರ್ಯವಿಲ್ಲ. ಯಾವುದೇ ಕಾಣದ ಕೈಗಳ ಒತ್ತಾಯಕ್ಕೆ ರಾಜ್ಯ ಸರ್ಕಾರ ಮಣಿಯಬಾರದು. ಹಿಂದುಳಿದವರ, ದಲಿತರನ್ನು ತೊಟ್ಟಿಲಿಗೆ ಹಾಕಿ ಚಿವುಟುವುದು ನೀವೇ, ತೊಟ್ಟಿಲು ತೂಗುವುದು ನೀವೆ. ಈ ಕೆಲಸ ಮಾಡುವ ಬದಲು, ಹಿಂದುಳಿದ ಸಮಾಜಕ್ಕೆ ವಿಶೇಷ ಸವಲತ್ತು ಕೊಟ್ಟು ಮುಂದೆ ತರುವ ಕೆಲಸ ಮಾಡುವಂತೆ ಒತ್ತಾಯಿಸಿದರು.ಮುಖಂಡ ಡಾ.ಬಸವರಾಜ ಚವ್ಹಾಣ ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಮಾಡುವ ಒಳ ಮೀಸಲಾತಿಗೆ ನಮ್ಮ ವಿರೋಧವಿದೆ. ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿ, ಹಿಂದುಳಿದ, ದಲಿತರ, ಪರಿಶಿಷ್ಟ ವರ್ಗಗಳಿಗೆ ಹೊಸ ಹೊಸ ನಿಗಮಗಳನ್ನು ಮಾಡುವ ಮೂಲಕ ಅವರ ಬೆಳವಣಿಗೆಗೆ ವ್ಯವಸ್ಥೆ ಮಾಡಿ. ನ್ಯಾ.ನಾಗಮೋಹನದಾಸ ಅವರು ಪ್ರತಿ ತಾಂಡಾಗಳಿಗೆ ಭೇಟಿ ಕೊಟ್ಟು, ವಾಸ್ತವ ದತ್ತಾಂಶ ಪರಿಗಣಿಸಬೇಕು. ಇಲ್ಲವಾದಲ್ಲಿ ನಾವು ಸಹ ವಕೀಲರನ್ನು ನೇಮಕ‌ ಮಾಡಿ, ಕೆವಿಯಟ್ ಹಾಕಿ ಕಾನೂನು ಹೋರಾಟಕ್ಕೆ ಇಳಿಯುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ರವಿಕುಮಾರ ರಾಠೋಡ, ಮೋಹನ ಚವ್ಹಾಣ, ಪರಶುರಾಮ, ಡಾ.ಅರವಿಂದ ಲಮಾಣಿ, ಸುರೇಶ ಬಿಜಾಪುರ ಉಪಸ್ಥಿತರಿದ್ದರು.

ಚಿತ್ರ: 15BIJ05

ಬರಹ: ಒಳ ಮೀಸಲಾತಿ ವಿರೋಧಿಸಿ ಡಾ.ಬಾಬುರಾಜೇಂದ್ರ ನಾಯಿಕ ಸುದ್ದಿಗೋಷ್ಠಿ.

ಬಾಕ್ಸ್‌

ಸುಪ್ರೀಂ ಕೋರ್ಟ್‌ನ ದ್ವಂದ್ವ ಆದೇಶ

ಈ ವಿಚಾರವಾಗಿ ಹಿಂದೆ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನೀಡಿದ್ದ ತೀರ್ಪು ಆಯಾ ರಾಜ್ಯ ಸರ್ಕಾರಗಳ ಇಚ್ಛೆಯ ಮೇರೆಗೆ ಆಗಬೇಕು ಎಂದಿತ್ತು. ಈ ಪೂರ್ವದಲ್ಲಿ ತಮಿಳುನಾಡು, ಪಂಜಾಬ ಸರ್ಕಾರದ ತೀರ್ಪು ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ಕೇಳಿದಾಗ ಮೀಸಲಾತಿ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯ ಹಸ್ತಕ್ಷೇಪ ಮಾಡೋದಿಲ್ಲ ಎಂದು ಹೇಳಿತ್ತು. ಪರಿಶಿಷ್ಟ ಜಾತಿಯನ್ನು ಒಡೆದು ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದರಿಂದ ಸಮಸ್ತ ದಲಿತ ಜನಾಂಗಗಳು ಏಕತೆಯನ್ನು ಸಾಧಿಸಲು ಅನುಕೂಲವಾಗಿತ್ತು. ಆದರೆ ಈಗ ಒಳ ಮೀಸಲಾತಿ ನೀಡಬಹುದು ಎಂದು ತೀರ್ಪು ನೀಡಿದ ಇದೇ ಸರ್ವೋಚ್ಛ ನ್ಯಾಯಾಲಯದ ದ್ವಂದ್ವನೀತಿ ಬಿಸಿ ತುಪ್ಪವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.