ಪಟ್ಟಣದ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಹಾಗೂ ೩೦೦ ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕಕ್ಕೆಹೊಳೆ ಬಳಿಯ ಶ್ರೀ ಮುತ್ತಪ್ಪಸ್ವಾಮಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಶೈವ ಹಾಗೂ ವೈಷ್ಣವರ ಅಪರೂಪದ ಸಂಗಮ ತಾಣವಾಗಿದೆ.
ಮುರಳೀಧರ್ ಶಾಂತಳ್ಳಿ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆಪಟ್ಟಣದ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಹಾಗೂ ೩೦೦ ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಕಕ್ಕೆಹೊಳೆ ಬಳಿಯ ಶ್ರೀ ಮುತ್ತಪ್ಪಸ್ವಾಮಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಶೈವ ಹಾಗೂಗು ವೈಷ್ಣವರ ಅಪರೂಪದ ಸಂಗಮ ತಾಣವಾಗಿದೆ.
ಕಕ್ಕೆಹೊಳೆ ಸಮೀಪವಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಮುತ್ತಪ್ಪಸ್ವಾಮಿ, ತಿರುವಪ್ಪಸ್ವಾಮಿ, ವಿಷ್ಣುಮೂರ್ತಿ, ಭಗವತಿ, ರಕ್ತಚಾಮುಂಡಿ, ಕಂಡಕರ್ಣನ್, ಕರಿಂಗುಟ್ಟಿ ಶಾಸ್ತಾವು, ಶ್ರೀ ಪೊಟ್ಟನ್ ದೈವ ಹಾಗೂ ಗುಳಿಗನ್ ದೈವಗಳಿಗೆ ಪ್ರತಿ ನಿತ್ಯ ಪೂಜೆ ಪಡೆಯುತ್ತಿದೆ. ಶೈವರು ಪೂಜಿಸುವ ಶಿವ ಇಲ್ಲಿ ಮುತ್ತಪ್ಪೇಶ್ವರನಾಗಿ ಹಾಗು ವೈಷ್ಣವರು ಪೂಜಿಸುವ ವಿಷ್ಣು ಇಲ್ಲಿ ವಿಷ್ಣುಮೂರ್ತಿಯಾಗಿ ನೆಲೆಸಿದ್ದಾರೆ. ಅಲ್ಲದೆ ಹರಿಹರ ಸುತನಾದ ಶ್ರೀ ಅಯ್ಯಪ್ಪಸ್ವಾಮಿಗೂ ನಿತ್ಯ ಪೂಜೆ ಸಲ್ಲಿಸುತ್ತಿರುವುದರಿಂದ ದೇವಾಲಯ ಶೈವ ಹಾಗೂ ವೈಷ್ಣವರ ಸಂಗಮ ತಾಣವಾಗಿದೆ.ಇಲ್ಲಿ ನಡೆಯುವ ದೈವಗಳ ವೇಷ-ಭೂಷಣ, ನರ್ತನಗಳನ್ನು ಕೇರಳದ ದೈವ ನರ್ತಕರು ಬಂದು ನಡೆಸಿಕೊಡುವುದು ವಾಡಿಕೆ. ಈ ಒಂದೇ ದೇವಾಲಯದ ಆವರಣದಲ್ಲಿ ಒಟ್ಟು ೧೩ ದೈವಗಳು ಪ್ರತ್ಯೇಕ-ಪ್ರತ್ಯೇಕ ಗುಡಿಗಳಲ್ಲಿ ನೆಲೆಸಿರುವುದು ವಿಶೇಷ. ಈ ದೇವಸ್ಥಾನದ ಅತಿ ಎತ್ತರದ ಉನ್ನತ ಸ್ಥಾನದಲ್ಲಿ ಪೂಜಿಸಲ್ಪಡುತ್ತಿರುವ ಶ್ರೀ ಭುವನೇಶ್ವರಿ ದೇವಿಯು ಪ್ರಧಾನ ದೇವತೆಯಾಗಿ, ಶ್ರೀ ಅಯ್ಯಪ್ಪಸ್ವಾಮಿ, ಕನ್ನಿಮೂಲ ಗಣಪತಿ ಹಾಗೂ ನಾಗ ದೇವರನ್ನು ಪೂಜಿಸಲಾಗುತ್ತಿದೆ. ವಾರ್ಷಿಕೋತ್ಸವ ಸಂದರ್ಭ ಇಲ್ಲಿನ ಒಂಬತ್ತೂ ದೈವಗಳೂ ವೇಷ-ಭೂಷಣ ತೊಟ್ಟು ವೆಳ್ಳಾಟಂ ಮತ್ತು ಕೋಲಗಳು ನಡೆದ ನಂತರದಲ್ಲಿ ತನ್ನ ಬಳಿ ಬರುವ ಭಕ್ತರ ಸಂಕಷ್ಟಗಳನ್ನು ಬಗೆಹರಿಸುವ, ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆಗಳನ್ನು ನೀಡುತ್ತವೆ. ಇಲ್ಲಿ ಬರುವ ಭಕ್ತರು ಭಯ-ಭಕ್ತಿಯಿಂದ ಈ ದೈವಗಳನ್ನು ನಿತ್ಯ ಸ್ಮರಿಸಿಕೊಂಡು ತಮ್ಮ ಬೇಡಿಕೆಯಿಟ್ಟು ಪ್ರಾರ್ಥಿಸಿದರೆ ಅದು ಈಡೇರುತ್ತದೆ ಎಂಬ ಪ್ರತೀತಿಯೂ ಇದೆ. ಕಂಕಣಭಾಗ್ಯ, ಸಂತಾನ ಭಾಗ್ಯಕ್ಕಾಗಿ ಭಕ್ತಾಧಿಗಳು ದೈವಗಳಲ್ಲಿ ಬೇಡಿಕೆ ಸಲ್ಲಿಸುತ್ತಾರೆ. ಬೇಡಿಕೆಗಳು ಈಡೇರಿದಂತೆ ದೈವಗಳಿಗೆ ಹರಕೆ ಸಲ್ಲಿಸುವುದು ಜಾತ್ರೋತ್ಸವದಲ್ಲಿ ನಡೆಯುತ್ತದೆ. ಕ್ಷೇತ್ರದಲ್ಲಿ ಶತ್ರು ಸಂಹಾರ ಪೂಜೆ, ರಕ್ತ ಪುಷ್ಪಾಂಜಲಿ, ಸ್ವಯಂವರ ಅರ್ಚನೆಯನ್ನು ಮದುವೆಗೋಸ್ಕರ ಮಾಡಲಾಗುತ್ತದೆ. ಪ್ರಾರ್ಥನೆ ನಂತರ ಮದುವೆ ನೆರವೇರಿದ ಹಲವಾರು ಉದಾಹರಣೆ ಇದೆ.ಶ್ರೀ ಮುತ್ತಪ್ಪಸ್ವಾಮಿ ದೇವಾಲಯ ಆವರಣದಲ್ಲಿ ೯ ದೈವಗಳು ಇದ್ದು, ದಕ್ಷಿಣ ಕನ್ನಡ ಭಾಗದ ಜನತೆ ಭೂತಗಳೆಂದು, ಕೇರಳ ಭಾಗದ ಜನತೆ ತೈಯ್ಯಂ ಎಂದು ಕರೆಯುತ್ತಾರೆ. ಜಿಲ್ಲೆಯಲ್ಲಿ ವಾಸವಿರುವ ಕೇರಳ ಹಾಗೂ ತುಳುನಾಡಿನ ಜನರಿಗೆ ಈ ದೇವಾಲಯ ಪವಿತ್ರ ಸ್ಥಾನವಾಗಿದೆ.ಕ್ಷೇತ್ರದ ಇತಿಹಾಸ:
ಸೋಮವಾರಪೇಟೆಯ ಮುತ್ತಪ್ಪಸ್ವಾಮಿ ದೇವಾಲಯಕ್ಕೆ ಸುಮಾರು ೩೦೦ಕ್ಕೂ ಅಧಿಕ ವರ್ಷಗಳ ಇತಿಹಾಸವಿದ್ದು, ಪೂರ್ವದಲ್ಲಿ ಈ ಪ್ರದೇಶ ಕಾಡುಗಳಿಂದಾವೃತವಾಗಿದ್ದು, ಇಲ್ಲಿ ಋಷಿಗಳು ತಪಸ್ಸಿಗೆ ಕುಳಿತು, ಇಡೀ ಭುವನವನ್ನೆ ತನ್ನ ಅಧೀನದಲ್ಲಿಟ್ಟುಕೊಂಡಿದ್ದ ಶಕ್ತಿ ದೇವತೆ ಶ್ರೀ ಭುವನೇಶ್ವರಿಯ ವರಸಿದ್ಧಿಗಾಗಿ ತಪಸ್ಸು ಮಾಡಿ ಯಶಸ್ಸು ಕಂಡ ಪವಿತ್ರ ಸ್ಥಳ ಇದಾಗಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಅಧಿದೇವತೆ ಶ್ರೀ ಭುವನೇಶ್ವರಿ ಎಂದು ಪೂಜಿಸಲಾಗುತ್ತಿದೆ.ಸುಮಾರು ೧೦೦ ವರ್ಷಗಳ ಹಿಂದೆ ಬಡ ಕುಟುಂಬದಲ್ಲಿ ಜನಿಸಿದ ಪಕೀರ ಪೂಜಾರಿ ಎಂಬುವವರು ಒಂದು ಮರದ ಕೆಳಗೆ ಶ್ರೀ ಮುತ್ತಪ್ಪಸ್ವಾಮಿ ದೇವರ ಮೂರ್ತಿಯನ್ನು ಪೂಜಿಸಲು ಪ್ರಾರಂಭಿಸಿದರು ಎನ್ನಲಾಗುತ್ತಿದೆ. ವಾರ್ಷಿಕವಾಗಿ ಮುತ್ತಪ್ಪನಿಗೆ ಕೋಲ ಅರ್ಪಿಸಬೇಕೆಂಬ ಅಭಿಲಾಷೆಯನ್ನು ಇನ್ನಿತರ ಭಕ್ತರೊಂದಿಗೆ ವ್ಯಕ್ತಪಡಿಸಿದಾಗ, ಎಲ್ಲರ ಅಭಿಲಾಷೆಯಂತೆ ಒಂಬತ್ತು ದೈವಗಳ ಕೋಲ, ಪೂಜೆ ಅಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ಆಷಾಢ ಮಾಸದ ಒಂದು ತಿಂಗಳು ದುರ್ಗಾ ದೀಪ ನಮಸ್ಕಾರ ಪೂಜೆ, ನವರಾತ್ರಿ ಸಂದರ್ಭ ಒಂಬತ್ತು ದಿನದ ವಿಶೆಷ ಪೂಜೆಗಳು, ತಿಂಗಳ ಪ್ರತಿ ಆಶ್ಲೇಷ ನಕ್ಷತ್ರದಂದು ಬೆಳಿಗ್ಗೆ ನಾಗ ದೇವತೆಗಳಿಗೆ ಆಶ್ಲೇಷ ಪೂಜೆ, ಪ್ರತಿ ಸಂಕಷ್ಠಿಯ ದಿನದಂದು ಬೆಳಿಗ್ಗೆ ಸಂಕಷ್ಠಹರ ಗಣಪತಿ ಹೋಮ, ವರ್ಷದ ಮಂಡಲ ಪೂಜೆಯಂದು ಶ್ರೀ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆಗಳು, ಮಕರ ಸಂಕ್ರಾಂತಿಯಂದು ವಿಶೇಷ ಪೂಜೆ, ಮಾರ್ಚ್ ತಿಂಗಳಿನಲ್ಲಿ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸೇರಿದಂತೆ ವಿವಿಧ ಪೂಜೆಗಳು ಶೃದ್ಧಾ-ಭಕ್ತಿಯಿಂದ ಅದ್ದೂರಿಯಾಗಿ ನಡೆಯುತ್ತವೆ.ಇಂದಿನಿಂದ ವಾರ್ಷಿಕ ಜಾತ್ರೋತ್ಸವ:
ಮಾ. ೨೨ರಿಂದ ೨೪ರ ತನಕ ವಾರ್ಷಿಕ ಜಾತ್ರೋತ್ಸವ ಅದ್ದೂರಿಯಾಗಿ ನಡೆಯಲಿದೆ. ೨೨ರಂದು ಬೆಳಗ್ಗೆ ೫.೩೦ಕ್ಕೆ ತಂತ್ರಿಗಳಾದ ಕೃಷ್ಣಕುಮಾರ್ ತಾಂತ್ರಿಕತ್ವದಲ್ಲಿ ಗಣಪತಿ ಹೋಮದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ೨೩ರಂದು ಮಧ್ಯಾಹ್ನ ೧೨ ಗಂಟೆಗೆ ಜಾತ್ರೋತ್ಸವಕ್ಕೆ ಚಾಲನೆ ಸಿಗಲಿದೆ. ಶಾಸಕ ಡಾ. ಮಂತರ್ ಗೌಡ, ಮಾಜಿ ಸಚಿವ ಅಪ್ಪಚ್ಚು ರಂಜನ್, ಉದ್ಯಮಿಗಳಾದ ವಿ.ಎಂ. ವಿಜಯ, ಬಿ.ಎಸ್. ಸುಂದರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಪರಾಹ್ನ ೩.೩೦ಕ್ಕೆ ಶ್ರೀ ಮುತ್ತಪ್ಪನ್ ದೇವರ ವೆಳ್ಳಾಟಂ ಹಾಗೂ ಕೋಲ, ನೃತ್ಯ ಮಾಡಲಿವೆ. ಸಂಜೆ ೪.೩೦ಕ್ಕೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಲಶ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಮಾ. ೨೪ರಂದು ಜಾತ್ರೋತ್ಸವ ಮುಕ್ತಾಯವಾಗಲಿದೆ.ಕಳೆದ ೨೫ ವರ್ಷಗಳಿಂದ ಅದ್ದೂರಿ ಜಾತ್ರೋತ್ಸವ ನಡೆಯುತ್ತಿದೆ. ಕೋಲ ಕಟ್ಟಲು ಕೇರಳದಿಂದ ದೈವ ನರ್ತಕರನ್ನು ಕರೆಸಲಾಗುತ್ತಿದೆ. ದಾನಿಗಳ ಸಹಕಾರದಿಂದ ಈ ಕ್ಷೇತ್ರದ ಅಭಿವೃದ್ಧಿಯಾಗುತ್ತಿದೆ. ಅಧಿದೇವತೆ ಶ್ರೀ ಭುವನೇಶ್ವರಿಯ ಸನ್ನದಿ ಪುಣ್ಯ ಕ್ಷೇತ್ರವಾಗಿದೆ. ನಾಗಬನದಲ್ಲೂ ವಿಶೇಷ ಪೂಜೆ ನಡೆಯುತ್ತದೆ. ಪ್ರತಿಯೊಂದು ದೈವ ಕಾರ್ಯಗಳು, ದಾನಿಗಳ ಸಹಕಾರದಿಂದ ಪೂಜೆ ಹಾಗೂ ಅನ್ನದಾನ ಮಾಡಲಾಗುವುದು. ಇಂದಿನಿಂದ ಮೂರು ದಿನಗಳು ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ನಡೆಯಲಿದೆ.
-ಎನ್.ಡಿ. ವಿನೋದ್, ಅಧ್ಯಕ್ಷರು, ದೇವಾಲಯ ಸಮಿತಿಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಧನುರ್ಮಾಸದಲ್ಲಿ ಮಂಡಲ ಪೂಜೆ ನಡೆಯುತ್ತದೆ. ಶ್ರೀ ಭುವನೇಶ್ವರಿ ಸನ್ನಿದಿಯಲ್ಲಿ ಆಟಿ ಮಾಸದಲ್ಲಿ ಒಂದು ತಿಂಗಳ ದುರ್ಗಾದೀಪ ನಮಸ್ಕಾರ ಪೂಜೆ ನಡೆಯಲಿದೆ. ಗಣಪತಿ ಸನ್ನಿದಿಯಲ್ಲಿ ಸಂಕಷ್ಠಹರ ಗಣಪತಿ ಹೋಮ, ನಾಗ ದೇವತೆಗಳಿಗೆ ಪ್ರತಿ ತಿಂಗಳು ಆಶ್ಲೇಷ ಪೂಜೆ, ವಾರ್ಷಿಕ ಬಲಿಪೂಜೆ ನಡೆಯುತ್ತದೆ. -ಪ್ರಸನ್ನ ನಾಯರ್, ಕಾರ್ಯದರ್ಶಿ, ದೇವಾಲಯ ಸಮಿತಿ