ಸಾರಾಂಶ
ಶಿಕ್ಷಕ, ಹವ್ಯಾಸಿ ಸಂಶೋಧಕ ರಂಗಸ್ವಾಮಿಯವರಿಂದ ಅನ್ವೇಷಣೆ । ವಿಸ್ಮಯಕಾರಿಯಾಗಿರುವ ಪಂಚನಾಗಗಳ ಶಿಲ್ಪ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆತಾಲೂಕಿನ ಚಿಕ್ಕಳಲೆ ಗ್ರಾಮದ ಹೊರವಲಯದ ಬೇಚರಾಕ್ ಪ್ರದೇಶದಲ್ಲಿ ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿಶಿಷ್ಠ, ಅಪರೂಪದ ಪಂಚನಾಗಲಿಂಗ ಶಿಲ್ಪ ಪತ್ತೆಯಾಗಿದೆ.
ತಾಲೂಕಿನ ಸಂತೆಬಾಚಹಳ್ಳಿ ಶಿಕ್ಷಕ ಹಾಗೂ ಹವ್ಯಾಸಿ ಸಂಶೋಧಕ ರಂಗಸ್ವಾಮಿಯವರು, ಗಿಡಗಂಟೆ ಬೆಳೆದು ಜನರ ಕಣ್ಣಿನಿಂದ ಮರೆಯಾಗಿದ್ದ ಪಂಚನಾಗ ಶಿಲ್ಪವನ್ನು ಬೆಳಕಿಗೆ ತಂದಿದ್ದಾರೆ.ಸಾಮಾನ್ಯವಾಗಿ ಎಲ್ಲಾ ಶಿವಾಲಯಗಳಲ್ಲೂ ಕೇವಲ ಶಿವಲಿಂಗವನ್ನು ಮಾತ್ರ ಕಾಣಬಹುದು. ಆದರೆ, ಶಿವಾಲಯವಿಲ್ಲದಿದ್ದರೂ ಸಿಕ್ಕಿರುವ ಬಯಲು ಶಿವಲಿಂಗದ ಮೇಲೆ ಹೆಡೆಬಿಚ್ಚಿರುವ ಪಂಚನಾಗಗಳನ್ನು ಇಲ್ಲಿ ಕಾಣಬಹುದು.
ಪಂಚನಾಗ ಶಿವಲಿಂಗದ ಬಳಿಯೇ ಅತೀ ಪ್ರಾಚೀನ ಕಲ್ಯಾಣಿ ಇದೆ. ಒಂದು ಕಾಲದಲ್ಲಿ ಇದು ಪ್ರಮುಖ ಶೈವ ಕ್ಷೇತ್ರವಾಗಿರುವಂತೆ ಕಂಡು ಬರುತ್ತಿದೆ. ದೇವಾಲಯದ ಅಡಿಪಾಯದ ಮೇಲೆ ಪಂಚನಾಗಶಿಲ್ಪವಿದ್ದು ದೇವಾಲಯದ ಕುರುಹುಗಳು ಮಾಯವಾಗಿವೆ. ಪಂಚನಾಗಶಿಲ್ಪದ ಪ್ರದೇಶ ಸಂಪೂರ್ಣ ಮೆಳೆ ಮತ್ತು ಪೊದೆಗಳಿಂದ ಆವೃತವಾಗಿ ಗ್ರಾಮಸ್ಥರ ಕಣ್ಣಿಗೆ ಕಾಣದಂತಾಗಿತ್ತು.ಹವ್ಯಾಸಿ ಸಂಶೊಧಕ ಶಿಕ್ಷಕ ರಂಗಸ್ವಾಮಿಯು ಗ್ರಾಮ ದೇವತೆ ಚಿಕ್ಕಲಮ್ಮ ದೇವಸ್ಥಾನದ ಸಮೀಪದಲ್ಲಿ ಕಲ್ಯಾಣಿಯೊಂದನ್ನು ನೋಡಿ ಸುತ್ತಮುತ್ತಲಿನ ಪ್ರದೇಶವನ್ನು ಸ್ಥಳ ಪರಿಶೀಲನೆ ಮಾಡುವ ವೇಳೆ ಗಿಡಗಂಟಿಯೊಳಗೆ ಬೆಳೆದಿದ್ದ ದೊಡ್ಡ ಕಲ್ಲು ಕಾಣಿಸಿತು. ಗ್ರಾಮಸ್ಥರಾದ ಉಮೇಶ್ ಮತ್ತು ದೇವರಾಜು ಸಹಕಾರದಿಂದ ಆ ಸ್ಥಳವನ್ನು ಶುಚಿಗೊಳಿಸಿದಾಗ ಮಣ್ಣಿನಲ್ಲಿ ಹುದುಗಿ ಹೋಗಿದ್ದ ಪ್ರಾಚೀನ ಕಾಲದ ಹಾಗೂ ಕರ್ನಾಟಕದಲ್ಲಿ ಎಲ್ಲಿಯೂ ದೊರೆಯದ ಪಂಚ ಹೆಡೆಯ ನಾಗಲಿಂಗ ಶಿಲ್ಪವು ಪತ್ತೆಯಾಯಿತು.
ಏಕಶಿಲೆಯಲ್ಲಿ ಐದು ಹೆಡೆಗಳುಳ್ಳ ಸರ್ಪವು ಲಿಂಗವನ್ನು ರಕ್ಷಿಸುತ್ತಿರುವ ಅಪರೂಪದ ಶಿಲ್ಪಕಲಾಕೃತಿ ಇದಾಗಿದೆ. ಪ್ರಾಚೀನ ಕಾಲದ ಪಂಚ ನಾಗಲಿಂಗ ಶಿಲ್ಪದ ಬಗ್ಗೆ ಇತಿಹಾಸಕಾರರಾದ ಸ್ವಾಮಿನಾಥನ್, ನಟರಾಜನ್ ಮತ್ತು ಶಶಿಧರ್ ಅವರೊಂದಿಗೆ ಹಂಚಿಕೊಂಡಾಗ ಇದೊಂದು ವಿಶೇಷ ಹಾಗೂ ಅಪರೂಪದ ಶಿಲ್ಪ ಎಂದು ಅದರ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.ಗ್ರಾಮದ ಬಳಿ ಇರುವ ಇಳಿಜಾರು ಮೆಟ್ಟಿಲನ್ನು ಹೊಂದಿರುವ ಒಳಹಂತವನ್ನು ಹೊಂದಿರುವ 120*120 ಅಳತೆಯ ವಿಶಿಷ್ಠ ಕಲ್ಯಾಣಿಯ ನೀರಿನಲ್ಲಿ ನೀಳುವ ಸೂರ್ಯನ ಕಿರಣಗಳು ಪಂಚ ನಾಗಲಿಂಗ ಶಿಲ್ಪಕ್ಕೆ ಬೆಳಕನ್ನು ನೀಡುವಂತೆ ರಚಿಸಲಾಗಿರುವ ಈ ಅಪರೂಪದ ಕಲಾಕೃತಿ ಗ್ರಾಮದ ಜನರನ್ನು ಬೆರಗುಗೊಳಿಸಿದೆ.
ಈ ವಿಚಾರವನ್ನು ಶಿಕ್ಷಕ ರಂಗಸ್ವಾಮಿಯು ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಅವರಿಗೆ ತಿಳಿಸಿದಾಗ, ನಮ್ಮ ಇತಿಹಾಸವನ್ನು ಪ್ರತಿಬಿಂಬಿಸುವ ಹಾಗೂ ಕಾಲಗರ್ಭದಲ್ಲಿ ಅಡಗಿ ಹೋಗಿರುವ ಅಪರೂಪದ ಕಲಾಕೃತಿಗಳನ್ನು ಹೊರ ತೆಗೆಯಲು ನಮ್ಮ ಸಹಕಾರವಿದೆ ಎಂದು ತಿಳಿಸಿ ಕೂಡಲೇ ಗ್ರಾಪಂ ಸಿಬ್ಬಂದಿಯನ್ನು ಕಳುಹಿಸಿಕೊಟ್ಟು ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ತೆರವು ಮಾಡಿಸಿದ್ದಾರೆ.- ಎಸ್.ರಂಗಸ್ವಾಮಿ, ಹವ್ಯಾಸಿ ಇತಿಹಾಸ ಸಂಶೋಧಕ.
‘ಇತಿಹಾಸ ಪರಂಪರೆ ಉಳಿಸುವ ನಿಟ್ಟಿನಲ್ಲಿ ಬಿಡುವಿನ ವೇಳೆಯಲ್ಲಿ ಪಾರಂಪರಿಕ ಪಳಿಯುಳಿಕೆಗಳನ್ನು ಗುಹೆಗಳು, ಮಣ್ಣಿನೊಳಗೆ ಅಡಗಿ ಹೋಗಿರುವ ನೂರಾರು ಬಗೆಯ ಪ್ರಾಚೀನ ಶಾಸನಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದೇನೆ. ಗುಲ್ಬರ್ಗ ಜಿಲ್ಲೆಯ ಸನ್ನತಿ ಗ್ರಾಮದಲ್ಲಿ ಅಶೋಕನ ಕಾಲದ ನಾಗಶಿಲ್ಪ ಮಾತ್ರ ದೊರಕಿತ್ತು. ಈಗ ನಮ್ಮ ತಾಲೂಕಿನಲ್ಲಿ ನಾಗಲಿಂಗ ವಿಗ್ರಹ ದೊರಕಿರುವುದು ವಿಶೇಷ’.