ಅರಸು ರಾಜ್ಯ ಕಂಡ ಅಪರೂಪದ ರಾಜಕಾರಣಿ: ರವಿ ಕಲ್ಲಂಬಿ

| Published : Aug 21 2025, 01:00 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರಾಜ್ಯ ಕಂಡ ಅಪರೂಪದ ರಾಜಕಾರಣಿಯಾಗಿದ್ದು, ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಜಾರಿಗೆ ತಂದ ಕಾಯ್ದೆಗಳು ಅಜರಾಮರ ಎಂದು ಉಪನ್ಯಾಸಕ ರವಿ ಕಲ್ಲಂಬಿ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರಾಜ್ಯ ಕಂಡ ಅಪರೂಪದ ರಾಜಕಾರಣಿಯಾಗಿದ್ದು, ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಜಾರಿಗೆ ತಂದ ಕಾಯ್ದೆಗಳು ಅಜರಾಮರ ಎಂದು ಉಪನ್ಯಾಸಕ ರವಿ ಕಲ್ಲಂಬಿ ಹೇಳಿದರು.

ಬುಧವಾರ ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಿ. ದೇವರಾಜ ಅರಸುರವರ ೧೧೦ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ದೇವರಾಜ ಅರಸು ಅವರು ಅಧಿಕಾರಕ್ಕೆ ಬರುವವರೆಗೂ ಹಿಂದುಳಿದ ವರ್ಗದವರಿಗೆ ಮೀಸಲಾತಿ ಇರಲಿಲ್ಲ. ಹಾವನೂರು ಆಯೋಗ ವರದಿ ತರಿಸಿ ಮೀಸಲಾತಿ ಜಾರಿ ಮಾಡಿದರು. ದಲಿತರು, ಬಡವರು, ಹಿಂದುಳಿದ ವರ್ಗದವರಿಗೆ ವಸತಿ ನಿಲಯಗಳನ್ನು ಸ್ಥಾಪಿಸಿ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಮಲ ಹೊರುವ ಪದ್ದತಿ ನಿಲ್ಲಿಸುವ ಮೂಲಕ ಜೀತಪದ್ದತಿಗೆ ಮಂಗಳ ಹಾಡಿದರು. ಈ ನಿಟ್ಟಿನಲ್ಲಿ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರರೆಂದು ಕರೆಯುತ್ತೇವೆ. ಉಳುವವನೇ ಹೊಲದ ಒಡೆಯ ಕಾಯ್ದೆ ಜಾರಿಗೆ ತಂದು ರೈತರ ಬಾಳಿಗೆ ಆಶಾಕಿರಣರಾದರು ಎಂದರು.

ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್, ಪುರಸಭೆ ಸದಸ್ಯ ಎಂ.ಡಿ. ಉಮೇಶ್ ಮಾತನಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿ.ಯು.ಸಿ. ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಿರಿಯ ಮೇಲ್ವೀಚಾರಕರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷ ಪ್ರಭುಮೇಸ್ತೀ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಟಿ.ಎಸ್. ಮೀನಾಕ್ಷಿ, ತಾಪಂ ಇಒ ಕೆ.ಜಿ. ಶಶಿಧರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್, ಬಿಇಒ ಆರ್. ಪುಷ್ಪಾ, ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ನಾಗರಾಜ ಅನ್ವೇಕರ್, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಎಸ್. ಚಿದಾನಂದ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು. ಶಂಕರ್ ಗುರು ಸ್ವಾಗತಿಸಿ, ಎಸ್. ನಾಗರಾಜಪ್ಪ ವಂದಿಸಿದರು. ಫಕ್ಕೀರೇಶ್ ಅರಳೀಕಟ್ಟಿ ನಿರೂಪಿಸಿದರು.