ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಗ್ರಾಮ ಸ್ವರಾಜ್ ಪರಿಕಲ್ಪನೆಯೊಂದಿಗೆ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಮುಂದಿನ ೧೫ ವರ್ಷದಲ್ಲಿ ಪಾಂಡವಪುರ ಪಟ್ಟಣಗಳು ಹೇಗಿರಬೇಕು. ಕೃಷಿ ಹಾಗೂ ಬೆಳೆ ಪದ್ಧತಿಯಲ್ಲಿ ಏನೆಲ್ಲಾ ಬದಲಾವಣೆಯಾಗಬೇಕು. ಸ್ವಾವಲಂಬಿ ಜೀವನ ಕಂಡುಕೊಳ್ಳುವುದು ಹೇಗೆ. ಮಕ್ಕಳ ಶಿಕ್ಷಣ ವ್ಯವಸ್ಥೆ ಯಾವ ರೀತಿ ಇರಬೇಕು. ಮಾದರಿ ಗ್ರಾಮ ಏನೆಲ್ಲವನ್ನೂ ಒಳಗೊಂಡಿರಬೇಕು. ಸ್ವ-ಉದ್ಯೋಗ ಸೃಷ್ಟಿಸಿಕೊಳ್ಳುವುದು ಹೇಗೆ. ಮಹಿಳಾ ಸಬಲೀಕರಣ ಯಾವ ರೀತಿ ಆಗಬೇಕು ಎಂಬೆಲ್ಲಾ ಪರಿಕಲ್ಪನೆಗಳೊಂದಿಗೆ ಗ್ರಾಮ ಸ್ವರಾಜ್ಯದ ಸಾಕ್ಷಾತ್ ದರ್ಶನವನ್ನು ಮಾಡಿಸಿರುವವರು ಪಾಂಡವಪುರ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ.
ರೈತರು, ಯುವಕರು, ಮಹಿಳೆಯರು, ಗ್ರಾಮೀಣಾಭಿವೃದ್ಧಿ, ಕೃಷಿ, ಗ್ರಾಮಗಳನ್ನು ಮುಖ್ಯ ಗುರಿಯಾಗಿಸಿಕೊಂಡು ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವರಾಜ್ ಉತ್ಸವ ಎಲ್ಲರನ್ನೂ ಬಹುವಾಗಿ ಆಕರ್ಷಿಸಿತು.ಬೆಳೆಯಣ್ಣ ಸಿರಿಧಾನ್ಯ ದೊರೆಯುವುದು ಸಿರಿತನ, ವೈವಿಧ್ಯಮಯ ಬೆಳೆಯೇ ರೈತರ ಬದುಕು ಬದಲಿಸುವುದು, ಅಳವಡಿಸಿದರೆ ವೈವಿಧ್ಯ ಬೆಳೆಯ ಕೃಷಿ ಸಿಗುವುದು ಬೆಳೆಗೆ ತಕ್ಕ ಬೆಲೆ, ಮಾಡಿರಿ ಬಹು ಅಂತಸ್ತಿನ ಕೃಷಿ ಪಡೆಯಿರಿ ಹಂತ ಹಂತವಾಗಿ ಖುಷಿ ಎಂಬೆಲ್ಲಾ ಘೋಷ ವಾಕ್ಯಗಳೊಂದಿಗೆ ರೈತರಿಗೆ ಉತ್ತೇಜನ ನೀಡುವಂತೆ ಬೆಳೆ ಪದ್ಧತಿ, ಕೃಷಿ ವಿಧಾನ, ಒಂದು ಗ್ರಾಮದ ಆರ್ಥಿಕತೆ, ಖರ್ಚು, ಕೃಷಿ ಆದಾಯ, ಲಾಭ-ನಷ್ಟದ ಲೆಕ್ಕಾಚಾರದ ಸಂಪೂರ್ಣ ಮಾಹಿತಿಯನ್ನು ಮಳಿಗೆಗಳಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಭತ್ತವನ್ನು ಏಕಬೆಳೆಯಾಗಿ ಮಾತ್ರ ಬೆಳೆಯದೆ ತೆವರಿಯ ಮೇಲೆ ಬೆಳೆಯಬಹುದಾದ ತೆಂಗು, ಅಡಿಕೆ, ಹಣ್ಣಿನ ಗಿಡಗಳು, ಧಾನ್ಯಗಳನ್ನು ಬೆಳೆಯುವ ಮಾದರಿಗಳನ್ನು ಅಲ್ಲಿರಿಸಲಾಗಿತ್ತು.
ಮಣ್ಣು ಮತ್ತು ಮನುಷ್ಯರಿಗೆ ಹೆಚ್ಚಿನ ಪೋಷಣೆ, ಉತ್ತಮ ಆರೋಗ್ಯ, ಸ್ವಾವಲಂಬನೆಗೆ ಬಲ, ಕಡಿಮೆ ವೆಚ್ಚ, ಹೆಚ್ಚಿನ ಮಾರುಕಟ್ಟೆ ಬೆಲೆ ರೈತರಿಗೆ ಲಾಭದಾಯಕತೆ ಸೃಷ್ಟಿಯಾಗಬೇಕಾದರೆ ಸಾವಯವ, ನೈಸರ್ಗಿಕ ಕೃಷಿಯನ್ನು ಅವಲಂಬಿಸಬೇಕು. ಬಹುಸ್ತರದ ಬೆಳೆ ಪದ್ಧತಿ, ಅರಣ್ಯ ಅಂಶಗಳನ್ನು ಕೃಷಿ ವ್ಯವಸ್ಥೆಗೆ ಅಳವಡಿಸಿಕೊಳ್ಳುವುದು ನೆಲದ ನಿರಂತರ ಹೊದಿಕೆ, ಪಶು-ಪಕ್ಷಿಗಳನ್ನು ಒಳಗೊಂಡ ಕೃಷಿ ವ್ಯವಸ್ಥೆ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಭೂಮಿಗೆ ಉಣಿಸದೆ ನೈಸರ್ಗಿಕ ಗೊಬ್ಬರದಿಂದ ಕೀಟ, ರೋಗ ನಿರ್ವಹಣೆ ಮಾಡುವ ವಿಧಾನಗಳನ್ನು ಮಾಹಿತಿ ಸಹಿತ ಒದಗಿಸಲಾಗಿತ್ತು.ಬೆಳೆಯಲ್ಲಿ ವೈವಿಧ್ಯತೆಯನ್ನು ನಿರಂತರವಾಗಿ ತಂದುಕೊಂಡರೆ ಆದಾಯ, ಪೌಷ್ಟಿಕಾಂಶ ಹೆಚ್ಚುತ್ತದೆ. ಸ್ಥಳೀಯ ಮಾರುಕಟ್ಟೆಗಳನ್ನು ರಚಿಸಿ ವರ್ಷಪೂರ್ತಿ ಸ್ಥಿರವಾದ ಬೆಲೆ ಪಡೆಯಬಹುದು. ಸ್ವಲ್ಪ ಸ್ಥಳದಲ್ಲೇ ಹೆಚ್ಚು ಮೌಲ್ಯ ತರುವ ಬೆಳೆಗಳು ಯಾವುವು, ಕಚ್ಛಾ ಉತ್ಪನ್ನಗಳನ್ನು ಸ್ಥಳೀಯವಾಗಿ ಸಂಸ್ಕರಿಸಿ ಗ್ರಾಮದಲ್ಲೇ ಮೌಲ್ಯವರ್ಧನೆ ಮತ್ತು ಮಾರಾಟ, ಹಳ್ಳಿಗಳಲ್ಲಿ ವಿಷಮುಕ್ತ ಆಹಾರಕ್ಕಾಗಿ ಬೇಡಿಕೆಯನ್ನು ಪೂರೈಸಲು ಪಾಕ್ಸ್, ಎಸ್‌ಎಚ್‌ಜಿ, ಎಫ್‌ಪಿಒಗಳು ಸ್ಥಳೀಯ ಮಾರುಕಟ್ಟೆಗಳಲ್ಲಿ ತೊಡಗಿಕೊಳ್ಳುವಂತೆ ಸಲಹೆಗಳನ್ನು ನೀಡಲಾಗಿತ್ತು.
ಗ್ರಾಮ ಸ್ವರಾಜ್ಯದ ಕಲ್ಪನೆಗಳನ್ನೆಲ್ಲಾ ಸಾಕಾರಗೊಳಿಸುವ ರೀತಿಯಲ್ಲಿ ೬೦ ಮಳಿಗೆಗಳಲ್ಲಿ ಪ್ರದರ್ಶನವನ್ನು ಇರಿಸಲಾಗಿತ್ತು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾವಿರಾರು ಸಂಖ್ಯೆಯ ಜನರು ದಿನವಿಡೀ ಸ್ವರಾಜ್ ಉತ್ಸವವನ್ನು ವೀಕ್ಷಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಯೋಜಿಸಿರುವ ಅಪರೂಪದ ಸ್ವರಾಜ್ ದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.೨೦೪೦ಕ್ಕೆ ಪಾಂಡವಪುರ ಹೇಗಿರಬೇಕೆಂಬ ಪರಿಕಲ್ಪನೆಪಾಂಡವಪುರ ೨೦೪೦ಕ್ಕೆ ಹೇಗಿರಬೇಕು ಎಂಬ ಬಗ್ಗೆ ಇಡೀ ಕ್ಷೇತ್ರದ ಗೂಗಲ್ ಮ್ಯಾಪ್ ಚಾರ್ಟ್‌ನ್ನು ಮಳಿಗೆಯೊಂದರಲ್ಲಿ ಹಾಕಲಾಗಿತ್ತು. ವೀಕ್ಷಣೆಗೆ ಬರುವವರಿಂದ ಎಲ್ಲೆಲ್ಲಿ ಏನೇನು ವಿಶೇಷತೆಗಳಿರಬೇಕು ಎಂಬುದನ್ನು ಅವರಿಂದಲೇ ಬರೆಸುತ್ತಿದ್ದರು. ದಂತ ವೈದ್ಯಕೀಯ ಕಾಲೇಜು, ಅರಣ್ಯಾಭಿವೃದ್ಧಿ, ಕೆರೆಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣಾ ಘಟಕಗಳು, ಆಸ್ಪತ್ರೆ ಹೀಗೆ ಜನರು ನೀಡಿದ ಹಲವಾರು ಸಲಹೆಗಳನ್ನು ಚೀಟಿಗಳಲ್ಲಿ ಬರೆದು ಚಾರ್ಟ್‌ಗೆ ಅಂಟಿಸಲಾಗುತ್ತಿತ್ತು.
ಪಟ್ಟಣದ ವಿದ್ಯುತ್ ಕೇಬಲ್, ಕೊಳಾಯಿ ಸಂಪರ್ಕ, ಗ್ಯಾಸ್ ಸಂಪರ್ಕ, ಚರಂಡಿ, ಒಳಚರಂಡಿ ವ್ಯವಸ್ಥೆ ಹೇಗಿರಬೇಕು. ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವುದು ಹೇಗೆ. ಮಾದರಿ ಗ್ರಾಮದೊಳಗೆ ಏನೆಲ್ಲಾ ಮೂಲ ಸೌಕರ್ಯಗಳಿರಬೇಕು, ಅಲ್ಲಿನ ಕೃಷಿ ವ್ಯವಸ್ಥೆ, ಹೈನುಗಾರಿಕೆ, ಭೂಮಿಯ ಸಂರಕ್ಷಣೆ ಹೀಗೆ ಎಲ್ಲವನ್ನು ಮಾದರಿಗಳ ರೂಪದಲ್ಲಿರಿಸಿ ನೋಡುಗರ ಕಣ್ಣಿಗೆ ಕಟ್ಟಿಕೊಡಲಾಗಿತ್ತು.ಪಾಂಡವಪುರ ಪಟ್ಟಣದಲ್ಲಿರುವ ಮುಖ್ಯ ಸಮಸ್ಯೆಗಳು ಯಾವುದು. ಯಾವುದನ್ನು ಪ್ರಧಾನ ಸಮಸ್ಯೆಗಳಾಗಿ ಪರಿಗಣಿಸಬೇಕು. ಅದಕ್ಕೆ ಪರಿಹಾರ ಹೇಗಿರಬೇಕು ಎಂಬ ಬಗ್ಗೆ ಸರ್ವೇ ನಡೆಸಿ ಮುಖ್ಯ ಐದು ಸಮಸ್ಯೆಗಳಲ್ಲಿ ಪ್ರಧಾನವಾದ ಎರಡು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಪ್ರಯತ್ನಿಸಿದರೂ ಶಾಶ್ವತ ಪರಿಹಾರ ದೊರಕಿಸಬಹುದು ಎಂಬುದರ ಬಗ್ಗೆ ಎನ್‌ಜಿಒ ಪ್ರತಿನಿಧಿಗಳು ತಿಳಿಸಿಕೊಡುತ್ತಿದ್ದರು.
ಕ್ಯಾತನಹಳ್ಳಿ ಮಾದರಿ ಗ್ರಾಮವಾಗುವುದಕ್ಕೆ ಕೈಗೊಳ್ಳಲಾಗಿರುವ ಕ್ರಮಗಳು, ಮೇಲುಕೋಟೆ ಅಭಿವೃದ್ಧಿ ಹೇಗಿರಬೇಕೆಂಬುದಕ್ಕೆ ಒಂದು ಮಾಸ್ಟರ್ ಪ್ಲಾನ್, ಸಮಗ್ರ ಕೃಷಿ, ಜೈವಿಕ ಕೃಷಿ, ನೇಚರ್‌ಫಾರ್ಮ್‌ನ ವಿಧಾನಗಳು, ನೂರಾರು ಮಾದರಿಯ ತೋಟಗಾರಿಕೆ, ದ್ವಿದಳಧಾನ್ಯ, ಭತ್ತ, ರಾಗಿ, ಮೆಕ್ಕೆಜೋಳ, ಸಿರಿಧಾನ್ಯದ ವಿವಿಧ ಬೆಳೆಗಳನ್ನು ಮಳಿಗೆಗಳಲ್ಲಿ ಇಡಲಾಗಿತ್ತು. ಇಂಗ್ಲಿಷ್ ಕಲಿಕೆಗೆ ಅಲೆಕ್ಸಾ ಡಿವೈಸ್ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಇಂಗ್ಲಿಷ್ ಕಲಿಯುವುದಕ್ಕೆ ಅಲೆಕ್ಸಾ ಡಿವೈಸ್‌ನ್ನು ನೀಡುವುದು ಇದರ ಮೂಲಕ ಎಂಟು ಹಂತಗಳಲ್ಲಿ ಸಂಪೂರ್ಣವಾಗಿ ಇಂಗ್ಲಿಷ್ ಕಲಿತು ಮಾತನಾಡುವ ಕೌಶಲ್ಯ ಸಾಧಿಸಬಹುದು. ಒಂದನೇ ತರಗತಿಯಿಂದ ಪಿಯುಸಿವರೆಗೂ ಕಲಿಯುವುದಕ್ಕೆ ಪೂರಕ ಅವಕಾಶವಿದೆ. ಡಿವೈಸ್ ಮೂಲಕ ತಂತಾನೇ ಪ್ರಶ್ನೆ ಮಾಡುತ್ತದೆ. ನೀವು ಕೊಡುವ ಉತ್ತರ ಸರಿಯಾಗಿದ್ದರೆ ಧನ್ಯವಾದ ಹೇಳುತ್ತದೆ. ತಪ್ಪಿದ್ದರೆ ಅದೇ ತಿದ್ದಿ ಹೇಳುತ್ತದೆ. ಇದನ್ನು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಲ್ಯಾಬ್ ಸೃಷ್ಟಿಸಿ ಮಕ್ಕಳಿಗೆ ಇಂಗ್ಲಿಷ್ ಜ್ಞಾನವನ್ನು ಹೆಚ್ಚಿಸುವ ಪ್ರಯತ್ನ ನಡೆಸಲಾಗಿದೆ.
ಇದರ ಜೊತೆಗೆ ತ್ರೀಡಿ ಪ್ರಿಂಟರ್ ಮೂಲಕ ಮಕ್ಕಳು ಬಣ್ಣ ಬಣ್ಣದ ಚಿತ್ರಗಳನ್ನು ರಚನೆ ಮಾಡುವುದು, ತ್ರೀ-ಡಿ ಮಿಷನ್ ಮೂಲಕ ನಮಗೆ ಬೇಕಾದ ಆಕಾರದ ಆಕೃತಿಯನ್ನು ರಚಿಸಿಕೊಂಡು ಕೀ-ಬಂಚ್ ತಯಾರಿಸಬಹುದು. ಇದನ್ನು ಸ್ವ-ಉದ್ಯೋಗವಾಗಿಯೂ ಕಂಡುಕೊಳ್ಳಬಹುದು ಎಂಬ ಬಗ್ಗೆ ಸ್ಥಳದಲ್ಲೇ ಪ್ರಾತ್ಯಕ್ಷಿಕೆಯನ್ನೂ ನೀಡಲಾಗುತ್ತಿತ್ತು.ಜಿಲ್ಲೆಯಲ್ಲಿ ಬೆಳೆಗಳ ಇಳುವರಿ ಕುಸಿತಕಳೆದೊಂದು ದಶಕದಲ್ಲಿ ಮಂಡ್ಯದಲ್ಲಿ ಭತ್ತ ಪ್ರತಿ ಎಕರೆಗೆ ೬.೯ ಕ್ವಿಂಟಾಲ್, ಕಬ್ಬು ೫.೮ ಟನ್, ರಾಗಿ ೧.೮ ಕ್ವಿಂಟಾಲ್, ತೆಂಗು ಪ್ರತಿ ಎಕರೆಗೆ ೧೫೭೮ ಕಾಯಿಗಳು ಕಡಿಮೆಯಾಗಿದ್ದು, ಇದರಿಂದ ರೈತರಿಗೆ ೭೦೦ ಕೋಟಿ ರು. ನಷ್ಟವಾಗಿರುವುದನ್ನು ಚಿತ್ರಸಹಿತ ವಿವರಣೆ ನೀಡಲಾಗಿತ್ತು. ಮಣ್ಣಿನ ಆರೋಗ್ಯ ಮತ್ತು ಭೂತಾಯಿಯನ್ನು ನಿರ್ಲಕ್ಷ್ಯ ಮಾಡಿರುವುದೇ ಇದಕ್ಕೆ ಕಾರಣವೆಂಬುದನ್ನು ಪ್ರತಿಬಿಂಬಿಸುವಂತೆ ತೋರಿಸಲಾಗಿತ್ತು.ಮೂರು ಪಟ್ಟು ಹೆಚ್ಚು ರೈತರ ಆತ್ಮಹತ್ಯೆ
ಮಂಡ್ಯದಲ್ಲಿ ಏಕಬೆಳೆ ಪದ್ಧತಿ ಅನುಸರಿಸುವುದರಿಂದ ಮಣ್ಣಿನ ಸವಕಳಿ, ಹೆಚ್ಚಿನ ಕೀಟಬಾಧೆ, ಜನರಲ್ಲಿ ಅಪೌಷ್ಟಿಕತೆ, ಪ್ರತಿಕೂಲ ಹವಾಮಾನ ಬೆಳೆ ನಷ್ಟಗಳಿಗೆ ಕಾರಣವಾಗಿದೆ. ೨೦೦೩-೨೦೧೮ರ ನಡುವೆ ನಡೆದ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪಾಂಡವಪುರ ನೆರೆಯ ತಾಲೂಕುಗಳಿಂದ ಮೂರುಪಟ್ಟು ಹೆಚ್ಚಿನ ಆತ್ಮಹತ್ಯೆಗಳನ್ನು ಕಂಡಿದೆ. ಜಿಲ್ಲೆಯ ಅಧ್ಯಯನವೊಂದರಲ್ಲಿ ಪ್ರತಿ ಕುಟುಂಬಕ್ಕೆ ೧.೮ ಲಕ್ಷ ಸಾಲವಿದೆ. ಇನ್ನೊಂದು ಅಧ್ಯಯನದಲ್ಲಿ ಹಳ್ಳಿಯಿಂದ ವಲಸೆಹೋದ ರೈತರ ತಲಾದಾಯ ಊರಿನಲ್ಲಿರುವ ರೈತರಿಗಿಂತ ಕಡಿಮೆ ಎಂದು ತಿಳಿದುಬಂದಿದೆ. ಪಾಂಡವಪುರದಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಶೇ.೮೮ ಪ್ರತಿಶತ ಕುಟುಂಬಗಳಿಗೆ ೨.೫ ಲಕ್ಷ ರು. ಸಾಲವಿರುವ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗಿತ್ತು.ಜನರು ಏನಂತಾರೆ..?ಗ್ರಾಮ ಸ್ವರಾಜ್ ಕಲ್ಪನೆ ಅದ್ಭುತವಾಗಿದೆ. ಸುಸ್ಥಿತರ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನೆಲ್ಲಾ ಅಳವಡಿಸಿಕೊಳ್ಳಬಹುದೆಂಬ ಬಗ್ಗೆ ಉತ್ತಮವಾಗಿ ಚಿತ್ರಿಸಿ ವಿವರಣೆ ನೀಡಲಾಗಿದೆ. ಸ್ವಾವಲಂಬಿ ಹಳ್ಳಿಗಳು ಹೇಗಿರಬೇಕೆಂಬ ಪರಿಕಲ್ಪನೆ ಉತ್ತಮವಾಗಿದೆ. ಅಭಿವೃದ್ಧಿ ಕುರಿತಂತೆ ದೂರದೃಷ್ಟಿ ಸ್ಪಷ್ಟವಾಗಿದೆ. ಅದು ಸಾಕಾರಗೊಳ್ಳುವುದಕ್ಕೆ ಸರ್ಕಾರವೂ ನೆರವಿಗೆ ಬರಬೇಕಿದೆ.
- ಮಹೇಶ್‌ಚಂದ್ರಗುರು, ಸಂಸ್ಥಾಪಕರು, ವಿಕಸನ ಸಂಸ್ಥೆಸ್ವ-ಉದ್ಯೋಗ ಕಂಡುಕೊಳ್ಳುವ ಮಹಿಳೆಯರಿಗೆ ತುಂಬಾ ಉಪಯೋಗಕಾರಿ. ಮಹಿಳೆಯರು ಏನೆಲ್ಲಾ ಉತ್ಪನ್ನಗಳನ್ನು ತಯಾರಿಸಬಹುದು ಮಾರುಕಟ್ಟೆ ಹೇಗೆ ಸೃಷ್ಟಿಸಿಕೊಳ್ಳಬಹುದು ಎಂಬ ಬಗ್ಗೆ ಅರ್ಥಪೂರ್ಣವಾಗಿ ವಿವರಣೆ ನೀಡಲಾಗುತ್ತಿದೆ. ನಾನೂ ಕೂಡ ಸ್ಥಳೀಯವಾಗಿ ಏನಾದರೊಂದು ಉದ್ಯೋಗ ಮಾಡಬೇಕೆಂಬ ಆಸೆ ಚಿಗುರೊಡೆದಿದೆ.- ಅಕ್ಷತಾ, ಗೃಹಿಣಿಕೃಷಿಯಲ್ಲಿ ಏನೆಲ್ಲಾ ಬದಲಾವಣೆಗಳನ್ನು ತಂದುಕೊಳ್ಳಲು ಸಾಧ್ಯವಿದೆ. ಬಹುಬೆಳೆಯ ಪದ್ಧತಿಯನ್ನು ಬೆಳೆಯುವ ಬಗೆ. ಅದರ ಮಾರುಕಟ್ಟೆ, ಬೆಲೆ, ಲಾಭಾಂಶ ಸೃಷ್ಟಿ ಇದರ ಬಗ್ಗೆ ಅರಿವನ್ನು ನೀಡಲಾಗುತ್ತಿದೆ. ಮಾಹಿತಿಯ ಕಣಜವನ್ನೇ ತೆರೆದಿಡಲಾಗಿದೆ. ಗ್ರಾಪಂ ವ್ಯವಸ್ಥೆ ಹೇಗಿರಬೇಕು, ಆಡಳಿತ ಯಾವ ರೀತಿ ನಡೆಯಬೇಕು. ತಾಂತ್ರಿಕತೆ ಹೇಗಿರಬೇಕೆಂಬ ವಿವರಣೆ ಉತ್ತಮವಾಗಿದೆ.
- ಗೀತಾ, ಅಂತರವಳ್ಳಿನಾನು ಹಾಲಿ ಮೇಕೆ ಫಾರಂ ಮಾಡಿದ್ದೇನೆ. ಸಬ್ಸಿಡಿ ಸಿಕ್ಕರೆ ಕುರಿ, ಹಸು ಫಾರಂ ಮಾಡಬೇಕೆಂಬ ಆಸೆ ಇದೆ. ಸ್ವರಾಜ್ ಉತ್ಸವದಿಂದ ಸಾಕಷ್ಟು ಮಾಹಿತಿ, ಜ್ಞಾನ ದೊರಕಿದೆ. ಇದುವರೆಗೆ ಯಾರೂ ಸಹ ಇಂತಹದೊಂದು ಉತ್ಸವ ಮಾಡಿರಲಿಲ್ಲ. ಇದು ರೈತರಿಗೆ, ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ನೋಡಿ ತಿಳಿದುಕೊಳ್ಳಬೇಕಾದ ಉತ್ಸವವಾಗಿದೆ.- ಕಾವ್ಯ, ರಾಗಿಮುದ್ದನಹಳ್ಳಿ